ಇತ್ತೀಚಿನ ಸುದ್ದಿ
ಭಜರಂಗದಳ ನಿಷೇಧ ಘೋಷಣೆಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ
06/05/2023, 20:19
ಪುತ್ತೂರು(reporterkarnataka.com): ಪುತ್ತೂರು ಜನರಿಗೆ ನನ್ನ ನಮಸ್ಕಾರಗಳು ಎಂದು ಮಾತು ಆರಂಭಿಸಿದ ಅವರು, ಪರುಶುರಾಮನ ಸನ್ನಿಧಿಗೆ ಬಂದಷ್ಟು ಖುಷಿ ಆಗಿದೆ. ಬಜರಂಗ ದಳವನ್ನು ನಿಷೇಧ ಮಾಡುವ ಘೋಷಣೆಗೆ ಮತದಾರರು ತಕ್ಕ ಉತ್ತರ ನೀಡಬೇಕು. ಡಬಲ್ ಎಂಜಿನ್ ಸರ್ಕಾರವು ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಅವರು ಶನಿವಾರ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ
ಇಲ್ಲಿನ ಮಹಾಲಿಂಗೇಶ್ವರ ದೇವಳದಿಂದ ಭರ್ಜರಿ ರೋಡ್ ಶೋ ಆರಂಭಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೇ ರಾಷ್ಟ್ರ ಭಕ್ತರ ಬಜರಂಗ ದಳ ನಿಷೇಧ ಮಾಡುವುದಾಗಿ ಘೋಷಣೆ ಮಾಡುತ್ತಿದೆ. ದೇಶದ್ರೋಹಿಗಳಿಗೆ ಇಂಬು ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ಸುರಕ್ಷಿತವಾಗಿದೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಆಗುತ್ತಿದೆ. ರಾಜ್ಯದಲ್ಲಿ ಬಿಎಸ್ ವೈ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರವು ಉತ್ತಮ ಆಡಳಿತ ನೀಡುತ್ತಿದೆ. ಪಿಎಫ್ ಐ ಬ್ಯಾನ್ ಮಾಡುವ ಮೂಲಕ ದೇಶ ರಕ್ಷಣೆಗೆ ಡಬಲ್ ಎಂಜಿನ್ ಸರ್ಕಾರ ಕೆಲಸ ಮಾಡುತ್ತಿದೆ. ಕಾಂಗ್ರೆಸ್, ಜೆಡಿಎಸ್ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಗೆ ಮತ ಹಾಕುವ ಮೂಲಕ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ನಿಗದಿತ ಸಮಯಕ್ಕಿಂತ ಸುಮಾರು 2 ತಾಸು ವಿಳಂಬವಾಗಿ ಯೋಗಿ ಆದಿತ್ಯನಾಥ್ ಅವರು ಪುತ್ತೂರಿಗೆ ಎಂಟ್ರಿ ಕೊಟ್ಟರು. ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಉತ್ತರ ಪ್ರದೇಶದ ಮುಖ್ಯಮಂತ್ರಿಯ ಆಗಮನವಾಗುತ್ತಿದ್ದಂತೆ ನೆರೆದ ಭಾರೀ ಜನಸ್ತೋಮ ಘೋಷಣೆಗಳನ್ನು ಕೂಗಿದರು. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಅವರು ಬಿಜೆಪಿ ಅಭ್ಯರ್ಥಿ ಮತ್ತು ಪ್ರಮುಖರ ಜತೆಗೆ ರ್‍ಯಾಲಿಯಲ್ಲಿ ಪಾಲ್ಗೊಂಡರು.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು.