ಇತ್ತೀಚಿನ ಸುದ್ದಿ
ನಿವೃತ್ತರಾದ ಉಪ ಆಯುಕ್ತ ಗುರುಪ್ರಸಾದ್ ಚಾಲೆಂಜಿಂಗ್ ಆಫೀಸರ್: ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್
03/11/2022, 19:19

ಮಂಗಳೂರು(Reporterkarnataka.com):ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತರು (ಅಭಿವೃದ್ಧಿ)( ಪ್ರಭಾರ ) ಹಾಗೂ ಕಾರ್ಯಪಾಲಕ ಅಭಿಯಂತರರಾದ ಜಿ. ಗುರುಪ್ರಸಾದ ಅವರ ಬೀಳ್ಕೊಡುಗೆ ಸಮಾರಂಭವು ಪಾಲಿಕೆಯ ಮಂಗಳ ಸಭಾಂಗಣದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಅವರು ಮಾತನಾಡಿ, ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಭಾರತ ತಂಡದ ಜವಾಬ್ದಾರಿಯನ್ನು ಹೊತ್ತು ಭಾರತದ ಮುನ್ನಡೆಗೆ ಹೇಗೆ ಕಾರಣರಾದರೋ ಅದೇ ರೀತಿ ಗುರುಪ್ರಸಾದ್ ಅವರು ಡೆಲ್ಲಿಯಿಂದ ತನ್ನ ವೃತ್ತಿ ಜೀವನವನ್ನು ಆರಂಭಿಸಿ, ವಿವಿಧ ಕಡೆಗಳಲ್ಲಿ ಕೆಲಸ ನಿರ್ವಹಿಸಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯ ಪಾಲಕ ಅಭಿಯಂತರ ರ ಹುದ್ದೆಯನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿ ಕಳೆದ ಆರು ತಿಂಗಳಿನಿಂದ ಉಪ ಆಯುಕ್ತರು ( ಅಭಿವೃದ್ಧಿ ) ಹುದ್ದೆಯ ಜವಾಬ್ದಾರಿಯನ್ನು ಹೊತ್ತು ನನ್ನ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇಂದಿನ ಈ ಬೀಳ್ಕೊಡುಗೆ ಸಮಾರಂಭಕ್ಕೆ ಇಂಜಿನಿಯರಿಂಗ್ ವಿಭಾಗ ಮಾತ್ರವಲ್ಲದೆ ಇತರ ವಿಭಾಗದವರು ಭಾಗವಹಿಸಿದ್ದನ್ನು ನೋಡಿದಾಗ ಎಲ್ಲರ ಜೊತೆ ಹೊಂದಿಕೊಂಡು ಹೋಗುವ ಮನೋಭಾವ ಗುರುಪ್ರಸಾದ ಅವರಲ್ಲಿ ಇರುವುದು ಕಂಡುಬರುತ್ತದೆ. ಕೋವಿಡ್ ಸಮಯದಲ್ಲಾಗಲಿ, ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಾಗಲಿ, ಸುರತ್ಕಲ್ ಹೊಸ ವಲಯ ಕಚೇರಿ ನಿರ್ಮಾಣ ಕಾರ್ಯದಲ್ಲಾಗಲಿ, ಪಚ್ಚನಾಡಿ ಭಾಗದಲ್ಲಿನ ಸಮಸ್ಯೆಯಾಗಲಿ ಎಲ್ಲವನ್ನು ಶಾಂತ ರೀತಿಯಲ್ಲಿ ನಿಭಾಯಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯ. ಯಾವ ಸಮಯದಲ್ಲಾಗಲಿ ದೂರವಾಣಿ ಕರೆಗೆ ಬಹುಬೇಗನೆ ಸ್ಪಂದಿಸುವ ಗುಣ ಇವರದ್ದಾಗಿದೆ. ಒಟ್ಟಿನಲ್ಲಿ ಇವರೊಬ್ಬ ಯಶಸ್ವೀ ಅಧಿಕಾರಿ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪ ಆಯುಕ್ತ ರಾದ (ಆಡಳಿತ ) ರವಿಕುಮಾರ್ ಮಾತನಾಡಿ, ಕಳೆದ 40 ವರ್ಷಗಳಲ್ಲಿ ವಿವಿಧ ಕಡೆಗಳಲ್ಲಿ ದುಡಿದ ಅನುಭವಿ ಅಧಿಕಾರಿಯಾದ ಗುರುಪ್ರಸಾದ್ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಉಪ ಆಯುಕ್ತರು( ಅಭಿವೃದ್ಧಿ ) ಹುದ್ದೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
ಸಮಾರಂಭದ ಕೇಂದ್ರಬಿಂದು ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ. ಗುರುಪ್ರಸಾದ್, ಕಳೆದ 40 ವರ್ಷಗಳಿಂದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ, ಎರಡು ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯಪಾಲಕ ಅಭಿಯಂತರಾಗಿ ಸೇವೆ ಸಲ್ಲಿಸಿದ್ದು ಈ ಸಂದರ್ಭದಲ್ಲಿ ಮಾನ್ಯ ಆಯುಕ್ತರರಿಂದ ಹಿಡಿದು ಇತರ ಅಧಿಕಾರಿ ಹಾಗೂ ನೌಕರರು ಒಳ್ಳೆಯ ರೀತಿಯಲ್ಲಿ ಸ್ಪಂದನೆ ನೀಡಿದ್ದಾರಲ್ಲದೆ, ಕೋವಿಡ್ ಸಮಯದಲ್ಲಿ ಇತರ ಇಲಾಖೆಗಳಿಂದಲೂ ನೆರವಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅಬ್ದುಲ್ ಖಾದರ್ ಡಿ. ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಲತಾ ಕಲ್ಲಡ್ಕ ಅವರು ಗುರುಪ್ರಸಾದ್ ಅವರ ಕಿರು ಪರಿಚಯ ನಡೆಸಿಕೊಟ್ಟರು. ಮೇಯರ್ ಆಪ್ತ ಸಹಾಯಕ ಶರಣ್, ಕಿರಿಯ ಅಭಿಯಂತರರಾದ ನಿತ್ಯಾನಂದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಮೋನಪ್ಪ ಅವರು ಪ್ರಾರ್ಥಿಸಿದರು. ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಶೇಖರ್ ವಂದಿಸಿದರು.