ಇತ್ತೀಚಿನ ಸುದ್ದಿ
ಮೊಟ್ಟೆ ಎಸೆಯೋದು ಹೇಡಿಗಳ ಕೆಲಸ; ಇವರಿಗೆ ಸರಕಾರ ನಡೆಸೋಕೆ ಬರೋಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
18/08/2022, 21:38
ಮಡಿಕೇರಿ(reporterkarnataka.com): ಮೊಟ್ಟೆ ಎಸೆಯೋದು ಹೇಡಿಗಳು ಮಾಡುವ ಕೆಲಸ. ಇವರು ಇಲ್ಲಿನ ಬಿಜೆಪಿ ಕಾರ್ಯಕರ್ತರಾ? ದುಡ್ಡು ಕೊಟ್ಟು ಇವರನ್ನೆಲ್ಲ ಕರೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಾಧ್ಯಮ ಜತೆ ಗುರುವಾರ ಮಾತನಾಡಿದ ಅವರು, ಇವರಿಗೆ ಸರಕಾರ ನಡೆಸೋಕೆ ಬರೋಲ್ಲ. ಸರಕಾರವೂ ಇಲ್ಲ. ಆಡಳಿತವೂ ಇಲ್ಲ. ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಇದೆಲ್ಲ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಲು ಗುರುವಾರ ಬೆಳಗ್ಗೆ ಕೊಡಗು ಜಿಲ್ಲೆಗೆ ಆಗಮಿಸಿದ್ದರು. ಪ್ರತಿಪಕ್ಷದ ನಾಯಕರೂ ಆಗಿರುವ ಅವರು ಕೊಡಗು ಜಿಲ್ಲೆ ಪ್ರವೇಶಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಎನ್ನಲಾದ ಗುಂಪೊಂದು ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿತ್ತು. ಈ ಸಂದರ್ಭದಲ್ಲಿ ಅವರ ಕಾರಿನೊಳಗೆ ಸಾವರ್ಕರ್ ಅವರ ಫೋಟೋವನ್ನು ಎಸೆಯಲಾಯಿತು. ಕಾರಿಗೆ ಮೊಟ್ಟೆ ಕೂಡ ಎಸೆಯಲಾಯಿತು. ಮಾಜಿ ಮುಖ್ಯಮಂತ್ರಿಗೆ ರಕ್ಷಣೆ ನೀಡಲು ಕೊಡಗು ಜಿಲ್ಲಾ ಪೊಲೀಸರು ವಿಫಲರಾಗಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.