ಇತ್ತೀಚಿನ ಸುದ್ದಿ
ನ್ಯಾಯವಾದಿ ಪದ್ಮರಾಜ್ ದಿಲ್ಲಿಯಲ್ಲಿ: ಇಂದು ಮಧ್ಯಾಹ್ನ ಕಾಂಗ್ರೆಸ್ ವರಿಷ್ಠರ ಭೇಟಿ ಸಾಧ್ಯತೆ
03/04/2023, 11:57
ಮಂಗಳೂರು(reporterkarnataka.com): ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಂಗಳೂರಿನ ಯುವ ನ್ಯಾಯವಾದಿ ಪದ್ಮರಾಜ್ ಆರ್. ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನಿಂದ ಬುಲಾವ್ ಬಂದಿದ್ದು, ಭಾನುವಾರ ತಡರಾತ್ರಿ ದಿಲ್ಲಿಗೆ ತಲುಪಿದ್ದಾರೆ. ಇಂದು ಅವರು ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಪದ್ಮರಾಜ್ ಅವರು ಇಂದು ಮಧ್ಯಾಹ್ನದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ಪ್ರಮುಖ ನಾಯಕರ ಭೇಟಿಯಾಗಲಿದ್ದಾರೆ.
ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಪದ್ಮರಾಜ್ ಅವರಿಗೆ ಟಿಕೆಟ್ ನೀಡುವಂತೆ ಬಿಲ್ಲವ ಸಮುದಾಯ ಹಕ್ಕೊತ್ತಾಯ ಮಂಡಿಸಿದೆ. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪದ್ಮರಾಜ್ ಅವರಿಗೆ ನಿನ್ನೆ ಕಾಂಗ್ರೆಸ್ ವರಿಷ್ಠರಿಂದ ದಿಲ್ಲಿಗೆ ಬರುವಂತೆ ಬುಲಾವ್ ಬಂದಿತ್ತು. ಪದ್ಮರಾಜ್ ಅವರು ವರಿಷ್ಠರನ್ನು ಇಂದು ಮಧ್ಯಾಹ್ನ ಭೇಟಿಯಾಗಲಿದ್ದು, ಮಾತುಕತೆ ನಡೆಸಲಿದ್ದಾರೆ.
ಬಿಲ್ಲವರೇ ಅಧಿಕ ಸಂಖ್ಯೆಯಲ್ಲಿ ಇರುವ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಬಿಲ್ಲವ ಸಮುದಾಯದ ಯುವ ನಾಯಕ ವಕೀಲ ಪದ್ಮರಾಜ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಅಧಿಕವಾಗಿದೆ. 2 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 60 ಸಾವಿರಕ್ಕೂ ಅಧಿಕ ಬಿಲ್ಲವ ಸಮುದಾಯದವರಿದ್ದಾರೆ. ಪದ್ಮರಾಜ್ ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿಗೆ ನೇರ ಸ್ಪರ್ಧೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಜಿಲ್ಲೆಯ 8 ಕ್ಷೇತ್ರಗಳ ಪೈಕಿ 5 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಘೋಷಣೆ ಮಾಡಲಾಗಿದೆ. ಆದರೆ ಮಂಗಳೂರು ದಕ್ಷಿಣ ಮತ್ತು ಮಂಗಳೂರು ನಗರ ಉತ್ತರ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಹೈಕಮಾಂಡ್‌ಗೆ ಸವಾಲಾಗಿದ್ದು ದೊಡ್ಡ ಕಗ್ಗಂಟು ಆಗಿಯೇ ಇದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ.