ಇತ್ತೀಚಿನ ಸುದ್ದಿ
ಹೊಳ್ಳರಬೈಲು: ಶ್ರಾವ್ಯ ಗೋಕುಲ ಗೋ ಮಂದಿರ ಉದ್ಘಾಟನಾ ಸಮಾರಂಭ
16/05/2023, 22:32
ಬಂಟ್ವಾಳ(reporterkarnataka.com) : ಸನಾತನ ಹಿಂದೂ ಧರ್ಮದಲ್ಲಿ ಎಲ್ಲಾ ದೇವತೆ ಗಳ ಸನ್ನಿದಾನವಿರುವುದು ಕಾಮಧೇನುವಾದ ಗೋವಿನಲ್ಲಿ, ಇಡೀ ಸಮಾಜವನ್ನು ಸಂರಕ್ಷಣೆ ಮಾಡುವ ಕಾರ್ಯವನ್ನು ಗೋ ಮಾತೆ ಮಾಡುತ್ತಾಳೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ್ಯ ಗೋ ಸೇವಾ ಸಂಯೋಜಕರಾದ ಪ್ರವೀಣ ಸರಳಾಯ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಹೊಳ್ಳರಬೈಲು ನಾರಾಯಣ ಹೊಳ್ಳರ ನೇತೃತ್ವದಲ್ಲಿ ಶ್ರೀ ಭಕ್ತಿ ಭೂಷಣ್ ಪ್ರಭುರವರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ ಕಾರ್ಯಕ್ರಮದೊಂದಿಗೆ ಮೇ 14ರಂದು ಆದಿತ್ಯವಾರ ನೂತನವಾಗಿ ಪ್ರಾರಂಭಗೊಂಡ “ಶ್ರಾವ್ಯ ಗೋಕುಲ ಗೋ ಮಂದಿರ”ದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.
ಸಮಸ್ತ ಜನರ ಕಾಮನೆಗಳನ್ನು ಪೂರೈಸಿ ಲೋಕಪಾಲನೆ ಮಾಡುವ ಗೋವು ಲಕ್ಷ್ಮಿ ಸ್ವರೂಪಿ, ನಡೆದಾಡುವ ಔಷದಾಲಯವಾಗಿ , ಪ್ರಕೃತಿಯ ನೆಲ ಜಲ ಅರಣ್ಯ ಎಲ್ಲದಕ್ಕೂ ಮೂಲ ಸೆಲೆ ಈ ಗೋ ಮಾತೆ. ಗೋ ಸಂಪತ್ತನ್ನು ಉಳಿಸಿ ಬೆಳೆಸುವ ಕಾರ್ಯ ಇಂದು ನಡೆದಿದೆ, ಮುಂದಿನ ದಿನಗಳಲ್ಲಿ ಈ ಮಂದಿರವು ಶಕ್ತಿಕೇಂದ್ರವಾಗಿ ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ಹೇಳಿದರು ,
ಮಾರ್ಗದರ್ಶನ ನೀಡಿದ ಭಕ್ತಿಭೂಷಣ ದಾಸ್, ಇಂದು ನಾವು ಗೋ ಆಧಾರಿತ ಕೃಷಿ ಹಾಗೂ ಗುರುಕುಲ ಶಿಕ್ಷಣ ಪದ್ಧತಿಯಿಂದ ವಿಮುಖರಾಗುತ್ತಿದ್ದೇವೆ, ಗೋ ಉತ್ಪನ್ನಗಳನ್ನು ಬಳಸುದರಿಂದ ಗೋ ಸಂಪತ್ತು ವೃದ್ಧಿಯಾಗಿ ಅರೋಗ್ಯ ಪೂರ್ಣ ಜೀವನ ನಡೆಸಲು ಸಾಧ್ಯ,ಧರ್ಮ ಕಾರ್ಯದಲ್ಲಿ ನಾರಾಯಣ ಹೊಳ್ಳರ ಮೌನ ಸಾಧನೆ ಸಮಾಜಕ್ಕೆ ಪ್ರೇರಣೆಯಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಗೋ ಮಂದಿರದ ವ್ಯವಸ್ಥಾಪಕರಾದ ನಾರಾಯಣ ಹೊಳ್ಳ, ಗೋ ಸೇವಾ ಸಹ ಸಂಯೋಜಕರಾದ ಗಂಗಾಧರ್ ಪೆರ್ಮಂಕಿ, ಉಪಸ್ಥಿತರಿದ್ದರು. ಪ್ರಮುಖರಾದ ಜ್ಯೋತಿದ್ರ ಶೆಟ್ಟಿ ಮುಂಡಾಜೆ, ನವೀನ್ ಶೆಟ್ಟಿ ಮುಂಡಾಜೆ, ಜನಾರ್ಧನ ಸಾಲ್ಯಾನ್ ದರಿಬಾಗಿಲು,ಯೋಗೀಶ್ ರಾವ್, ಪುರುಷೋತ್ತಮ ಕೊಟ್ಟಾರಿ, ರಘುನಾಥ್ ಸಪಲ್ಯ, ಲಿಂಗಪ್ಪ ಮೂಲ್ಯ ಹಾಗೂ ಹೊಳ್ಳರಬೈಲ್ ಫ್ರೆಂಡ್ಸ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷರಾದ ರಾಘವೇಂದ್ರ ಹೊಳ್ಳ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು, ಹಿಂ ಜಾ ವೇ ಜಿಲ್ಲಾಧ್ಯಕ್ಷರಾದ ಜಗದೀಶ್ ಬಂಗೇರ ಹೊಳ್ಳರಬೈಲು ಧನ್ಯವಾದವಿತ್ತರು.
ಪ್ರಕೃತಿದತ್ತ ಪರಿಸರದಲ್ಲಿ ಗೋ ಮಂದಿರ :
ಪ್ರಕೃತಿ ರಮಣೀಯ ಹಚ್ಚ ಹಸಿರಿನ ಪರಿಸರದಲ್ಲಿ ಸುಮಾರು 1500 ಚದರ ವಿಸ್ತೀರ್ಣದಲ್ಲಿ ಗೋ ಮಂದಿರ ನಿರ್ಮಾಣವಾಗಿದ್ದು ಮಂದಿರದ ಪ್ರವೇಶ ದ್ವಾರದಲ್ಲಿ ರಾಧಾ ಕೃಷ್ಣರ ಮೂರ್ತಿಯು ಕಣ್ಮನ ಸೆಳೆಯುತ್ತಿದೆ. ಪ್ರಸ್ತುತ 12 ದೇಶಿಯ ತಳಿಯ ಗೋವುಗಳಿದ್ದು ನಿರ್ವಹಣೆಗೆ ಗೋ ಪಾಲಕರಿದ್ದು, ಗೋ ಪಾಲಕರ ವಾಸ್ತವ್ಯಕ್ಕೆ ಗೋ ಮಂದಿರದ ಪಕ್ಕದಲ್ಲಿಯೇ ಸುಸಜ್ಜಿತ ನಿವೇಶನ ನಿರ್ಮಿಸಲಾಗಿದೆ.