ಇತ್ತೀಚಿನ ಸುದ್ದಿ
ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿ, ಜೀವ ಉಳಿಸಿಕೊಳ್ಳಿ: ಡಿಸಿಪಿ ದಿನೇಶ್ ಕುಮಾರ್
13/02/2023, 23:49
ಮಂಗಳೂರು(reporterkarnataka.com): ರಸ್ತೆ ಸುರಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ. ಸಾರ್ವಜನಿಕರು, ಅದರಲ್ಲೂ ಯುವಜನತೆ ಪಾಲಿಸಲೇ ಬೇಕು. ವಾಹನ ಚಾಲನಾ ವೇಳೆ ಇತರರ ಜೀವದೊಡನೆ ಚೆಲ್ಲಾಟವಾಡಬಾರದು ಎಂದು ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತ ಡಿ.ಬಿ. ದಿನೇಶ್ ಕುಮಾರ್ ಸಲಹೆ ನೀಡಿದರು.
ಅವರು ಸೋಮವಾರ ನಗರದ ಕದ್ರಿಪಾರ್ಕ್ ಬಳಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ, ದ.ಕ ಜಿಲ್ಲಾ ಪೌರರಕ್ಷಣಾ ಪಡೆ, ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಂಗಳೂರು ಆಟೋ ಚಾಲಕರ ಘಟಕದ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನಾಚರಣೆಯ ಅಂಗವಾಗಿ ನಡೆದ ರಸ್ತೆ ಸುರಕ್ಷಾ ರ್ಯಾಲಿ ಉದ್ಘಾಟಿಸಿ ಮಾತನಾಡಿದರು.
ವಾಹನ ಚಲಾಯಿಸುವಾಗ ರಸ್ತೆ ಶಿಸ್ತನ್ನು ಪಾಲಿಸಲೇಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ, ಹೆಲ್ಮೆಟ್ ಧರಿಸದಿರುವುದು, ಸೀಟು ಬೆಲ್ಟ್ ಧರಿಸದಿರುವುದು ಶಿಕ್ಷಾರ್ಹ ಅಪರಾಧಗಳು. ಈ ನಿಯಮಗಳು ಬರೀ ಪೆÇಲೀಸರಿಗಾಗಿ ಅಲ್ಲ. ತಮ್ಮ ಜೀವದ ರಕ್ಷಣೆಗಾಗಿ ಚಾಲಕರು ಪಾಲಿಸಬೇಕು ಎಂದರು.
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರ ದಿನದಂದು ವೈದ್ಯರೂ ಕೂಡಾ ರಸ್ತೆಗೆ ಇಳಿದು ರಸ್ತೆ ಸುರಕ್ಷಾ ರ್ಯಾಲಿ ಮಾಡಿರುವುದ ಧನಾತ್ಮಕ ಬೆಳವಣೆಗೆ. ಇದು ಅವರ ಸಾಮಾಜಿಕ ಬದ್ಧತೆ ಮತ್ತು ಕಳಕಳಿಯನ್ನು ತೋರಿಸುತ್ತದೆ. ಇದರ ಜೊತೆ ಗೃಹರಕ್ಷಕರು ಮತ್ತು ಆಟೋ ಚಾಲಕರು ಸೇರಿ ರ್ಯಾಲಿಗೆ ಹೆಚ್ಚಿನ ಸ್ಪೂರ್ತಿ ಮತ್ತು ಶಕ್ತಿ ತುಂಬಿದ್ದಾರೆ. ಎಲ್ಲರೂ ಒಟ್ಟು ಸೇರಿ ರಸ್ತೆ ಸುರಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ‘ಅಪಘಾತ ರಹಿತ’ ರಸ್ತೆಗಳನ್ನು ನಿರ್ಮಿಸೋಣ. ಆ ಮೂಲಕ ಬಲಿಷ್ಠ ಮತ್ತು ಆರೋಗ್ಯ ಪೂರ್ಣ ಭಾರತವನ್ನು ಕಟ್ಟೋಣ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕ ಡಾ. ಬಿ. ರಾಜೇಂದ್ರ ಪ್ರಸಾದ್ ಮಾತನಾಡಿ, ರಸ್ತೆ ಅಪಘಾತಗಳಾದಾಗ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರಿಗೆ ಅತಿಯಾದ ಪ್ರಾಮುಖ್ಯತೆ ಇದೆ. ಹೆಚ್ಚಿನ ಎಲ್ಲಾ ರಸ್ತೆ ಅಪಘಾತಗಳಲ್ಲಿ ಬಾಯಿ, ಮುಖದ ಎಲುಬುಗಳ ಮತ್ತು ದವಡೆ ಮುರಿಯುತ್ತದೆ. ರಸ್ತೆ ಸುರಕ್ಷಾ ನಿಯಮ ಪಾಲಿಸಿ ಶಿರಕವಚ ಧರಿಸಿ, ಸೀಟ್ ಬೆಲ್ಟ್ ಧರಿಸಿದಲ್ಲಿ ಈ ಎಲ್ಲಾ ಹೆಚ್ಚಿನ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ ಎಂದರು.
ಪರಿಸರವಾದಿ ಮಾಧವ ಉಳ್ಳಾಲ್ ಅವರು ‘ಗ್ರೀನ್ ಕ್ಯಾಂಪೇನ್’ ಬಗ್ಗೆ ಮಾತನಾಡಿ ಪರಿಸರ ರಕ್ಷಿಸುವಲ್ಲಿ ವೈದ್ಯರು ಮತ್ತು ಗೃಹರಕ್ಷಕರಿಗೆ ಹೆಚ್ಚಿನ ಸಾಮಾಜಿಕ ಹೊಣೆಗಾರಿಕೆ ಇದೆ ಎಂದು ಎಲ್ಲರಿಗೂ ಗಿಡ ನೀಡಿದರು.
ರ್ಯಾಲಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಮತ್ತು ಪೌರರಕ್ಷಣಾ ದಳದ ಮುಖ್ಯ ಪಾಲಕರ ಡಾ. ಮುರಲೀ ಮೋಹನ್ ಚೂಂತಾರು, ದೇಶದಲ್ಲಿ ಪ್ರತಿ 5 ನಿಮಿಷಕ್ಕೆ ಒಂದು ರಸ್ತೆ ಅಪಘಾತ ಆಗುತ್ತಿದೆ. ವಿಶ್ವದಲ್ಲಿ ನಡೆಯುವ ಪ್ರತಿ ಹತ್ತು ಅಪಘಾತಗಳಲ್ಲಿ ಒಂದು ಅಪಘಾತ ಭಾರತದಲ್ಲಿ ನಡೆಯುತ್ತಿದೆ. ಜನರಲ್ಲಿ ರಸ್ತೆ ಸುರಕ್ಷಾ ಕ್ರಮಗಳ ಬಗ್ಗೆ ಇನ್ನು ಹೆಚ್ಚಿನ ಜಾಗೃತಿ ಮಾಡಿಸಬೇಕಾಗಿದೆ. ರಸ್ತೆ ಅಪಘಾತಗಳಾದಾಗ ಪ್ರಥಮ ಒಂದು ಗಂಟೆ ಗೋಲ್ಡನ್ ಹವರ್ ಆಗಿದ್ದು ಆ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಸಮಯಪ್ರಜ್ಞೆ ಉಪಯೋಗಿಸಿ, ಗಾಯಾಳುಗಳನ್ನು ತಕ್ಷಣವೇ ಉಪಚರಿಸಿ ಆಸ್ಪತ್ರೆಗೆ ಸಾಗಿಸಬೇಕು. ಹೀಗೆ ಮಾಡಿದರೆ ರೋಗಿಯ ಜೀವ ಉಳಿಸಬಹುದು ಮತ್ತು ಮುಖದ ವಿಕಲಾಂಗತೆಯ ಪ್ರಮಾಣವನ್ನು ತಗ್ಗಿಸಬಹುದು ಎಂದರು.
ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕ ಡಾ. ಎಸ್. ಎಮ್ ಶರ್ಮ, ಡಾ. ಕೇಶವ ಭಟ್. ಕೆ, ಮಂಗಳೂರು ನಗರದ ಚೀಪ್ ಟ್ರಾಫಿಕ್ ವಾರ್ಡನ್ ಪ್ರೊ. ಸುರೇಶ್ ನಾಥ್, ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟ ರಮೇಶ್, ಕಚೇರಿ ಅಧೀಕ್ಷಕ ರತ್ನಾಕರ, ಆಟೋ ಚಾಲಕರ ಸಂಘದ ಮುಖ್ಯ ಸಲಹಗಾರರಾದ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸುರೇಶ್, ಹಿರಿಯ ಗೃಹರಕ್ಷಕರಾದ ಭಾಸ್ಕರ್, ರಾಜೇಶ್ ಗಟ್ಟಿ, ಸುನೀಲ್ ಕುಮಾರ್, ಸುನೀಲ್ ಪೂಜಾರಿ, ದಿವ್ಯಾ ಪೂಜಾರಿ, ಗಿರೀಶ್, ರಂಜಿತ್, ದಿವಾಕರ್, ಸಂದೇಶ್, ರೇಷ್ಮಾ, ಶುಭ ಕುಲಾಲ್, ಪಷ್ಪಲತಾ, ಶರದ್ ರಾಜ್, ಜ್ಞಾನೇಶ್, ಮನೋರಮಾ ಭಾಗವಹಿಸಿದ್ದರು.