ಇತ್ತೀಚಿನ ಸುದ್ದಿ
ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ 6 ತಿಂಗಳೊಳಗೆ ಪರಿಹಾರ: ಸುಪ್ರೀಂ ಕೋರ್ಟ್ ಆದೇಶ
30/06/2021, 21:39
ನವದೆಹಲಿ(reporterkarnataka news): ಕೊರೊನಾದಿಂದ ಮೃತಪಟ್ಟವರ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೃತಪಟ್ಟ ಪ್ರತಿ ಕುಟುಂಬಗಳಿಗೆ ಕನಿಷ್ಠ ಪರಿಹಾರ ಕೊಡುವ ವ್ಯವಸ್ಥೆಯನ್ನು 6 ತಿಂಗಳ ಒಳಗೆ ರೂಪಿಸಬೇಕೆಂದು
ನ್ಯಾ.ಅಶೋಕ್ ಭೂಷಣ್ ಅವರಿದ್ದ ಪೀಠ ಮಹತ್ವದ ಆದೇಶ ಹೊರಡಿಸಿದೆ.ಕೋವಿಡ್ ನಿಂದ ಮೃತ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದ ಹಿನ್ನೆಲೆಯಲ್ಲಿ ಎನ್‍ಡಿಎಂಎ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ) ಪ್ರತಿ ಕುಟುಂಬಕ್ಕೆ ಕನಿಷ್ಠ ಪರಿಹಾರ ಸಿಗುವಂತಹ ವ್ಯವಸ್ಥೆಯನ್ನ 6 ತಿಂಗಳ ಒಳಗೆ ರೂಪಿಸಬೇಕು ಎಂದು ಸೂಚಿಸಿದೆ.
ಕೊರೊನಾದಿಂದ ಮೃತರ ಕುಟುಂಬಕ್ಕೆ ವಿಪತ್ತು ಕಾಯ್ದೆಯಡಿ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳ ಲಾಗಿತ್ತು. ಇದೇ ಅರ್ಜಿಯಲ್ಲಿ ಕೋವಿಡ್‍ಗೆ ಸಂಬಂಧಿಸಿದ ಮರಣ ಪ್ರಮಾಣ ಪತ್ರ ನೀಡುವ ವ್ಯವಸ್ಥೆಯ ಸರಳೀಕರಣದ ಬಗ್ಗೆ ಕೇಳಲಾಗಿತ್ತು. ಈ ಸಂಬಂಧ ನ್ಯಾಯಾಲಯ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು.
ದೇಶದಲ್ಲಿ ಕೊರೊನಾದಿಂದ ಒಟ್ಟು 3,98,454 ಮಂದಿ ಮೃತಪಟ್ಟಿದ್ದಾರೆ. ಎನ್‍ಡಿಎಂಎ ಕೋವಿಡ್‍ಗೆ ಸಂಬಂಧಿಸಿದ ಮರಣ ಪ್ರಮಾಣ ಪತ್ರಗಳನ್ನು ವಿತರಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಪರಿಹಾರ ನೀಡುವ ಬಗ್ಗೆ ಎನ್‍ಡಿಎಂಎ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ಮಾರ್ಗಸೂಚಿ ರೂಪಿಸುವಲ್ಲಿ ವಿಫಲವಾಗಿದೆ ಎಂದು ಎನ್‍ಡಿಎಂಗೆ ನ್ಯಾಯಾಲಯ ಚಾಟಿ ಬೀಸಿತ್ತು.