ಇತ್ತೀಚಿನ ಸುದ್ದಿ
ಸ್ಟೇಟ್ ಬ್ಯಾಂಕ್ ಬಳಿಯ ಸಿಟಿ ಬಸ್ ತಂಗುದಾಣ ನಾಳೆಯಿಂದ ಸರ್ವಿಸ್ ಬಸ್ ನಿಲ್ದಾಣಕ್ಕೆ ಸ್ಥಳಾಂತರ: ಖಾಸಗಿ ಬಸ್ ಮಾಲೀಕರ ಸಂಘ ಜತೆ ಪೊಲೀಸ್ ಇಲಾಖೆ ತುರ್ತುಸಭೆ
31/03/2023, 22:00
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ನಗರದ ಸ್ಟೇಟ್ ಬ್ಯಾಂಕ್ ಪ್ರದೇಶದಲ್ಲಿ ವಾಹನ ದಟ್ಟಣೆ ತಪ್ಪಿಸಲು, ಅಪಘಾತ ನಿಯಂತ್ರಿಸಲು ಹಾಗೂ ಖಾಸಗಿ ಬಸ್ ಚಾಲಕರ ನಿರ್ಲಕ್ಷ್ಯ ಚಾಲನೆಯನ್ನು ತಡೆಯುವ ನಿಟ್ಟಿನಲ್ಲಿ ಸಿಟಿ ಬಸ್ ನಿಲ್ದಾಣವನ್ನು ಪ್ರಾಯೋಗಿಕ ನೆಲೆಯಲ್ಲಿ ನಾಳೆಯಿಂದ(ಏಪ್ರಿಲ್ 1) ಸ್ಟೇಟ್ ಬ್ಯಾಂಕ್ ಬಳಿಯ ಹಾಕಿ ಗ್ರೌಂಡ್ ಸರ್ವಿಸ್ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುವುದು.
ಮಂಗಳೂರು ನಗರದ ವಿವಿಧ ಕಡೆಗಳಿಂದ ಸ್ಟೇಟ್ ಬ್ಯಾಂಕ್ ಕಡೆ ಬರುವ ಸಿಟಿ ಬಸ್ ಗಳು ಪೊಲೀಸ್ ಕಮಿಷನರ್ ಕಚೇರಿ ಎದುರುಗಡೆ ಇರುವ ರಸ್ತೆ ಮೂಲಕ ನೇರವಾಗಿ ಸರ್ವಿಸ್ ಬಸ್ ನಿಲ್ದಾಣದೊಳಗೆ ಪ್ರವೇಶಿಸಲು ಅನುವು ಮಾಡಿಕೊಡಲಾಗುವುದು. ಹಾಗಾಗಿ ಇನ್ನು ಮುಂದೆ ಸಿಟಿ ಬಸ್ ಗಳಿಗೆ ಹ್ಯಾಮಿಲ್ಟನ್ ಸರ್ಕಲ್ ನತ್ತ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಈ ಕುರಿತು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಖಾಸಗಿ ಬಸ್ ಮಾಲೀಕರ ಸಂಘ, ಆರ್.ಟಿ.ಒ ಅಧಿಕಾರಿಗಳು ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳ ಸಭೆ ಶುಕ್ರವಾರ ನಡೆದಿತ್ತು. ಬೆಂದೂರ್ ವೆಲ್ ಬಳಿ ಖಾಸಗಿ ಬಸ್ ಗಳ ಧಾವಂತಕ್ಕೆ ವಾರದೊಳಗೆ ಎರಡು ಜೀವ ಹಾನಿಯಾಗಿರುವುದು ಮತ್ತು ಮಾಧ್ಯಮ ಹಾಗೂ ಸಾರ್ವಜನಿಕರಿಂದ ಕಂಡು ಬಂದ ವಿರೋಧದ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಅವರು ಶುಕ್ರವಾರ ತುರ್ತು ಸಭೆ ಕರೆದಿದ್ದರು. ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ಚಾಲನೆಯ ಬಗ್ಗೆ ಸಭೆಯಲ್ಲಿ ಖಾಸಗಿ ಬಸ್ ಮಾಲೀಕರ ಸಂಘಕ್ಕೆ ಎಚ್ಚರಿಕೆ ನೀಡಲಾಯಿತು. ಹಾಗೆ ಕಂಕನಾಡಿ ಹಾಗೂ ಬೆಂದೂರ್ ವೆಲ್ ಪ್ರದೇಶದಲ್ಲಿ ಸಿಟಿ ಬಸ್ ನಿಲುಗಡೆಯ ಕೆಲವು ಜಾಗವನ್ನು ಬದಲಾಯಿಸಲು ತೀರ್ಮಾನಿಸಲಾಯಿತು.
ಈ ನಡುವೆ ಪೊಲೀಸ್ ಅಧಿಕಾರಿಗಳು, ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಮತ್ತು ಆರ್ ಟಿ ಒ ಅಧಿಕಾರಿಗಳು ಸರ್ವಿಸ್ ಬಸ್ ನಿಲ್ದಾಣದಲ್ಲಿ ಸಿಟಿ ಬಸ್ ಗಳು ತಂಗುವ ಕುರಿತು ಸ್ಥಳ ಪರಿಶೀಲನೆ ನಡೆಸಿದರು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಎಸಿಪಿ ಗೀತಾ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.
ಸ್ಟೇಟ್ ಬ್ಯಾಂಕ್ ಬಳಿ ರಸ್ತೆ ಕಾಂಕ್ರೀಟಿಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಟಿ ಬಸ್ ನಿಲ್ದಾಣವನ್ನು ಸರ್ವಿಸ್ ಬಸ್ ನಿಲ್ದಾಣದೊಳಗೆ ಸ್ಥಳಾಂತರಿಸಲಾಗಿತ್ತು. ಆದರೆ ಆಗ ಸರ್ವಿಸ್ ಬಸ್ ನಿಲ್ದಾಣ ನವೀಕರಣ ನಡೆದಿರಲಿಲ್ಲ. ಇದೀಗ ಸ್ಮಾರ್ಟ್ ಸಿಟಿ ಫಂಡ್ ನಲ್ಲಿ ಸರ್ವಿಸ್ ಬಸ್ ನಿಲ್ದಾಣವನ್ನು ನವೀಕರಣ ಮಾಡಲಾಗಿದೆ.