ಇತ್ತೀಚಿನ ಸುದ್ದಿ
ಸುಸ್ಥಿರ, ಸುವ್ಯಸ್ಥಿತ ಸಮನ್ವಯದ ಅಭಿವೃದ್ಧಿಗಾಗಿ ಬಿಜೆಪಿಗೆ ಜನಾದೇಶ ಖಚಿತ: ಗೋಪಾಲಕೃಷ್ಣ ಅಗರ್ವಾಲ್
01/05/2023, 21:38
ಮಂಗಳೂರು(reporterkarnataka.com): ಸುಸ್ಥಿರ, ಸುವ್ಯವಸ್ಥಿತ ಮತ್ತು ಸಮನ್ವಯದ ಅಭಿವೃದ್ಧಿ ಕಾರ್ಯಗಳಿಗಾಗಿ ಕರ್ನಾಟಕದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರಕಾರವನ್ನು ಪುನರಾಯ್ಕೆ ಮಾಡುವುದು ನಿಶ್ಚಿತವಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೋಪಾಲಕೃಷ್ಣ ಅಗರ್ವಾಲ್ ಪ್ರತಿಪಾದಿಸಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವನ್ನು 5 ಟ್ರಿಲಿಯನ್ ಡಾಲರ್ ಗಾತ್ರದ ಅರ್ಥವ್ಯವಸ್ಥೆಯನ್ನಾಗಿ ಅಭಿವೃದ್ಧಿಪಡಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಮಹತ್ವಾಕಾಂಕ್ಷೆಗೆ ಸಾಥ್ ನೀಡಲು ರಾಜ್ಯಗಳಲ್ಲಿ ಬಿಜೆಪಿಯ ಸರಕಾರಗಳೇ ಅಧಿಕಾರಕ್ಕೆ ಬರಬೇಕು. ಅನ್ಯಪಕ್ಷಗಳ ಸರಕಾರಗಳಿದ್ದಲ್ಲಿ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ಆಗದೆ, ಜನತೆಗೆ ಸೌಲಭ್ಯಗಳು ದೊರಕದಂತಾಗುತ್ತದೆ. ಬಿಜೆಪಿ ನೇತೃತ್ವದ ಸರಕಾರಗಳೇ ಇರುವ ರಾಜ್ಯಗಳಲ್ಲಿ ಕೇಂದ್ರದ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಪ್ರಮಾಣ ಶೇ 90ಕ್ಕೂ ಅಧಿಕವಾಗಿದೆ. ಆದರೆ ಅನ್ಯಪಕ್ಷಗಳ ಸರಕಾರಗಳಿರುವ ರಾಜ್ಯಗಳಲ್ಲಿ ಈ ಪ್ರಮಾಣ ಸರಾಸರಿ ಶೇ 30ರಿಂದ 50ರ ನಡುವೆ ಇದೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದರು.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಸರಕಾರದಿಂದ ಬರುವ 6,000 ರೂ.ಗಳಿಗೆ ರಾಜ್ಯ ಸರಕಾರವು ಮತ್ತೆ 4,000 ರೂ.ಗಳನ್ನು ಸೇರಿಸಿ ಒಟ್ಟು 10,000 ರೂ,ಗಳನ್ನು ಅರ್ಹ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪ ಸರಕಾರ ಬಂದ ನಂತರ ಈ ಯೋಜನೆಯ ಅನುಷ್ಠಾಣ ಪೂರ್ಣ ಪ್ರಮಾಣದಲ್ಲಿ ಆಯಿತು. ಹಿಂದಿನ ಸಿದ್ದರಾಮಯ್ಯ ಸರಕಾರ ಇದರ ಅನುಷ್ಠಾನಕ್ಕೆ ತಡೆಯೊಡ್ಡಿತ್ತು ಎಂದು ಅಗರ್ವಾಲ್ ನುಡಿದರು.
ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕರ್ನಾಟಕದಲ್ಲಿ ಶೇ 94ರಷ್ಟು ಅನುಷ್ಠಾನವಾಗಿದ್ದರೆ ಕಮ್ಯುನಿಸ್ಟ್ ಆಡಳಿತವಿರುವ ಪಕ್ಕದ ಕೇರಳದಲ್ಲಿ ಕೇವಲ ಶೇ 56ರಷ್ಟು ಮಾತ್ರ ಜಾರಿಯಾಗಿದೆ. ಅದೇ ರೀತಿ ಹರ್ ಘರ್ ಜಲ್ ಯೋಜನೆ ಕರ್ನಾಟಕದಲ್ಲಿ ಶೇ 57, ಕೇರಳದಲ್ಲಿ ಶೇ 47, ಬಂಗಾಳದಲ್ಲಿ ಶೇ 32 ಅನುಷ್ಠಾನವಾಗಿದದ್ದರೆ ಗುಜರಾತ್‌ನಲ್ಲಿ ಶೇ 100ರಷ್ಟು ಅನುಷ್ಠಾನಗೊಂಡಿದೆ ಎಂದು ಅವರು ವಿವರಿಸಿದರು.
ದೇಶದ ಒಟ್ಟಾರೆ ಎಫ್‌ಡಿಐ ಆಕರ್ಷಣೆಯಲ್ಲಿ ಶೇ 38ರಷ್ಟು ಪಾಲು ಕರ್ನಾಟಕಕ್ಕೆ ದೊರೆತಿದೆ. ಕರ್ನಾಟಕದ ತಲಾವಾರು ವಾರ್ಷಿಕ ಆದಾಯ 2,78,000 ರೂ. ಆಗಿದೆ. ಇದು ಕೇಂದ್ರದ ಸರಾಸರಿಗಿಂತಲೂ ಅಧಿಕವಿದೆ. ಹಣದುಬ್ಬರ ಪ್ರಮಾಣ ಕೂಡ ಕರ್ನಾಟಕದಲ್ಲಿ ಕಡಿಮೆಯಿದ್ದು, 5 ಟ್ರಿಲಿಯನ್ ಡಾಲರ್ ಮಹತ್ವಾಕಾಂಕ್ಷೆಗೆ ಕರ್ನಾಟಕದ ಪಾಲು 1 ಟ್ರಿಲಿಯನ್ (ಶೇ 20) ನಷ್ಟಿದೆ ಎಂದು ಅವರು ನುಡಿದರು.
ಉತ್ತಮ ಆಡಳಿತ, ಸಾಮಾಜಿಕ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಬದ್ಧತೆ, ಅಭಿವೃದ್ಧಿಗೆ ಪೂರಕವಾಆದ ಪರಿಸರ (ಇಕೋ ಸಿಸ್ಟಮ್) ನಿರ್ಮಾಣ, ಸೋರಿಕೆಯಿಲ್ಲದಂತೆ (ಲೀಕೇಜ್ ಪ್ರೂಫ್) ಸರಕಾರದ ಕೊಡುಗೆಗಳು ಫಲಾನುಭವಿಗಳಿಗೆ ತಲುಪುವ ವ್ಯವಸ್ಥೆ, ಬಂಡವಾಳ ಹೂಡಿಕೆಗೆ ಪೂರಕವಾಗಿ ರಸ್ತೆ, ರೈಲು ಮೆಟ್ರೋ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ, ಅಂತ್ಯೋದಯ ಯೋಜನೆಗಳು- ಇವೆಲ್ಲವೂ ಬಿಜೆಪಿಯ ಡಬಲ್ ಎಂಜಿನ್ ಸರಕಾರದಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿವೆ.
ಈಸ್ ಆಫ್ ಲಿವಿಂಗ್, ಕಾನೂನು ಮತ್ತು ಸುವ್ಯಸ್ಥೆಯ ಪಾಲನೆ, ಅಭಿವೃದ್ಧಿಪರ ಚಟುವಟಿಕೆಗಳು ಸ್ಥಿರ ಹಾಗೂ ಬಲಿಷ್ಠ ಸರಕಾರದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಬಿಜೆಪಿಯ ಬದ್ಧತೆಯನ್ನು ನಾಡಿನ ಜನತೆ ಮನಗಂಡಿದೆ. ಹೀಗಾಗಿ ಕರ್ನಾಟಕದ ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ಪೂರ್ಣ ಬಹುಮತದ ಜನಾದೇಶ ಬರುವುದು ನಿಶ್ಚಿತವಾಗಿದೆ ಎಂದು ಅಗರ್ವಾಲ್ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನ ಗ್ಯಾರಂಟಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈಡೇರಿಸಲಾಗದ ಸುಳ್ಳು ಭರವಸೆಗಳನ್ನು ನೀಡಿ ಜನತೆಯ ದಾರಿ ತಪ್ಪಿಸುವುದು ಕಾಂಗ್ರೆಸ್ ಮೊದಲಿನಿಂದಲೂ ಅನುಸರಿಸಿಕೊಂಡು ಬರುತ್ತಿರುವ ತಂತ್ರ. ಅಧಿಕಾರಕ್ಕೆ ಬಂದ ನಂತರ ಯಾವ ಗ್ಯಾರಮಟಿಯನ್ನೂ ಪೂರೈಸಲಾಗದೆ ಜನತೆಗೆ ಮಂಕುಬೂದಿ ಎರಚುವುದು ಅದರ ಸ್ವಭಾವ. ರಾಜಸ್ಥಾನ, ಹಿಮಾಚಲ ಪ್ರದೇಶದಂತಹ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ದೇಶದ ಜನರಿಗೆ ಅರಿವಾಗಿದೆ. ಹೀಗಾಗಿ ಕಾಂಗ್ರೆಸ್‌ನ ಸುಳ್ಳು ಗ್ಯಾರಂಟಿಗಳನ್ನು ಯಾರೂ ನಂಬುವುದಿಲ್ಲ ಎಂದವರು ನುಡಿದರು.
ಪ್ರಧಾನಿ ಮೋದಿ ಅವರ ವಿರುದ್ಧ ನಿಂದನೆ ನಡೆಸುವುದೇ ಕಾಂಗ್ರೆಸ್ ಮುಖಂಡರ ಕಾಯಕವಾಗಿದ್ದು, ವಿದೇಶಗಳಲ್ಲಿ ಭಾರತವನ್ನು ತೆಗಳುವುದು ಆ ಪಕ್ಷದ ನಾಯಕರ ಅಜೆಂಡಾ. ಆಆದರೆ ಅವರು ಎಷ್ಟೇ ಕೆಸರು ಎರಚಿದರೂ ಬಿಜೆಪಿಯ ಬೆಳವಣಿಗೆಯನ್ನು ತಡೆಯಲಾಗದು ಎಂದು ಅಗಗರ್ವಾಲ್ ಹೇಳಿದರು.
ಕರ್ನಾಟಕದ ಸಿರಿಧಾನ್ಯಗಳನ್ನು ಜಾಗತಿಕ ಮಾರುಕಟ್ಟೆಗೆ ಒಯ್ದಿರುವುದು ಬಿಜೆಪಿ ಸರಕಾರದ ಪ್ರಗತಿಪರ ಕೃಷಿ ನೀತಿಗೆ ಸಾಕ್ಷಿಯಾಗಿದೆ. ಕರಾವಳಿ ಕರ್ನಾಟಕವು ಶಿಕ್ಷಣ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ದೇಶದಲ್ಲೇ ನಂ.1 ಆಗಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳನ್ನು ಹೊಂದಿದೆ ಎಂದು ಅವರು ವಿವರಿಸಿದರು.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಇಂದು ಬಿಡುಗಡೆ ಮಾಡಿರುವ ಪ್ರಣಾಳಿಕೆ ಅತ್ಯಂತ ಜನೋಪಯೋಗಿಯಾಗಿ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿದೆ. ಬಿಪಿಎಲ್ ಕುಟುಂಬಗಳಿಗೆ ಯುಗಾದಿ, ಗಣೇಶ ಚತುರ್ಥಿ ಮತ್ತು ದದೀಪಾವಳಿಗೆ 3 ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಪ್ರತಿವರ್ಷ ಒದಗಿಸಲಾಗುತ್ತದೆ. ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯಕರ ಆಹಾರ ಒದಗಿಸಲು ಪ್ರತಿ ಮಹಾನಗರ ಪಾಲಿಕೆಯ ವಾರ್ಡ್ಗಳಲ್ಲಿ ಅಟಲ್ ಆಹಾರ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಅವರು ನುಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ರಾಜ್ಯ ಮಾಧ್ಯಮ ಪ್ಯಾನೆಲಿಸ್ಟ್ ಆನಂದ ಗುರುಮೂರ್ತಿ, ಆರ್ಥಿಕ ಪ್ರಕೋಷ್ಟದ ಶಾಂತಾರಾಂ ಶೆಟ್ಟಿ, ರಾಜೇಶ್ ರಾವ್ ಹಾಗೂ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ ಉಪಸ್ಥಿತರಿದ್ದರು.