ಇತ್ತೀಚಿನ ಸುದ್ದಿ
ಜಾತ್ರೆಯಂತೆ ವೇಳೈಸಿದ ಕುಡ್ಲದ ‘ಪಿಲಿಪರ್ಬ’: 25 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು; ಒಂದು ಡಜನ್ ಹುಲಿ ತಂಡ!
04/10/2022, 20:15
ಮಂಗಳೂರು(reporter Karnataka.com):ಅಂದಾಜು 25 ಸಾವಿರ ಜನರು, ಹನ್ನೆರಡು ತಂಡಗಳು, ಆಗಮಿಸಿದ ನಾಗರಿಕರಿಗೆ ಉಚಿತ ಉಟೋಪಚಾರದೊಂದಿಗೆ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ಕುಡ್ಲದ ಪಿಲಿಪರ್ಬ 2022 ಇತಿಹಾಸದ ವರ್ಣರಂಜಿತ ಅಧ್ಯಾಯದಲ್ಲಿ ತನ್ನದೇ ವಿಶಿಷ್ಟ ಛಾಪನ್ನು ಒತ್ತಿದೆ.
ಸಂಸದರೂ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಮತ್ತು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಡೆದ ಹುಲಿವೇಷ ಹಾಗೂ ಕುಣಿತ ಸಾಂಪ್ರದಾಯಿಕವಾಗಿ ಅಕ್ಟೋಬರ್ 2 ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಅನಾವರಣಗೊಂಡಿತು. ಬೆಳಿಗ್ಗೆ ಪುರೋಹಿತರಿಂದ ಗಣಹೋಮ ನಡೆಸಿ ಸ್ಥಳವನ್ನು ಶುದ್ಧಿಕರಿಸಲಾಯಿತು. ಪ್ರತಿ ತಂಡಗಳು ಉತ್ತಮ ಆಹಾರವನ್ನು ಸೇವಿಸಲು ಅನುಕೂಲವಾಗುವ ದೃಷ್ಟಿಯಿಂದ ಕುದ್ಮುಲ್ ರಂಗರಾವ್ ಪುರಭವನದ ಮಿನಿ ಸಭಾಂಗಣವನ್ನು ಕಾಯ್ದಿರಿಸಲಾಗಿತ್ತು. ತಂಡಗಳಿಗೆ ವಿಐಪಿ ಸತ್ಕಾರದೊಂದಿಗೆ ರೌಂಡ್ ಟೇಬಲ್ ವ್ಯವಸ್ಥೆಯಲ್ಲಿ ಆಹಾರ ಉಣಬಡಿಸುವ ವ್ಯವಸ್ಥೆ ಮಾಡಲಾಗಿತ್ತು. ಆಗಮಿಸಿದ ಎಲ್ಲಾ ಸಾಂಸ್ಕೃತಿಕ ಪ್ರೇಮಿಗಳಿಗೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಉಚಿತ ಉಟೋಪಚಾರ ವ್ಯವಸ್ಥೆಯನ್ನು ಆಯೋಜಕರು ಮಾಡಿದ್ದರು. ಮಕ್ಕಳಿಗೆ ಮತ್ತು ಆಸಕ್ತರಿಗಾಗಿ ಮುಖಕ್ಕೆ ಬಣ್ಣ ಹಾಕುವ ಅವಕಾಶವಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಹುಲಿಕುಣಿತ ನೋಡಲು ಆಗಮಿಸಿದ ಜನರಿಗೆ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹುಲಿಯ ಮುಖದಿಂದ ಒಳಗೆ ಕಾಲಿಡುವ ಅನುಭವವೇ ವಿಶಿಷ್ಟವಾಗಿತ್ತು. ಅಲ್ಲಿ ಅನೇಕರು ಫೋಟೋ ಕ್ಲಿಕ್ಕಿಸಿ ಆನಂದಪಟ್ಟರು. ಇನ್ನು ಹುಲಿ ಮೈಯ ಸೆಲ್ಫಿ ಸ್ಟ್ಯಾಂಡ್ ನ ಹಿಂದೆ ಫೋಟೋ ತೆಗೆಸಿದ ಜನರು ಅದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿ ಖುಷಿಪಟ್ಟರು. ಇನ್ನು ಆಗಮಿಸಿದ ಜನರು ತಮ್ಮ ವಾಹನಗಳನ್ನು ಪಾರ್ಕ್ ಮಾಡಲು ಅನುಕೂಲವಾಗುವಷ್ಟು ಜಾಗದ ವ್ಯವಸ್ಥೆ ಮಾಡಲಾಗಿತ್ತು. ಸಭಾಂಗಣದ ಒಳಗೆ ಜನ ಕಿಕ್ಕಿರಿದು ತುಂಬಿದ ಕಾರಣದಿಂದ ಹೊರಗೆ ಅಲ್ಲಲ್ಲಿ LED ಸ್ಕ್ರೀನ್ ಗಳನ್ನು ಹಾಕಿ, ಆಸನದ ವ್ಯವಸ್ಥೆಯೊಂದಿಗೆ ವೀಕ್ಷಿಸುವ ಅವಕಾಶ ನೀಡಲಾಗಿತ್ತು. ಅತಿಥಿಗಳಿಗೆ ತುಳುನಾಡಿನ ಸಾಂಪ್ರದಾಯಿಕ ಪಾನೀಯ ಎಳನೀರು ನೀಡಿ ಸತ್ಕರಿಸಲಾಯಿತು. ಇನ್ನು ಹುಲಿ ಮಂಡೆ, ವಸ್ತ್ರಗಳನ್ನು ಮಾರುವ ಮಳಿಗೆಗಳಲ್ಲಿ ಉತ್ತಮ ವ್ಯವಹಾರ ಕಂಡುಬಂದಿತು. ಮೈದಾನ ಅಕ್ಷರಶ: ಜಾತ್ರೆಯ ವೈಭವವನ್ನು ಕಂಡಿದ್ದು, ಬೆಳಿಗ್ಗೆಯಿಂದ ಮಧ್ಯರಾತ್ರಿಯ ತನಕ ಹುಲಿಕುಣಿತದ ಅಭಿಮಾನಿಗಳು ತಂಡೋಪತಂಡವಾಗಿ ಬಂದು ಸಂಭ್ರಮಿಸಿದರು.