ಇತ್ತೀಚಿನ ಸುದ್ದಿ
‘ ಮಿಸ್ ಮಂಗಳೂರು’ ಕಿರೀಟ ಮುಡಿಗೇರಿಸಿದ ಕಾಫಿನಾಡಿನ ಪ್ರತಿಭೆ ಸುಷ್ಮಾ ಎಸ್.ಶೆಟ್ಟಿ
17/01/2023, 12:12

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡು ಚಿಕ್ಕಮಗಳೂರಿನ ಅಪ್ಪಟ ಪ್ರತಿಭೆ ಸುಷ್ಮಾ ಎಸ್. ಶೆಟ್ಟಿ ‘ಮಿಸ್ ಮಂಗಳೂರು’ ಕಿರೀಟ ಮುಡಿಗೇರಿಕೊಂಡಿದ್ದಾರೆ.
ಮೂಡಿಗೆರೆಯ ಸಂತ ಮಾರ್ಥಾಸ್ ಶಾಲೆಯಲ್ಲಿ ಪ್ರೌಢಶಾಲೆ ವ್ಯಾಸಂಗ ಮುಗಿಸಿದ ಸುಷ್ಮಾ ಹಲವು ಕನಸುಗಳನ್ನು ಕಂಡಾಕೆ. ಪಿಯುಸಿ ವ್ಯಾಸಂಗವನ್ನು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ಕಲಿತರು. ಇವರಿಗೆ ವಿದ್ಯಾಭ್ಯಾಸದೊಂದಿಗೆ ನೃತ್ಯ,ಭರತನಾಟ್ಯ,ಮಾಡೆಲಿಂಗ್,ಆಂಕರಿಂಗ್, ಭಾಷಣ ಕಲೆಯಲ್ಲಿ ತುಂಬಾ ಆಸಕ್ತಿ ಇದೆ.
ಜತೆಗೆ ಕೆಡೆಟ್ ಎನ್ ಸಿಸಿ ಏರ್ ವಿಂಗ್ ನಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಶಾಲಾ ಹಂತದಲ್ಲಿ ನೃತ್ಯ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದು ಸಾಧನೆ ಮೆರೆದಾಕೆ. ಕಲಿಕೆಯಲ್ಲೂ ಮುಂದಿದ್ದ ಸುಷ್ಮಾ ಎಸ್.ಶೆಟ್ಟಿ ಹಲವು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡ ಪ್ರತಿಭೆ. ಸಂತ ಆಗ್ನೇಸ್ ಕಾಲೇಜಿನಲ್ಲಿ ಬಿಬಿಎ ಮುಗಿಸಿದರು.
ಬಜಪೆ ಕೆಲಿಂಜಾರಿನ ಶ್ರೀದೇವಿ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಿಜಿ ಕಾಲೇಜಿನಲ್ಲಿ ಎಂಬಿಎ ಪದವಿ ಮುಗಿಸಿದ ಇವರಿಗೆ ಏನಾದರೂ ಜೀವನದಲ್ಲಿ ಸಾಧಿಸಬೇಕೆಂಬ ಛಲ ಮನೆ ಮಾಡಿತ್ತು. ಇವರ ತಂದೆ ಬಿ.ಸುರೇಶ್ ಶೆಟ್ಟಿ ಅವರು ಬಣಕಲ್ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರು. ತಾಯಿ ಸೌಮ್ಯ ಎಸ್.ಶೆಟ್ಟಿ ಗೃಹಿಣಿಯಾಗಿದ್ದು ಜೆಸಿರೇಟ್ ಸದಸ್ಯರೂ ಆಗಿದ್ದು ಈ ದಂಪತಿಯ ಸಹಕಾರ ಪುತ್ರಿಯ ಸಾಧನೆಗೆ ಕೈಗನ್ನಡಿಯಾಯಿತು.
ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಹೆವೆನ್ ರೋಜ್ ಆಂಡ್ ಸಿಜ್ಲಿಂಗ್ ಗೈಸ್ ಪ್ರಾಯೋಜಕತ್ವದಲ್ಲಿ ಏರ್ಪಡಿಸಿದ್ದ ಮಿಸ್ ಸ್ಪರ್ಧೆಯಲ್ಲಿ ನೂರು ಸ್ಪರ್ಧಾಳುಗಳು ಭಾಗವಹಿಸಿದ್ದರು. ಅದರಲ್ಲಿ ಅಂತಿಮ ಆಯ್ಕೆ ಸುತ್ತಿಗೆ 36 ಸ್ಪರ್ಧಿಗಳು ಆಯ್ಕೆಯಾದರು.ಅದರಲ್ಲಿ ಕೊನೆಯ ಸುತ್ತಿನ 10 ಮಂದಿಯಲ್ಲಿ ಸುಷ್ಮಾ ಎಸ್. ಶೆಟ್ಟಿ ಅವರು ಆಯ್ಕೆಯಾಗಿ ‘ಮಿಸ್ ಮಂಗಳೂರು’ ಪಟ್ಟವನ್ನು ಅಲಂಕರಿಸಿಕೊಂಡರು.