ಇತ್ತೀಚಿನ ಸುದ್ದಿ
ಕಾಂಗ್ರೆಸ್ ತ್ಯಜಿಸುವುದಕ್ಕಿಂತ 5 ದಿನಗಳ ಮುನ್ನವೇ ಮೊಯ್ದೀನ್ ಬಾವಾಗೆ ಜೆಡಿಎಸ್ ಪಕ್ಷದ ಬಿ ಫಾರ್ಮ್ ದೊರಕಿತ್ತೇ? ಇದು ನಿಜವೇ?
02/05/2023, 11:15
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಮಂಗಳೂರು ಉತ್ತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳುವ 5 ದಿನಗಳ ಮುನ್ನವೇ ಅವರಿಗೆ ಜಾತ್ಯತೀತ ಜನತಾ ದಳ (ಜೆಡಿಎಸ್) ಪಕ್ಷದ ಬಿ ಫಾರ್ಮ್ ದೊರಕಿತ್ತೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ಸಂಬಂಧಿಸಿದಂತೆ ಮಾಜಿ ಶಾಸಕ ಮೊಯ್ದೀನ್ ಬಾವಾ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ನಡುವೆ ಆರಂಭದಿಂದಲೇ ತೀವ್ರ ಪೈಪೋಟಿ ನಡೆದಿತ್ತು. ಇಷ್ಟೇ ಅಲ್ಲದೆ ಮಾಜಿ ಕಾರ್ಪೊರೇಟರ್ ಗಳು ಸೇರಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಕಡಿಮೆ ಒಂದು ಡಜನ್ ಆಕಾಂಕ್ಷಿಗಳಿದ್ದರು. ಕಾಂಗ್ರೆಸ್ ಪಕ್ಷದ ಒಂದು ಮೂಲಗಳ ಪ್ರಕಾರ ಬಾವಾ ಅವರ ಬೆಂಬಲಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಂತಿದ್ದರೆ, ಇನಾಯತ್ ಆಲಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬೆಂಬಲವಿತ್ತು. ಇಬ್ಬರು ಅಭ್ಯರ್ಥಿಗಳ ನಡುವೆ ಟಿಕೆಟ್ ಗಾಗಿ ಹಗ್ಗ ಜಗ್ಗಾಟ ತೀವ್ರವಾಗಿಯೇ ಇತ್ತು. ಅದೇನಿದ್ದರೂ ಟಿಕೆಟ್ ಬಹುತೇಕ ಬಾವಾ ಅವರಿಗೆ ಫಿಕ್ಸ್ ಆಗಿತ್ತು. ಆದರೂ ಮೊಯ್ದೀನ್ ಬಾವಾ ಅವರಲ್ಲಿ ಏನೋ ತಳಮಳ. ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಿಂದ ಹೊಸ ಮುಖಗಳನ್ನು ಅಖಾಡಕ್ಕಿಳಿಸುತ್ತಾರೆ ಎಂಬ ಸುದ್ದಿಯಿಂದ ಮೊಯ್ದೀನ್ ಬಾವಾ ಅವರು ವಿಚಲಿತರಾಗಿದ್ದರು. ತನಗೆ ಕಾಂಗ್ರೆಸ್ ಟಿಕೆಟ್ ಸಿಗಲಾರದೇನೋ ಎಂಬ ಭಯ ಬಾವಾ ಅವರಲ್ಲಿ ಕಾಡಿತ್ತು. ಈ ಕಾರಣದಿಂದಲೇ ಬಾವಾ ಅವರು ಟಿಕೆಟ್ ಗಾಗಿ ಸಾಕಷ್ಟು ಮಂದಿ ಕಾಂಗ್ರೆಸ್ ದಿಗ್ಗಜರ ಮೊರೆ ಹೋಗಿದ್ದರು. ಜೆಡಿಎಸ್ ನ ನಾಯಕರೊಬ್ಬರಿಂದಲೂ ಕಾಂಗ್ರೆಸ್ ವರಿಷ್ಠರಿಗೆ ಕರೆ ಮಾಡಿಸಿ, ಕಾಂಗ್ರೆಸ್ ಟಿಕೆಟ್ ಕೊಡಿಸುವಂತೆ ಒತ್ತಡ ಕೂಡ ಹೇರಿದ್ದರು ಎಂಬ ಮಾಹಿತಿ ಕೂಡ ಇದೆ. ಇನ್ನೊಂದು ಕಡೆ ಅಕಸ್ಮಾತ್ ಕಾಂಗ್ರೆಸ್ ಟಿಕೆಟ್ ಕೈತಪ್ಪಿದರೆ ತಕ್ಷಣ ಜೆಡಿಎಸ್ ಸೇರಲು ಎಲ್ಲ ರೀತಿಯಲ್ಲಿ ಸನ್ನದ್ಧರಾಗಿದ್ದರು. ಬಾವಾ ಅವರ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಬಿ. ಎಂ. ಫಾರೂಕ್ ಅವರು ಜೆಡಿಎಸ್ ನ ಸರ್ವೋಚ್ಚ ನಾಯಕ ಎಚ್.ಡಿ.ದೇವೇಗೌಡರ ಆಪ್ತ ಬಳಗದವರಾಗಿರುವುದರಿಂದ ಬಾವಾ ಅವರಿಗೆ ಇದೆಲ್ಲ ಕಷ್ಟ ಸಾಧ್ಯವಾಗಿರಲಿಲ್ಲ. ಹಾಗೆ ಬಾವಾ ಅವರು ಕಾಂಗ್ರೆಸ್ ತೊರೆಯುವುದಕ್ಕೆ 5 ದಿನಗಳ ಮುನ್ನವೇ ಜೆಡಿಎಸ್ ನ ಬಿ ಫಾರ್ಮ್ ಅವರ ಕೈ ಸೇರಿತ್ತು ಎಂಬ ಮಾಹಿತಿ ಇದೆ.
ಕಾಂಗ್ರೆಸ್ ಪಕ್ಷವು ಮಂಗಳೂರು ಉತ್ತರದ ಟಿಕೆಟನ್ನು ಕೊನೆಯ ಕ್ಷಣದಲ್ಲಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ಮುನ್ನ ದಿನ ರಾತ್ರಿ ವೇಳೆ ಘೋಷಿಸಿತ್ತು. ಆದರೂ ರಾತ್ರಿ ಬೆಳಗಾಗುವುದರೊಳಗೆ ಮೊಯ್ದೀನ್ ಬಾವಾ ಅವರಿಗೆ ಜೆಡಿಎಸ್ ಬಿ ಫಾರ್ಮ್ ಲಭ್ಯವಾಗಿತ್ತು ಎನ್ನುವುದೇ ಕುತೂಹಲದ ವಿಷಯ.
ದೇವೇಗೌಡ ಅವರಿಗೆ ಬಿ.ಎಂ. ಫಾರೂಕ್ ಪರಮಾಪ್ತರ ಆಗಿರುವುದರಿಂದಲೇ 90ರ ಹರೆಯದ, ಆರೋಗ್ಯದ ಸಮಸ್ಯೆ ಇರುವ ಮಾಜಿ ಪ್ರಧಾನಿ ದೇವೇ ಗೌಡರನ್ನು ಸೋಮವಾರ ಸುರತ್ಕಲ್ ಗೆ ಕರೆಸಿ, ಬಾವಾ ಪರ ಮತಯಾಚನೆ ಮಾಡಿಸಲು ಸಾಧ್ಯವಾಯಿತು. ದೇವೇಗೌಡ ಅವರು ಮಂಗಳೂರು ಉತ್ತರ ಕ್ಷೇತ್ರ ಬಿಟ್ಟು ಬೇರೆ ಕಡೆ ಸುಳಿಯದಂತೆಯೂ ನೋಡಿಕೊಳ್ಳಲಾಯಿತು. ಜಿಲ್ಲೆಯ ಇತರ 6 ಕ್ಷೇತ್ರಗಳ(ಮಂಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿಲ್ಲ)
ಜೆಡಿಎಸ್ ಅಭ್ಯರ್ಥಿಗಳನ್ನು ಸುರತ್ಕಲ್ ಗೆ ಕರೆಸಿ ದೇವೇಗೌಡ, ಮೊಯ್ದೀನ್ ಬಾವಾ ಹಾಗೂ ಬಿ.ಎಂ. ಫಾರೂಕ್ ಅವರ ಹಿಂದೆ ನಿಲ್ಲಿಸಿ ಮಾಧ್ಯಮದವರಿಗೆ ಪರಿಚಯಿಸಲಾಯಿತು. ಇವರಲ್ಲಿ ಜೆಡಿಎಸ್ ಗಾಗಿ ಜಿಲ್ಲೆಯಲ್ಲಿ ಕೊನೆಯುಸಿರು ಇರುವವರೆಗೂ ದುಡಿದಿದ್ದ ಮಹಾನ್ ನಾಯಕ ಕೆ. ಅಮರನಾಥ ಶೆಟ್ಟಿ ಅವರ ಪುತ್ರಿ ಡಾ. ಅಮರಶ್ರೀ ಕೂಡ ಇದ್ದರು.