ಇತ್ತೀಚಿನ ಸುದ್ದಿ
ಅಮ್ತಿ ಹೊಳೆಕೂಡಿಗೆ ಮಲೆಕುಡಿಯ ಕುಟುಂಬ ಗಳಿಂದ ಚುನಾವಣೆ ಬಹಿಷ್ಕಾರ: ರಸ್ತೆ ಇಲ್ಲದೇ ಹಲವು ವರ್ಷಗಳಿಂದ ತೆಪ್ಪದಲ್ಲಿ ಸಂಚಾರ!
04/05/2023, 21:34
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ರಸ್ತೆ ಸೌಕರ್ಯ ಕಲ್ಪಿಸದೇ ಇರುವುದರಿಂದ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲು ಕೊಟ್ಟಿಗೆರೆ ಸಮೀಪದ ಅಮ್ತಿ ಹೊಳೆಕೂಡಿಗೆ ಗ್ರಾಮದ ಮಲೆಕುಡಿಯ ಕುಟುಂಬಗಳು ನಿರ್ಧರಿಸಿವೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮಲೆಕುಡಿಯ ಕುಟುಂಬದ ಮುಖ್ಯಸ್ಥ ಸತೀಶ್, ಕೂವೆ ಸಮೀಪ ಅಮ್ತಿ ಹೊಳೆಕೂಡಿಗೆಯಲ್ಲಿ ನಾಲ್ಕು ಮಲೆಕುಡಿಯ ಕುಟುಂಬಗಳು ವಾಸವಾಗಿದ್ದು ಮನೆಗಳ ಸುತ್ತ ಭದ್ರಾನದಿ ಆವರಿಸಿರುವುದರಿಂದ ಮುಖ್ಯ ರಸ್ತೆಗೆ ಸಂಪರ್ಕ ಇಲ್ಲದಂತಾಗಿದೆ. ಮನೆ ಕಟ್ಟಲು ಮರಳು, ಇಟ್ಟಿಗೆ ಮುಂತಾದ ಕಚ್ಚಾವಸ್ತುಗಳನ್ನು ತೆಪ್ಪದಲ್ಲೆ ತರಬೇಕಾಗಿದೆ.
೨೦೧೫ ರಿಂದ ರಸ್ತೆಗಾಗಿ ಹೋರಾಟ ಮಾಡಿಕೊಂಡು ಬಂದಿದ್ದರೂ ರಸ್ತೆ ಅಥವಾ ತೂಗು ಸೇತುವೆ ನಿರ್ಮಾಣವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಬಂದರೂ ಕೇವಲ ಭರವಸೆ ನೀಡಿ ಹೋಗುತ್ತಾರೆ. ಜನಪ್ರತಿನಿಧಿಗಳ, ಅಧಿಕಾರಿಗಳ ಭರವಸೆ ಕೇಳಿ ಸಾಕಾಗಿದೆ. ಆದ್ದರಿಂದ ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.