ಇತ್ತೀಚಿನ ಸುದ್ದಿ
ಮಂಗಳೂರು ಆಟೋ ಸ್ಫೋಟಕ್ಕೂ ಆಧಾರ್ ಕಾರ್ಡ್ ವ್ಯಕ್ತಿಗೂ ಸಂಬಂಧವಿಲ್ಲವಂತೆ: ಪ್ರೇಮ್‌ರಾಜ್ ಹುಟಗಿ ರೈಲ್ವೆ ಸಿಬ್ಬಂದಿ
20/11/2022, 21:11

ಮಂಗಳೂರು(reporterkarnataka.com): ನಗರದ ನಾಗುರಿ ಬಳಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ನ ವ್ಯಕ್ತಿಗೂ ಸ್ಫೋಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ.
ಆಟೊದಲ್ಲಿ ತುಮಕೂರಿನಲ್ಲಿ ಕೆಲಸ ಮಾಡುತ್ತಿರುವ ಪ್ರೇಮ್‌ರಾಜ್ ಹುಟಗಿ ಎಂಬವರ ಹೆಸರಲ್ಲಿದ್ದ ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಆದರೆ ಆ ವ್ಯಕ್ತಿಯನ್ನು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಢರು ಸಂಪರ್ಕಿಸಿದಾಗ ಸ್ಪೋಟ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ನನ್ನ ಆಧಾರ್ ಕಾರ್ಡ್ ಕಳೆದು ಹೋಗಿತ್ತು ಎಂದು ಮಾಹಿತಿ ನೀಡಿದ್ದಾರೆ ಎಂದು ತುಮಕೂರು ಪೊಲೀಸ್ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಆಟೋ ಸ್ಫೋಟ ಪ್ರಕರಣ ಕುರಿತು
ಪೊಲೀಸ್ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಹುಬ್ಬಳಿ ಮೂಲದ ಪ್ರೇಮರಾಜ್ ಹುಟಗಿ ಎಂಬುವವರು ತುಮಕೂರಿನಲ್ಲಿ ರೈಲ್ವೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರೈಲ್ವೆ ಟ್ರ್ಯಾಕ್ ಮೈನ್ ಟೈನರ್ ಆಗಿ ಕೆಲಸ ಮಾಡ್ತಿರುವ ಹುಟಗಿ, ಸದ್ಯ ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ 2 ವರ್ಷದಲ್ಲಿ 2 ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು ಎನ್ನಲಾಗಿದೆ.
ಧಾರವಾಡದಿಂದ ಬೆಳಗಾವಿಗೆ ಬಸ್ನಲ್ಲಿ ಹೋಗುವಾಗ ಅವರು ಮೊದಲ ಬಾರಿಗೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ನಂತರ 6
ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್ನಲ್ಲಿ ಬರುವಾಗ ಮತ್ತೊಮ್ಮೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು ಎನ್ನಲಾಗಿದೆ.
ಸ್ಫೋಟ ನಡೆದ ಜಾಗದಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ನ ಹಿನ್ನೆಲೆಯಲ್ಲಿ ಪ್ರೇಮರಾಜ್ ಹುಟಗಿ ಅವರಿಗೆ ನಿನ್ನೆ ರಾತ್ರಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಕರೆ ಮಾಡಿ ಕೂಡಲೇ ತುಮಕೂರು ಎಸ್ಪಿ ಅವರನ್ನು ಸಂಪರ್ಕಿಸುವಂತೆ ಸೂಚಿಸಿದ್ದರು. ಅದರಂತೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಅವರನ್ನು ಸಂಪರ್ಕಿಸಿ, ತನಗೂ ಮಂಗಳೂರು ಆಟೋ ಸ್ಫೋಟಕ್ಕೂ ಯಾವುದೇ ಸಂಬಂಧ ಇಲ್ಲ. ನನ್ನ ಹೆಸರಲ್ಲಿ ಈ ರೀತಿಯಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಈ ನಡುವೆ ತುಮಕೂರು ಪೊಲೀಸರು ಹಟಗಿ ಮನೆಗೆ
ನಿನ್ನೆಯೇ ಭೇಟಿ ನೀಡಿದ ವಿಚಾರಣೆ ಮಾಡಿದ್ದರು
ಎಂದು ತಿಳಿದು ಬಂದಿದೆ.