3:23 AM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ತುಷ್ಟೀಕರಣರಹಿತ ಅಭಿವೃದ್ಧಿ ನೀತಿಯೇ ಮುಸ್ಲಿಂ ಸಮುದಾಯಕ್ಕೆ ಶ್ರೀರಕ್ಷೆ: ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ. ಸೈಯದ್ ಝಾಫರ್ ಇಸ್ಲಾಂ

29/04/2023, 20:35

ಮಂಗಳೂರು(reporterkarnataka.com): ತುಷ್ಟೀಕರಣದ ನೀತಿಯೊಂದಿಗೆ ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯವನ್ನು ಮತ ಬ್ಯಾಂಕ್ ಆಗಿ ಪರಿವರ್ತಿಸಿ ಅಭಿವೃದ್ಧಿಯ ಆಯಾಮಗಳಿಂದ ಹೊರಗಿಟ್ಟಿರುವುದೇ ನಮ್ಮ ಸಮುದಾಯದ ಇಂದಿನ ಪರಿಸ್ಥಿತಿಗೆ ಕಾರಣ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಸೈಯದ್ ಝಾಫರ್ ಇಸ್ಲಾಂ ಹೇಳಿದರು.


ತುಷ್ಟೀಕರಣದ ಈ ನೀತಿಗೆ ವಿರುದ್ಧವಾಗಿ ಪ್ರಧಾನಿ ನರೇಂದ್ರ ಮೋದಿಯವರು ‘ಸಬ್‌ಕಾ ಸಾಥ್- ಸಬ್‌ ಕಾ ವಿಕಾಸ್’ ಎನ್ನುವ ಕಲ್ಪನೆಯೊಂದಿಗೆ ಕಳೆದ 9 ವರ್ಷಗಳಲ್ಲಿ ಹಮ್ಮಿಕೊಂಡಿರುವ ಜನಪರ ಮತ್ತು ಅಂತ್ಯೋದಯದ ಯೋಜನೆಗಳ ಸಿಂಹಪಾಲು ಮುಸ್ಲಿಂ ಸಮುದಾಯಕ್ಕೆ ದೊರಕಿರುವುದನ್ನು ಮನಗಂಡ ಮುಸ್ಲಿಂ ಸಮುದಾಯ ಭಾಜಪಾದೊಂದಿಗೆ ಕೈಜೋಡಿಸಬೇಕು ಎಂದು ಅವರು ವಿನಂತಿಸಿದರು.
ನಗರದಲ್ಲಿ ಬಿಜೆಪಿಯ ಮಾಧ್ಯಮ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಎಲ್ಲ ಯೋಜನೆಗಳ ಸಿಂಹಪಾಲು ಮುಸ್ಲಿಂ ಸಮುದಾಯಕ್ಕೆ ದೊರಕಿದೆ ಎನ್ನಲು ನನಗೆ ಹೆಮ್ಮೆಯೆನಿಸುತ್ತದೆ. ಮೋದಿ ನೇತೃತ್ವದ ಕೇಂದ್ರ ಸರಕಾರವು ತಾರತಮ್ಯವಿಲ್ಲದೆ ದೇಶವಾಸಿಗಳ ಸರ್ವಾಂಗೀಣ ಅಭಿವೃದ್ಧಿಯ ಕಾರ್ಯಸೂಚಿಯೊಂದಿಗೆ ಭಾರತವನ್ನು ವಿಶ್ವದಲ್ಲೇ ಅಗ್ರಮಾನ್ಯ ರಾಷ್ಟ್ರವನ್ನಾಗಿ ಮಾಡುವ ಮಹೋನ್ನತ ಉದ್ದೇಶ ಹೊಂದಿದೆ. ಈ ದಿಕ್ಕಿನಲ್ಲಿ ಸಂಯೋಜಿತವಾಗಿ ಆಡಳಿತ ನಡೆಸಬೇಕಾದರೆ ಕರ್ನಾಟಕದಲ್ಲೂ ಬಿಜೆಪಿ ಸರಕಾರವೇ ಇರುವುದು ಅವಶ್ಯಕ ಎಂದು ಅವರು ನುಡಿದರು.
ಮುಸ್ಲಿಂ ಮೀಸಲಾತಿ ರದ್ದತಿ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮ ಆಧರಿತ ಮೀಸಲಾತಿ ನಮ್ಮ ನೀತಿಯಲ್ಲ; ಧರ್ಮಾಧಾರಿತವಲ್ಲದ, ನಿಜವಾದ ಆರ್ಥಿಕ ದುರ್ಬಲ ವರ್ಗದವರ ಏಳಿಗೆಗೆ ಪೂರಕವಾದ ಮೀಸಲಾತಿ ನೀತಿ ನಮ್ಮದಾಗಿದೆ. ಮುಸ್ಲಿಂ ಸಮುದಾಯದ ಸುಮಾರು 15-16 ಹಿಂದುಳಿದ ವರ್ಗಕ್ಕೆ ಸೇರಿದ ಜಾತಿಗಳಿಗೆ ಈ ಹಿಂದೆ ನೀಡಿದ ಮೀಸಲಾತಿ ಮುಂದುವರಿದಿದ್ದು, ಆರ್ಥಿಕವಾಗಿ ಹಿಂದುಳಿದವರು ಇಡಬ್ಲ್ಯುಎಸ್‌ ಅಡಿಯಲ್ಲಿ ಮೀಸಲಾತಿ ಸೌಲಭ್ಯ ಪಡೆಯಬಹುದಾಗಿದೆ . ಕರ್ನಾಟಕ ಸರಕಾರವು ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ಮೀಸಲಾತಿಯಿಂದ ಮುಸ್ಲಿಂ ಸಮುದಾಯಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂದು ಡಾ. ಝಾಫರ್ ಇಸ್ಲಾಂ ನುಡಿದರು.
ವಿಧ್ವಂಸಕ, ಭಯೋತ್ಪಾದಕ ಹಾಗೂ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತಿರುವ ಈ ರೀತಿಯ ಸಂಘಟನೆಗಳ ವಿರುದ್ಧ ಸಮುದಾಯವು ಎಚ್ಚತ್ತುಕೊಂಡು ರಾಷ್ಟ್ರೀಯ ಚಿಂತನೆಗಳೊಂದಿಗೆ ಕೈಜೋಡಿಸುವಂತೆ ಅವರು ವಿನಂತಿಸಿದರು.
ಭಯೋತ್ಪಾದನೆಯ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ದೇಶದ್ರೋಹಿ ಶಕ್ತಿಗಳನ್ನು, ಭ್ರಷ್ಟಾಚಾರಿಗಳನ್ನು ಮಟ್ಟ ಹಾಕಿದೆ. ಹೀಗಾಗಿ ಈ ದುಷ್ಟ ಶಕ್ತಿಗಳಿಗೆ ತಲೆ ಎತ್ತಲಾಗದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಶಕ್ತಿಗಳ ಜತೆ ನಿಕಟ ಸಂಬಂಧ ಹೊಂದಿದ್ದು ನಿರಂತರ ಬೆಂಬಲಿಸುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ. ಪ್ರಧಾನಿ ಮೋದಿ ಅವರ ವಿರುದ್ಧ ನಡೆಸುತ್ತಿರುವ ಕೀಳುಮಟ್ಟದ ವೈಯಕ್ತಿಕ ದಾಳಿಗಳು ಕಾಂಗ್ರೆಸ್‌ಗೆ ಇರುವ ಆತಂಕದ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದರು.
ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಉಗ್ರ ಚಟುವಟಿಕೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದ್ದು, ನಿಷೇಧಿತ ಪಿಎಫ್‌ಐ ಮತ್ತು ಅದರ ರಾಜಕೀಯ ಮುಖವಾದ ಎಸ್‌ಡಿಪಿಐ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ. ನಾಗರಿಕರ ಸುರಕ್ಷತೆ ಪರಮೋಚ್ಚ ಕರ್ತವ್ಯವಾಗಿದ್ದು ಸರಕಾರ ದುಷ್ಟಶಕ್ತಿಗಳನ್ನು ಮಟ್ಟಹಾಕಲು ಎಲ್ಲ ಕ್ರಮ ಕೈಗೊಂಡಿದೆ ಎಂದರು.
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕುಟುಂಬ ಆಧರಿತ ಪಕ್ಷಗಳಾಗಿದ್ದು, ಅವುಗಳ ಪರಮೋಚ್ಚ ನೀತಿ ಆ ಕುಟುಂಬಗಳ ಅಭಿವೃದ್ಧಿಯೇ ಹೊರತು ದೇಶದ ನಾಗರಿಕರ ಸಮಗ್ರ ಅಭಿವೃದ್ಧಿಯಲ್ಲ. ಆದರೆ, ದೇಶ ಮೊದಲು ಎಂಬ ನೀತಿ ಅನುಸರಿಸುವ ಬಿಜೆಪಿಗೆ ತಾರತಮ್ಯವಿಲ್ಲದ, ತುಷ್ಟೀಕರಣ ರಹಿತ ಅಭಿವೃದ್ಧಿಯ ರಾಜಕೀಯದಲ್ಲಿ ಮಾತ್ರ ನಂಬಿಕೆಯಿದೆ ಎಂದು ಅವರು ತಿಳಿಸಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ಎಲ್ಲ ಫಲಾನುಭವಿಗಳಿಗೂ 5 ಲಕ್ಷ ರೂ ವರೆಗೆ ಆರೋಗ್ಯ ವಿಮೆ, ಉಚಿತ ಚಿಕಿತ್ಸಾ ಸೌಲಭ್ಯಗಳು, ಜನೌಷಧಿ ಕೇಂದ್ರಗಳ ಮೂಲಕ ಸಾಮಾನ್ಯ ನಾಗರಿಕರಿಗೂ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಔಷಧಿಗಳು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ದುರ್ಬಲ ವರ್ಗದವರಿಗೆ ವಸತಿ ಸೌಲಭ್ಯ, ನಲ್‌ ಸೇ ಜಲ್, ಶೌಚಾಲಯ ನಿರ್ಮಾಣ- ಹೀಗೆ ಪ್ರತಿಯೊಂದು ಯೋಜನೆಗಳನ್ನೂ ಬಿಜೆಪಿಯ ಡಬಲ್ ಎಂಜಿನ್ ಸರಕಾರಗಳು ಇರುವಲ್ಲಿ ಸಂಪೂರ್ಣವಾಗಿ ಜನತೆಗೆ ತಲುಪಿಸಲಾಗಿದೆ. ಬಿಜೆಪಿಯೇತರ ಸರಕಾರಗಳು ಇರುವಲ್ಲಿ ಈ ಕಲ್ಯಾಣ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಡಾ. ಸೈಯದ್ ಝಾಫರ್ ಇಸ್ಲಾಂ ನುಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ವಕ್ತಾರ ಜಗದೀಶ್ ಶೇಣವ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ, ಬಿಜೆಪಿ ಮುಖಂಡರಾದ ಸಂಜಯ್ ಪ್ರಭು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು