ಇತ್ತೀಚಿನ ಸುದ್ದಿ
ನೆರೆ ಹಾವಳಿಗೆ ಕೇಂದ್ರದ ಅನುದಾನ ಕೇಳಲು ರಾಜ್ಯ ಬಿಜೆಪಿಗೆ ದಮ್ಮು ಇಲ್ಲ; ಪ್ರತಿಪಕ್ಷದ ಉಪ ನಾಯಕ ಖಾದರ್ ಕಿಡಿ
06/08/2022, 20:40
ಮಂಗಳೂರು(reporterkarnataka.com): ರಾಜ್ಯದಲ್ಲಿ ಜನರು ಅತಿವೃಷ್ಠಿ ಹಾಗೂ ನೆರೆ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಆದರೆ ರಾಜ್ಯ ಸರಕಾರದ ಬಳಿ ಈಗ ಅತಿವೃಷ್ಟಿಗೆ ಯಾವುದೇ ಯೋಜನೆಗಳಿಲ್ಲ. ಹಾಗೇ ಕೇಂದ್ರದಿಂದ ಅನುದಾನ ಕೇಳುವ ಧೈರ್ಯವೂ ಇವರಿಗಿಲ್ಲ.
ಇದರಿಂದ ಸಂತ್ರಸ್ತರು ಅನಾಥರಾಗಿದ್ದಾರೆ ಎಂದು ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಅತಿವೃಷ್ಠಿ ಹಾಗೂ ನೆರೆ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಆದರೆ 25 ಮಂದಿ ಸಂಸದರು ಮತ್ತು ರಾಜ್ಯ ಸರ್ಕಾರ ಗೃಹ ಸಚಿವರ ಬಳಿ ಎನ್‌ಡಿಆರ್‌ಫ್ ಅನುದಾನ ಯಾಕೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ಕೇಂದ್ರ ಗೃಹ ಸಚಿವರು ಮೊನ್ನೆ ಬೆಂಗಳೂರಿಗೆ ಬಂದಾಗ ಅವರ ಬಳಿ ಪಕ್ಷದ ಬಗ್ಗೆ ಮಾತನಾಡುತ್ತಾರೆ ಹೊರತು ಎನ್‌ಡಿಆರ್‌ಎಫ್ ಅನುದಾನ ಕೇಳಲು ಇವರಿಗೆ ಬಾಯಿ ಬರುವುದಿಲ್ಲ. ಇವರು ಜನರನ್ನು ಉಳಿಸುವ ಬದಲು ಪಕ್ಷ ಉಳಿಸುವ ಬಗ್ಗೆ ಗೃಹ ಸಚಿವರಲ್ಲಿ ಮಾತನಾಡುತ್ತಾರೆ ಎಂದು ಖಾದರ್ ಕಿಡಿ ಕಾರಿದರು.
ಬಿಜೆಪಿಯವರಿಗೆ ಕೇಂದ್ರದ ಬಳಿ ಅನುದಾನ ಕೇಳಲು ಮುಜುಗರ ಮತ್ತು ಭಯ ಆಗೋದಾದರೆ ಸರ್ವಪಕ್ಷದ ನಿಯೋಗ ಕರೆದುಕೊಂಡು ಹೋಗಲಿ. ರಾಜ್ಯದ ಪರವಾಗಿ ನಾವು ಮಾತನಾಡುತ್ತೇವೆ. ಸುಳ್ಯ ಸಂಪಾಜೆಗೆ ವಿಶೇಷ ತಂಡ ಕಳುಹಿಸಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಶಾಂತಿ- ಸಾಮರಸ್ಯಕ್ಕೆ ಜಿಲ್ಲಾಡಳಿತದ ಯಾವುದೇ ತೀರ್ಮಾನಕ್ಕೆ ನಾವು ಬದ್ಧ. ಆದರೆ ಈಗ 3 ಪರ್ಸೆಂಟ್ ಸಮಾಜಘಾತುಕರಿಗೆ ಹೆದರಿ 97 ಶೇಕಡಾ ಜನರಿಗೆ ಕಷ್ಟ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.