ಇತ್ತೀಚಿನ ಸುದ್ದಿ
ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳಲ್ಲಿ ಪದವಿ ಪ್ರದಾನ ಸಮಾರಂಭ; ನರ್ಸಿಂಗ್ ಶಿಕ್ಷಣ ಮಾನವೀಯತೆಯ ಪಾಠ ಶಾಲೆ: ಮ್ಯಾಕ್ಸಿಮ್ ನೊರೊನ್ಹಾ
01/04/2023, 23:57
ಮಂಗಳೂರು(reporterkarnataka.com): ಕೋವಿಡ್ ಚಿಕಿತ್ಸೆಯಲ್ಲಿ ಶುಶ್ರೂಷಾ ಸಿಬ್ಬಂದಿ ಕಾಳಜಿ ಮತ್ತು ಸಹಾನುಭೂತಿ ನಾವೆಲ್ಲರೂ ಕಂಡಿದ್ದೇವೆ. ದಾದಿಯರು ಮಾತೃ ಹೃದಯದ ಜತೆಗೆ ಮಾನವೀಯತೆ ಸೇವೆ ನೀಡಬೇಕು. ಸಂಸ್ಥೆಗಳ ಉನ್ನತಿಗಾಗಿ ಸಮರ್ಪಿಸಿಕೊಂಡಿರುವ ಆಡಳಿತ ಮಂಡಳಿ ಮತ್ತು ಅಧ್ಯಾಪಕರಿಗೆ ಕೃತಜ್ಞತೆ ಸಲ್ಲಿಸಬೇಕು. ರೋಗಿಗಳು ಮತ್ತು ಜನರನ್ನು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಶ್ರೇಷ್ಠ ಗುರು ವಂದನೀಯ ಮ್ಯಾಕ್ಸಿಮ್ ಎಲ್ ನೊರೊನ್ಹಾ ಹೇಳಿದರು.
ನಗರದ ಫಾದರ್ ಮುಲ್ಲರ್ ಸ್ಕೂಲ್ ಮತ್ತು ಕಾಲೇಜ್ ಆಫ್ ನರ್ಸಿಂಗ್, ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ಘಟಕಗಳಾದ 62ನೇ ಜಿಎನ್ಎಂ, 32ನೇ ಬಿಎಸ್ ಸಿ, 33ನೇ ಪಿಬಿ ಬಿಎಸ್ ಸಿ, ಹಾಗೂ 29ನೇ ಎಂಎಸ್ಸಿ ನರ್ಸಿಂಗ್ ಹೊರ ಹೋಗುವ ಬ್ಯಾಚ್ ನ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಶನಿವಾರ ಅವರು ಮಾತನಾಡಿದರು.
ವೈದ್ಯಕೀಯ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಮೌಲ್ಯಯುತ ವ್ಯಕ್ತಿಯನ್ನಾಗಿ ಬೆಳೆಸುತ್ತದೆ. ರೋಗಿ ಹಾಗೂ ನರ್ಸಗಳ ಸಂಬಂಧವು ಮಾನವೀಯ ಹಾಗೂ ಶ್ರೇಷ್ಠತೆ ಕಲಿಸಿಕೊಡುತ್ತದೆ. ರೋಗಿಗಳ ಆರೈಕೆ ಒದಗಿಸುವವರ ಸಂಬಂಧವನ್ನು ಗಟ್ಟಿಗೊಳಿಸುವ ಕೆಲಸವನ್ನು ವೈದ್ಯಕೀಯ ಹಾಗೂ ನರ್ಸಿಂಗ್ ಶಿಕ್ಷಣ ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳು ನರ್ಸಿಂಗ್ ಶಿಕ್ಷಣ ಮುಗಿಸಿ ವೃತ್ತಿ ಬದುಕಿಗೆ ಹೋಗುವಾಗ ವೃತ್ತಿಯನ್ನು ಪ್ರೀತಿಸುವ ಜತೆಗೆ ಧೈರ್ಯ ಮತ್ತು ಕಾಳಜಿ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪದವೀಧರರನ್ನು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಅಭಿನಂದಿಸಿದರು. ಪದವಿ ಪ್ರದಾನ ಕಾರ್ಯಕ್ರಮದಲ್ಲಿ 169 ಪದವೀಧರರು ತಮ್ಮ ಪದವಿ ಪ್ರಮಾಣ ಪತ್ರ ಮತ್ತು ಗೌರವವನ್ನು ಪಡೆದರು.
ಪದವೀಧರ ವಿದ್ಯಾರ್ಥಿನಿ ಸ್ನೇಹಾ ಮಯೋಲಾ ನೊರೊನ್ಹಾ ಅವರು ಮಾತನಾಡಿ, ಕ್ಯಾಂಪಸ್‌ನಲ್ಲಿ ಸಾಕಷ್ಟು ಮೌಲ್ಯಯುತ ಗುಣಗಳನ್ನು ಬೆಳೆಸಿಕೊಂಡಿದ್ದೇವೆ. ಸಂಸ್ಥೆಯು ನನ್ನ ಉತ್ತಮ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ನರ್ಸ್ ರಿಜಿಸ್ಟ್ರಾರ್, ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಪ್ರೊ ಪ್ರಸನ್ನ ಕುಮಾರ್ ಒ, ತರಬೇತಿ ಪಡೆದ ನರ್ಸಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಕೆ ಜಾರ್ಜ್, ವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ವಂದನೀಯ ಫಾದರ್ ಅಜಿತ್ ಬಿ. ಮೆನೇಜಸ್ ಮತ್ತು ಮುಖ್ಯ ನರ್ಸಿಂಗ್ ಅಧಿಕಾರಿ ಧನ್ಯಾ ದೇವಾಸಿಯಾ ಇದ್ದರು.
ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕೊಯೆಲೊ ಸ್ವಾಗತಿಸಿದರು. ಕಾಲೇಜು ಮತ್ತು ಶಾಲಾ ವರದಿಯನ್ನು ಪ್ರಾಂಶುಪಾಲರಾದ ವಂ.ಜಸಿಂತಾ ಡಿಸೋಜಾ ಮಂಡಿಸಿದರು. ಉಪ ಪ್ರಾಂಶುಪಾಲ ಡಾ.ದೇವಿನಾ ಇ ರೋಡ್ರಿಗಸ್ ವಂದಿಸಿದರು.