ಇತ್ತೀಚಿನ ಸುದ್ದಿ
ವಿಶ್ವದ ಸೃಷ್ಟಿಕರ್ತ ವಿಶ್ವಕರ್ಮರು ನಡೆದು ಬಂದ ದಾರಿಯನ್ನು ಎಂದಿಗೂ ಮರೆಯಬಾರದು: ಸಂಸದ ಎಸ್. ಮುನಿಸ್ವಾಮಿ
18/09/2022, 10:26
ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಈ ಪ್ರಪಂಚದ ಶಕ್ತಿ ಚೈತನ್ಯವೇ ಕರ್ಮ , ಕರ್ಮವಿದ್ದಲ್ಲಿ ಜೀವ ಚೈತನ್ಯವಿಲ್ಲ . ಪ್ರಪಂಚದ ತಂದೆ ವಿಶ್ವಕರ್ಮ ಎಲ್ಲಾ ದೇವರುಗಳನ್ನು ಸೃಷ್ಟಿಸಿ ಅವರಿಗೆಲ್ಲ ಹೆಸರಿಟ್ಟವರು . ವಿಶ್ವದ ಸೃಷ್ಟಿಕರ್ತ ವಿಶ್ವಕರ್ಮ ರವರು ನಡೆದು ಬಂದ ದಾರಿಯನ್ನು ಎಂದಿಗೂ ಮರೆಯಬಾರದು ಎಂದು ಕೋಲಾರ ಲೋಕಸಭಾ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು . ಇಂದು ನಗರದ ಶ್ರೀ ಟಿ.ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಬೆಂಗಳೂರು , ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ವಿಶ್ವಕರ್ಮ ಮಹೋತ್ಸವ ಸಮಿತಿ , ಕೋಲಾರ ಇವರ ಸಹಯೋಗದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೋಲಾರ ಜಿಲ್ಲೆಯಲ್ಲಿ ಕಲ್ಲಿಗೆ ಮತ್ತು ಶಿಲ್ಪ ಕಲಾವಿದರಿಗೆ ಉತ್ತಮ ಸಂಬಂಧವಿದೆ . ಜಿಲ್ಲೆಯ ಶಿಲ್ಪಕಲೆ ವಿಶ್ವಕ್ಕೆ ತಲುಪಬೇಕು .
ಶಿವಾರಪಟ್ಟಣವನ್ನು ಶಿಲ್ಪ ಗ್ರಾಮವನ್ನಾಗಿಸಲು ಎರಡು ಕೋಟಿ ಹಣವನ್ನು ನೀಡಲಾಗಿದೆ . ಬ್ರಹ್ಮಾಂಡದ ಸೃಷ್ಟಿಕರ್ತ ಭಗವಾನ್ ವಿಶ್ವಕರ್ಮರವರ ಮಾರ್ಗದರ್ಶನಗಳನ್ನು ಮುಂದಿನ ಪೀಳೆಗೆಗೆ ಸಾರಬೇಕು . ಸಮುದಾಯದ ಯಾವುದೇ ಬೇಡಿಕೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರದ ಮೂಲಕ ಸಲ್ಲಿಸಿದ್ದಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ನಿಯಮಾನುಸಾರ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದರು . ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ ರವರು ಮಾತನಾಡಿ , ಸಮಾಜದಲ್ಲಿ ಎಲ್ಲರಿಗೂ ಹೊಂದಿಕೊಂಡು ಹೋಗುವಂತಹ ಸಮುದಾಯ ವಿಶ್ವಕರ್ಮ ಸಮುದಾಯವಾಗಿದೆ . ವಿಶ್ವಕರ್ಮ ಜನಾಂಗದವರು ಎಲ್ಲಾ ರಂಗದಲ್ಲಿ ಕಾರ್ಯನಿರ್ವಹಿಸುವಂತಹ ವ್ಯಕ್ತಿಗಳಾಗಿರುತ್ತಾರೆ . ವಿಶ್ವಕರ್ಮ ಜಯಂತಿಯನ್ನು ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ತಿಳಿಸಿದರು . ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಮಾತನಾಡಿ , ವಿಶ್ವವನ್ನು ಹಾಗೂ ಸ್ವರ್ಗಲೋಕವನ್ನು ಸೃಷ್ಟಿಸಿದ ವ್ಯಕ್ತಿ ವಿಶ್ವಕರ್ಮ , ಋಗ್ವದದಲ್ಲಿ ವಿಶ್ವಕರ್ಮರ ಬಗ್ಗೆ ವಿವರ ಉಲ್ಲೇಖಿಸಲಾಗಿದೆ . ವಿಶ್ವಕರ್ಮರು ಕಲ್ಲನ್ನು ಮೂರ್ತಿಯನ್ನಾಗಿ ಮಾಡುವುದರಿಂದ ಆ ಕಲ್ಲಿನ ಮೂರ್ತಿಯು ಆಕರ್ಷಕವಾಗಿ ಕಾಣುತ್ತದೆ . ವಿಶ್ವಕರ್ಮ ಸಮುದಾಯದ ಯಾವುದೇ ಬೇಡಿಕೆಗಳಿದ್ದಲ್ಲಿ ಕಾನೂನಿನ ರೀತಿಯಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು . ಕಾರ್ಯಕ್ರಮಕ್ಕೂ ಮುನ್ನಾ ನಗರದ ಶ್ರೀ ಕಾಳಿಕಾಂಬ ಕಮ್ಮಟೇಶ್ವರ ಸ್ವಾಮಿ ದೇವಾಲಯದ ಬಳಿ ಮೆರವಣಿಗೆಗೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ , ಹಿರಿಯ ಪತ್ರಕರ್ತ ಕಲಾವಿದ ವಿಷ್ಣು ಸೇರಿದಂತೆ ಮತ್ತಿತರರಿದ್ದರು . ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು , ಕೋಲಾರ ಡಿವೈಎಸ್ಪಿ ಮುರಳೀಧರ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎನ್.ನರೇಂದ್ರಬಾಬು , ಹಿರಿಯ ಪತ್ರಕರ್ತ ಕಲಾವಿದ ವಿಷ್ಣು , ಸಮುದಾಯದ ಮುಖಂಡರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು .