ಇತ್ತೀಚಿನ ಸುದ್ದಿ
ಸಂಗೀತ ಪರಂಪರೆ ಉಳಿಸಲು ಹಲವು ಯೋಜನೆ: ಬಂಟ್ವಾಳ ಸಂಗೀತ ಪರಿಷತ್ ಸಭೆಯಲ್ಲಿ ನಿರ್ಣಯ
30/04/2023, 12:39
ಬಂಟ್ವಾಳ(reporterkarnataka.com): ಸಂಗೀತ ಪರಂಪರೆಯ ಉಳಿವಿಗಾಗಿ ಸಾರ್ವಜನಿಕ ರ ಗಮನ ಸೆಳೆಯುವಂತಾಗಲು, ಸಂಗೀತ ಶ್ರೋತೃಗಳನ್ನು ಸೃಷ್ಟಿಸಿ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಂಗೀತ ಪರಿಷತ್ ಬಂಟ್ವಾಳ ಇದರ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಂಗೀತ ಪರಿಷತ್ ಬಂಟ್ವಾಳ ಹಾಗೂ ಸರ್ಗಂ ಸಂಗೀತ ಶಾಲೆಯ ಜಂಟಿ ಆಶ್ರಯದಲ್ಲಿ ನಡೆದ ಸಭಾ ವೇದಿಕೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಡಾ. ಎಂ.ಎಸ್. ಭಟ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಡಾ. ಎನ್. ಸೋಮಶೇಖರ ಮಯ್ಯ , ಡಾ. ಗಣೇಶ್ ಬಾಳಿಗ, ವಕೀಲರಾದ ಅಜಿತ್ ಕುಮಾರ್, ಅನಿತಾ ಪ್ರಭು ಮೊದಲಾದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರು.
ಬಂಟ್ವಾಳ ತಾಲೂಕಿನಾದ್ಯಾಂತ ತೆರೆಯ ಮರೆಯಲ್ಲಿ ಉಳಿದಿರುವ ಪ್ರತಿಭಾವಂತ ಬಾಲ/ ಯುವ ವೃಂದ ದವರಿಗಾಗಿ ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತ ಸ್ಪರ್ಧೆ ಗಳನ್ನು ನಡೆಸುವುದು, ಸಂಗೀತ ಪ್ರಾತ್ಯಕ್ಷಿಕೆಯು ಅಪರೂಪವಾಗುತ್ತಿರೋ ಈ ಕಾಲಘಟ್ಟದಲ್ಲಿ ಜನಪ್ರಿಯ ಕಲಾವಿದರಿಂದ ಸಂಗೀತದ ಮಹತ್ವ ಬಗ್ಗೆ ಉಪನ್ಯಾಸ ದೊಂದಿಗೆ ಸಂಗೀತ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ನಿಯೋಜಿಸುವುದು ಸೂಕ್ತವಿರುವುದಾಗಿ ಅಭಿಪ್ರಾಯಪಡಲಾಗಿ ನಿರ್ಣಯ ಕೈಗೊಳ್ಳಲಾಯಿತು.