10:37 AM Tuesday11 - March 2025
ಬ್ರೇಕಿಂಗ್ ನ್ಯೂಸ್
APMC BILL | ಎಪಿಎಂಸಿ ನಿಯಂತ್ರಣಕ್ಕೆ ಇ-ಫ್ಲಾಟ್ಫಾರಂಗಳು ತಿದ್ದುಪಡಿ ವಿಧೇಯಕ: ವಿಧಾನಸಭೆ ಅನುಮೋದನೆ Power For Farmers | ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆಗಳ… Education | ಶಿಕ್ಷಣ ಇಲಾಖೆಯಲ್ಲಿ ಶೇ. 80ರಷ್ಟು ಹುದ್ದೆಗಳ ಭರ್ತಿಗೆ ಕ್ರಮ: ಸಚಿವ… Govt Hospital | ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಬೆಳಿಗ್ಗೆ 9ರಿಂದ ಸಂಜೆ… ತೀರ್ಥಹಳ್ಳಿ: ಮನೆಯಲ್ಲಿಯೇ ಯುವಕ ನೇಣಿಗೆ ಶರಣು ಕಲಾಪ ನಿರ್ವಹಿಸಿದ ಡಾ. ಮಂಜುನಾಥ ಭಂಡಾರಿ: ವಿಧಾನ ಪರಿಷತ್ ಸಭಾಪತಿ ಪೀಠದಲ್ಲಿ ಅಲಂಕಾರ Siddu Budget | ರಾಜ್ಯ ಬಜೆಟ್ 2025-26: ಮುಖ್ಯಾಂಶಗಳು ಇಲ್ಲಿದೆ ಓದಿ.. Tourism | ಕೊಡವ ಹೆರಿಟೇಜ್ ಕೇಂದ್ರವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ದಿ: ಪ್ರವಾಸೋದ್ಯಮ ಸಚಿವ… Primary Education | ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ದಿಗೆ ಕಲಿಕಾ ದೀಪ, ಜ್ಞಾನ… BJP v/s Cong | ಉದ್ದೇಶಿತ ಕ್ಷೇತ್ರ ಮರು ವಿಂಗಡಣೆ ದಕ್ಷಿಣ ಭಾರತದ…

ಇತ್ತೀಚಿನ ಸುದ್ದಿ

ತುಂಬೆ ಡ್ಯಾಮ್ ನಲ್ಲಿ 5.93 ಮೀಟರ್ ನೀರಿದ್ದರೂ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನಲ್ಲಿ ಜಲಕ್ಷಾಮ!: ಟ್ಯಾಂಕರ್ ಲಾಬಿಗೆ ಮಣಿದರೇ ಪಾಲಿಕೆ ಎಂಜಿನಿಯರ್ ಗಳು?

09/04/2023, 17:08

ಮಂಗಳೂರು(reporterkarnataka.com): ಮಂಗಳೂರು ಮಹಾಜನತೆಗೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ಈಗಲೂ 5.93 ಮೀಟರ್ ನೀರಿದೆ. ಆದರೆ ನಗರದ ದೇರೆಬೈಲ್ ವಾರ್ಡ್ ನ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ಸೇರಿದಂತೆ ಬಹುತೇಕ ವಾರ್ಡ್ ಗಳಲ್ಲಿ ತೀವ್ರ ತರಹದ ನೀರಿನ ಅಭಾವ ಕಾಡುತ್ತಿದೆ. ಬೇಸಿಗೆ ಮಾತ್ರವಲ್ಲ ಮಳೆಗಾಲದಲ್ಲಿಯೂ ಸಮಸ್ಯೆ ಇದೆ. ಇದಕ್ಕೆಲ್ಲ ಕಾರಣ ಇಲ್ಲಿನ ಮಹಾನಗರಪಾಲಿಕೆಯ ನೀರು ಸರಬರಾಜು ವಿಭಾಗದ ಎಂಜಿನಿಯರ್ ಗಳು ಮತ್ತು ವಾಲ್ವ್ ಮೆನ್ ಗಳು.
ಮಂಗಳೂರಿಗೆ ತೀವ್ರ ತರಹದ ನೀರಿನ ಸಮಸ್ಯೆ ಉಂಟಾಗುವಷ್ಟು ತುಂಬೆ ಡ್ಯಾಮ್ ನಲ್ಲಿ ನೀರು ಇಳಿಕೆಯಾಗಿಲ್ಲ. ಇವತ್ತು ಡ್ಯಾಮ್ ನ ನೀರಿನ ಮಟ್ಟ 5.93 ಮೀಟರ್ ಇದೆ. ಇದು ಇಡೀ ಮಂಗಳೂರಿಗೆ 50 ದಿನಕ್ಕೆ ಸಾಕಾಗುವಷ್ಟು ನೀರಿನ ಶೇಖರಣೆಯಾಗಿದೆ. ಆದರೆ ನಗರದ ಹಲವು ವಾರ್ಡ್ ಗಳಲ್ಲಿ ವರ್ಷಪೂರ್ತಿ ನೀರಿನ ಸಮಸ್ಯೆ ಇದೆ. ಇದಕ್ಕೆಲ್ಲ ಕಾರಣ ಇಲ್ಲಿನ ನೀರು ಸರಬರಾಜು ವಿಭಾಗದ ಎಂಜಿನಿಯರ್ ಮತ್ತು ನೀರು ಬಿಡುವ ವಾಲ್ವ್ ಮೆನ್ ಗಳು ಆಗಿದ್ದಾರೆ. ಬಹುತೇಕ ವಾರ್ಡ್ ಗಳಲ್ಲಿ ವಾಲ್ವ್ ಮೆನ್ ಗಳದ್ದೇ ಆಟ. ಕೆಲವು ವಾರ್ಡ್ ಗಳಲ್ಲಿ 10- 20 ವರ್ಷಗಳಿಂದ ವಾಲ್ವ್ ಮೆನ್ ಗಳ ಬದಲಾವಣೆಯಾಗಿಲ್ಲ. ಒಂದೇ ಕಡೆ ಪರ್ಮನೆಂಟ್ ಟೆಂಟ್ ಹಾಕಿದ್ದಾರೆ. ಹಾಗೆ ಪಾಲಿಕೆಯ ಎಂಜಿನಿಯರ್ ಗಳ ಬದಲಾವಣೆ ಕೂಡ ಆಗಿಲ್ಲ. ಇಲ್ಲಿ ಬದಲಾವಣೆ ಅಂದ್ರೆ ಅವರು ನಿವೃತ್ತರಾಗಬೇಕು ಅಷ್ಟೇ. ಪಾಲಿಕೆಗೆ ಎಂಜಿನಿಯರ್ ಆಗಿ ಬಂದವರಿಗೆ ಬೇರೆ ಕಡೆ ಹೋಗಲು ಮನಸ್ಸೇ ಬರುವುದಿಲ್ಲ. ಮೇಯಲು ಅಷ್ಟು ಹುಲುಸಾಗಿದೆ ಮಹಾನಗರಪಾಲಿಕೆಯ ಅಂಗಳ. ಎರಡೆರಡು ಬಾರಿ ವರ್ಗಾವಣೆಗೊಂಡ ಹಿರಿಯ ಎಂಜಿನಿಯರ್ ಒಬ್ಬರು ಕೊಂಕಣ ಮೈಲಾರ ಸುತ್ತಿ ಮತ್ತೆ ಪಾಲಿಕೆಗೆ ವಕ್ಕರಿಸಿರುವುದು ತಿನ್ನುವವರಿಗೆ ಎಷ್ಟು ಸಮೃದ್ಧವಾಗಿದೆ ಈ ಮಹಾನಗರಪಾಲಿಕೆ ಎನ್ನುವುದು ನಿದರ್ಶನ.
ಎಂಜಿನಿಯರ್ ಹಾಗೂ ವಾಲ್ವ್ ಮೆನ್ ಗಳ ಬದಲಾವಣೆ ಇಲ್ಲದೆ ಇಡೀ ನೀರು ಸರಬರಾಜು ವ್ಯವಸ್ಥೆ ಕುಲಗೆಟ್ಟು ಹೋಗಿದೆ. ನೀರು ವಿತರಣೆಯಲ್ಲಿ ಆಗುವ ಸಮಸ್ಯೆಗೂ ಟ್ಯಾಂಕರ್ ಲಾಬಿಗೂ ಸಂಬಂಧವಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಖಾಸಗಿಯವರು ಇಲ್ಲಿ ನೀರಿನ ಬ್ಯುಸಿನೆಸ್ ಮಾಡುತ್ತಾರೆ‌. ಪಾಲಿಕೆ ನೀರು ಕಟ್ಟಡ ಕಟ್ಟಲು ಬಿಲ್ಡರ್ ಗಳ ಪಾಲಾಗುತ್ತಿದೆ. ಬಡವರು ಮತ್ತು ಮಧ್ಯಮ ವರ್ಗದವರು ಹಣ ಕೊಟ್ಟು ಟ್ಯಾಂಕರ್ ನಲ್ಲಿ ನೀರು ತರಿಸುತ್ತಾರೆ.
ಪಾಲಿಕೆಯ ವಾಲ್ವ್ ಮೆನ್ ಗಳು ದಶಕಗಳಿಂದ ಒಂದೇ ಕಡೆ ಬೇರುಬಿಟ್ಟಿರುವುದಕ್ಕೆ ದೇರೆಬೈಲ್ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ಉತ್ತಮ ಉದಾಹರಣೆ. ಇಲ್ಲಿಯ ವಾಲ್ವ್ ಮೆನ್ 20 ವರ್ಷಕ್ಕಿಂತಲೂ ಅಧಿಕ ಕಾಲದಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಲ್ಯಾಂಡ್ ಲಿಂಕ್ಸ್ ನಲ್ಲಿ ನೀರಿನ ಸಮಸ್ಯೆ ಯಾವತ್ತೂ ಪರಿಹಾರವಾಗಿಲ್ಲ. ಟೌನ್ ಶಿಪ್ ನಲ್ಲಿ ಮದುವೆ, ಎಂಗೇಜ್ ಮೆಂಟ್, ಉಪನಯನ, ಬರ್ತ್ ಡೇ ಪಾರ್ಟಿ, ಮೆಹಂದಿ ಇದ್ದರೆ ರಾತ್ರಿ ಪೂರ್ತಿ ಕೊಳವೆಯಲ್ಲಿ ನೀರು ಬರುತ್ತಲೇ ಇರುತ್ತದೆ. ಇಲ್ಲದಿದ್ದರೆ ಬೆಳಗ್ಗೆ 9.30ರ ಬಳಿಕ ಮಧ್ಯಾಹ್ನ 2.30ರ ವರೆಗೆ ಕಣ್ಣೀರು ತರಹ ಸಪೂರದಲ್ಲಿ ನೀರು ಬರುತ್ತದೆ. ಮನೆ ಮಂದಿಯೆಲ್ಲ ಆಫೀಸ್ ಸೇರಿದ ಬಳಿಕ ನೀರು ಬರುತ್ತದೆ. ನೀರು
ಮನೆ ಮೇಲಿನ ಟ್ಯಾಂಕ್ ಏರಿದರೆ ಪರವಾಗಿಲ್ಲ, ಆದರೆ ಇವರು ಬಿಡುವ ನೀರು ಮೊದಲ ಮಹಡಿಯ ಟ್ಯಾಂಕಿಗೂ ಹೋಗಲ್ಲ. ಪಾಲಿಕೆಯ ಎಂಜಿನಿಯರ್ ಗೆ ಕಾಲ್ ಮಾಡಿದ್ರೆ ಆವತ್ತು ನೀರು ಟ್ಯಾಂಕ್ ಹತ್ತುತ್ತೆ. ಮರು ದಿನ ಮತ್ತೆ ಅದೇ ಹಣೆ ಬರಹ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಟ್ಯಾಂಕರ್ ಲಾಬಿ ಬಹಳ ಜೋರಾಗಿದೆ. ಇದರಲ್ಲಿ ಪಾಲಿಕೆಯ ನೀರು ಸರಬರಾಜು ವಿಭಾಗದ ಕೆಲವು ಎಂಜಿನಿಯರ್ ಗಳು ಕೂಡ ಶಾಮೀಲಾಗಿದ್ದಾರೆ. ನೀರಿನ ಸಮಸ್ಯೆ ಇದ್ದರೆ ತಾನೆ ಖಾಸಗಿ ನೀರಿನ ಟ್ಯಾಂಕರ್ ನವರಿಗೆ ಲಾಭ ಆಗುವುದು. ಇದಕ್ಕಾಗಿ ಇಲ್ಲಿನ ಕೆಲವು ಎಂಜಿನಿಯರ್ ಗಳು ಟ್ಯಾಂಕರ್ ಲಾಬಿಗೆ ಮಣಿದು ಅವರೊಂದಿಗೆ ಸೇರಿಕೊಂಡು ದುಡ್ಡು ಮಾಡುತ್ತಾರೆ. ಇದರಲ್ಲಿ ಕೆಲವು ವಾಲ್ವ್ ಮೆನ್ ಗಳು ಕೂಡ ಶಾಮೀಲಾಗುತ್ತಾರೆ.
ಇದು ದೇರೆಬೈಲ್ ವಾರ್ಡ್ ನ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ವೊಂದರ ಸಮಸ್ಯೆ ಅಲ್ಲ. ಕೊಂಚಾಡಿ, ಬೋರುಗುಡ್ಡೆ, ಆಕಾಶಭವನ, ಬೊಲ್ಪುಗುಡ್ಡೆ, ಪಾಂಡೇಶ್ವರ, ಮಂಗಳಾದೇವಿ ಪರಿಸರ, ಕಂಕನಾಡಿ, ಶಕ್ತಿನಗರ, ಕುಲಶೇಖರ ಮುಂತಾದ ಕಡೆಗಳಲ್ಲಿಯೂ ತೀವ್ರ ನೀರಿನ ಸಮಸ್ಯೆ ಇದೆ.

ಇತ್ತೀಚಿನ ಸುದ್ದಿ

ಜಾಹೀರಾತು