ಇತ್ತೀಚಿನ ಸುದ್ದಿ
ಮಂಗಳೂರು: ಖಾಕಿ ಮಹಿಳೆಯರಿಗೆ ಒತ್ತಡ ನಿರ್ವಹಣೆ ಕಾರ್ಯಾಗಾರ ಆರಂಭ
14/09/2022, 21:25

ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com):ವೃತ್ತಿ ನಿಭಾಯಿಸುವುದರ ಜತೆಗೆ ಕೌಟುಂಬಿಕ ನಿರ್ವಹಣೆ ಬಗ್ಗೆ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ನಗರದ ಪೊಲೀಸ್ ಕಮಿಷನರೇಟ್ ವತಿಯಿಂದ 3 ದಿನಗಳ ಒತ್ತಡ ನಿರ್ವಹಣೆ ತರಬೇತಿ ಕಾರ್ಯಾಗಾರ ಆರಂಭಿಸಲಾಗಿದೆ.
ಬುಧವಾರ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಇದರ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು, ‘ಕೆಲವು ವರ್ಷಗಳ ಈಚೆಗೆ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಸಂಖ್ಯೆ ಹೆಚ್ಚಿದೆ. ವೃತ್ತಿ ಬದುಕಿನಲ್ಲಿ ಸಾಕಷ್ಟು ಒತ್ತಡ ಎದುರಿಸುವ ಪೊಲೀಸರು, ಅದರಲ್ಲೂ ವಿಶೇಷವಾಗಿ ಮಹಿಳಾ ಸಿಬ್ಬಂದಿಯ ಕರ್ತವ್ಯದಲ್ಲಿ ಇನ್ನಷ್ಟು ಹೆಚ್ಚು ದಕ್ಷತೆ, ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ತರಬೇತಿ ಆಯೋಜಿಸಲಾಗಿದೆ ಎಂದರು.
ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮಹತ್ವದ್ದಾಗಿದೆ. ಪರಿಸ್ಥಿತಿ ನಿಭಾಯಿಸುವ ಕಲೆ ಅರಿತರೆ, ಕೆಲಸ ಸುಲಭವಾಗುತ್ತದೆ ಎಂದು ಪೊಲೀಸ್ ಕಮಿಷನರ್ ನುಡಿದರು.
ಆರ್ಟ್ ಆಫ್ ಲಿವಿಂಗ್‍ನ ತರಬೇತುರ್ತಿ ರಶ್ಮಿ ಅನಿಲ್ ಕುಮಾರ್, ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್, ಟ್ರಾಫಿಕ್ ಎಸಿಪಿ ಗೀತಾ ಕುಲಕರ್ಣಿ ಉಪಸ್ಥಿತರಿದ್ದರು.
ಇನ್‌ಸ್ಪೆಕ್ಟರ್ ಭಾರತಿ ಸ್ವಾಗತಿಸಿದರು. ಎಸಿಪಿ ಪಿ.ಎ. ಹೆಗಡೆ ವಂದಿಸಿದರು.
ಯಾವಾಗಲೂ ಖಾಕಿ ತೊಟ್ಟು ಡ್ಯೂಟಿಯಲ್ಲಿರುವ ಮಹಿಳಾ ಪೊಲೀಸರು, ಶ್ವೇತ ವಸ್ತ್ರ ಧರಿಸಿ ತರಬೇತಿಯಲ್ಲಿ ಭಾಗವಹಿಸಿದ್ದಾರೆ.