ಇತ್ತೀಚಿನ ಸುದ್ದಿ
ರಾಜಣ್ಣ ನನ್ನ ಪಿಎ ಅಲ್ಲ, ಗೊತ್ತಿರುವ ಹುಡ್ಗ ಅಷ್ಟೇ, ತನಿಖೆ ನಡೆಯುತ್ತಿರುವುದರಿಂದ ಪ್ರಕರಣ ಕುರಿತು ಪ್ರತಿಕ್ರಿಯಿಸಲಾರೆ: ಸಚಿವ ಶ್ರೀರಾಮುಲು
02/07/2021, 18:59

ಬೆಂಗಳೂರು(reporterkarnataka news): ರಾಜಣ್ಣ ನನ್ನ ಪಿಎ ಅಲ್ಲ, ನಂಗೆ ಗೊತ್ತಿರುವ ಹುಡ್ಗ. ನನ್ನ ಪರಿಚಯಸ್ಥ ಅಷ್ಟೇ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.
ರಾಜಕಾರಣಿಗಳ ಬಳಿಗೆ ಸಾಕಷ್ಟು ಜನರು ಬರುತ್ತಾರೆ. ರಾಜಣ್ಣ ಕೂಡ ಅಷ್ಟೇ. ಆತ ನನ್ನ ಪಿಎಂ ಅಲ್ಲ. ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಈಗ ತನಿಖೆ ನಡೆಯುತ್ತಿರುವುದರಿಂದ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಲಾರೆ ಎಂದು ಮಾಧ್ಯಮದ ಜತೆ ಮಾತಾಡಿದ ಸಚಿವರು ನುಡಿದರು.
ನೌಕರಿ ಕೊಡಿಸುವ, ವರ್ಗಾವಣೆ ಮಾಡಿಸುವ ನೆಪ ಹೇಳಿ ಕೋಟ್ಯಂತರ ರೂ. ವಂಚಿಸಿದ ಆರೋಪದ ಮೇಲೆ ರಾಜಣ್ಣ ಬಂಧನ ನಡೆದಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ. ವೈ. ವಿಜಯೇಂದ್ರ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಂಧನ ನಡೆದಿದೆ. ರಾಜಣ್ಣ ಅವರನ್ನು ಬೆಂಗಳೂರನಲ್ಲಿ ಸಚಿವ ಶ್ರೀರಾಮುಲು ಮನೆಯಿಂದ ಸಿಸಿಬಿ ತಂಡ ಬಂಧಿಸಿತ್ತು.
ರಾಜಣ್ಣ ಸಚಿವ ಶ್ರೀರಾಮುಲು ಜತೆಗೆ ವಿಜಯೇಂದ್ರ ಅವರ ಹೆಸರನ್ನು ಕೂಡ ದುರ್ಬಳಕೆ ಮಾಡುತ್ತಿದ್ದರು ಎಂಬ ದೂರಿನ ಹಿನ್ನೆಲೆಯಲ್ಲಿ ದಸ್ತಗಿರಿ ಮಾಡಲಾಗಿತ್ತು. ರಾಜಣ್ಣ ನೌಕರಿ ಹಾಗೂ ಅಧಿಕಾರಿಗಳಿಗೆ ವರ್ಗಾವಣೆ ಆಮಿಷಯೊಡ್ಡಿ ಕೋಟ್ಯಂತರ ಹಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಎರಡು ದಿನಗಳ ಹಿಂದೆ ರಾಜಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಗುರುವಾರ ಬೆಳಗ್ಗೆಯಿಂದ ಸಿಸಿಬಿ ಪೊಲೀಸರು ಹೊಂಚು ಹಾಕಿ ಇಂದು ರಾಜಣ್ಣ ಅವರನ್ನು ಬಂಧಿಸಿದ್ದರು.
ರಾಜಣ್ಣ ಅವರು ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಹೆಸರಲ್ಲಿಯೂ ಕೂಡ ವಂಚನೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಖುದ್ದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ರಾಮುಲು ಪಿಎ ವಿರುದ್ಧ ದೂರು ನೀಡಿದ್ದರು ಎನ್ನಲಾಗಿದೆ.