8:44 PM Sunday19 - January 2025
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರ ಸಮ್ಮತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಗ್ರಾಪಂ ಮಾಜಿ ಅಧ್ಯಕ್ಷರಿಂದ ಅಂತ್ಯ ಸಂಸ್ಕಾರ: ರಾತ್ರಿ… ಜಾತಿಗಣತಿ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ… ಸಂಭ್ರಮ- ಸಡಗರಕ್ಕೆ ಸಾಕ್ಷಿಯಾದ ಕಡಲನಗರಿಯ ಮಂಗಳಾ ಕ್ರೀಡಾಂಗಣ: 4500 ಕ್ರೀಡಾಪಟುಗಳ ಪಾದಸ್ಪರ್ಶ ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ, ಆದರೆ ಒಲಂಪಿಕ್ ಮೆಡಲ್ ತನ್ನಿ: ಮಂಗಳೂರಿನಲ್ಲಿ ಸಿಎಂ… ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಸಿಎಂ ಸಿದ್ದರಾಮಯ್ಯ… ಮಂಗಳೂರಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ: ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ…

ಇತ್ತೀಚಿನ ಸುದ್ದಿ

ಸುರತ್ಕಲ್ ಫಾಝಿಲ್ ಹತ್ಯೆ: ಹಂತಕರು ಹಾಕಿದ ಸ್ಕೆಚ್  ಬಗ್ಗೆ ಪೊಲೀಸ್ ಕಮಿಷನರ್ ಹೇಳಿದ್ದೇನು? 

02/08/2022, 21:12

ಮಂಗಳೂರು(reporterkarnataka.com): ಸುರತ್ಕಲ್ ಫಾಝಿಲ್ ಹತ್ಯೆಗೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಹಂತಕರ ಪತ್ತೆಗೆ ಸುಮಾರು 7-8 ತಂಡಗಳನ್ನು ರಚಿಸಲಾಗಿತ್ತು. ಕೃತ್ಯಕ್ಕೆ ಉಪಯೋಗಿಸಿದ ಕಾರು ಅಜಿತ್ ಕ್ರಾಸ್ತಾ ಎಂಬಾತನಿಗೆ ಸೇರಿದ್ದಾಗಿದೆ. ಕಾರನ್ನು ವಶಕ್ಕೆ ಪಡೆದು ಕಾರಿನ ಮಾಲೀಕನನ್ನು ಬಂಧಿಸಲಾಗಿದೆ. ಅಜಿತ್ ಕ್ರಾಸ್ತಾಗೆ ಕೊಲೆಯ ಮಾಹಿತಿ ಇದ್ದರೂ ಆತ ಕಾರು ನೀಡಿ ಕೊಲೆಗೆ ಸಹಕರಿಸಿದ್ದಾನೆ. ಆದ್ದರಿಂದ ಅತನನ್ನೂ ಬಂಧಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೇರಳಕ್ಕೆ ತೆರಳಿದ ತನಿಖಾ ತಂಡ ಅಲ್ಲಿ ಶೋಧ ಕಾರ್ಯ ನಡೆಸಿತ್ತು ಎಂದು ಅವರು ಮಾಹಿತಿ ನೀಡಿದರು.

ಒಟ್ಟು 6 ಮಂದಿಯನ್ನು ಮಂಗಳವಾರ ಬೆಳಗ್ಗೆ ಬಂಧಿಸಿದ್ದೇವೆ. ಸುಹಾಶ್ ಶೆಟ್ಟಿ (29), ಮೋಹನ್ (26), ಗಿರಿಧರ್ (23), ಅಭಿಷೇಕ್ (21), ಶ್ರೀನಿವಾಸ್ (23) ಮತ್ತು ದೀಕ್ಷಿತ್ (21) ಬಂಧಿತರು.

ಕೃತ್ಯಕ್ಕೆ ಸಂಚು: ಜು.26ರಂದು ರಾತ್ರಿ ಬಜಪೆ ನಿವಾಸಿ ಸುಹಾಶ್ ಶೆಟ್ಟಿ ತನ್ನ ಸ್ನೇಹಿತ ಅಭಿಷೇಕ್ ಗೆ ಕರೆ ಮಾಡಿ ಕೃತ್ಯದ ಬಗ್ಗೆ ವಿವರವಾಗಿ ಚರ್ಚಿಸುತ್ತಾನೆ. ಜು.27ರಂದು ಮಧ್ಯಾಹ್ನದ ವೇಳೆಗೆ ಯಾರನ್ನಾದರೂ ಕೊಲೆ ಮಾಡಬೇಕು ಎಂದು ತಿಳಿಸುತ್ತಾನೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್, ನಾಳೆ ಮುಖತಃ ಭೇಟಿ ಮಾಡಿ ಮಾತನಾಡೋಣ ಎಂದು ಹೇಳಿ ಮೊಬೈಲ್ ಕರೆ ಕಟ್ ಮಾಡುತ್ತಾನೆ. ಅದಾದ ಬಳಿಕ ಮರುದಿನ ಅಂದರೆ ಜು. 27ರಂದು ಸುಹಾಶ್ ಶೆಟ್ಟಿ ಸುರತ್ಕಲ್ ಹೊರವಲಯದಲ್ಲಿರುವ ಹೋಟೆಲ್ ಗೆ ಹೋಗಿ ಅಲ್ಲಿಗೆ ಗಿರಿಧರ್ ನನ್ನು ಕರೆಸಿಕೊಳ್ಳುತ್ತಾನೆ. ಕಾರು, ಶಸ್ತ್ರಾಸ್ತ್ರ ಮತ್ತು ಕೆಲವು ಹುಡುಗರು ಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಾರೆ. ಅಲ್ಲಿಗೆ ಮೋಹನ್ ಎಂಬಾತನೂ ಬಂದು ಸೇರಿಕೊಳ್ಳುತ್ತಾನೆ. ಕೃತ್ಯಕ್ಕೆ ತನ್ನ ಮೂವರು ಸ್ನೇಹಿತರು ಕೂಡ ಬರುತ್ತಾರೆ ಎಂದು ಮೋಹನ್ ಭರವಸೆ ನೀಡುತ್ತಾನೆ.

ಸುಹಾಶ್ ಶೆಟ್ಟಿಗೆ ಅಭಿಷೇಕ್ ಪರಿಚಯವಿದ್ದರೆ, ಮೋಹನ್ ಗೆ ನೇರವಾಗಿ ಶ್ರೀನಿವಾಸ್, ದೀಕ್ಷಿತ್ ಸಂಪರ್ಕ ಇರುತ್ತದೆ. ಮೋಹನ್ ಅಲಿಯಾಸ್ ನೇಪಾಳಿ ಮೋಹನ್ ತನ್ನ ಸ್ನೇಹಿತನಿಂದ ಕಾರು ತರುವುದಾಗಿ ಭರವಸೆ ನೀಡುತ್ತಾನೆ. ಅದರಂತೆ 27ರಂದು ಮಧ್ಯಾಹ್ನ ಮೋಹನ್ ಮತ್ತು ಗಿರಿಧರ್ ಹೋಗಿ ಬಾಡಿಗೆಗೆ ಕಾರು ತರುತ್ತಾರೆ. ಗಿರಿಧರ್ ಕಾರು ಡ್ರೈವಿಂಗ್ ಮಾಡುತ್ತಾನೆ. ನಮ್ಮ ಕೆಲಸ ಸಕ್ಸಸ್ ಆದರೆ ಮೂರು ದಿನಕ್ಕೆ 15 ಸಾವಿರ ರೂ. ಬಾಡಿಗೆ ನೀಡುವುದಾಗಿ ಕಾರು ಮಾಲೀಕನಿಗೆ ಅವರು ಭರವಸೆ ನೀಡುತ್ತಾರೆ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸುತ್ತಾರೆ.

ಅದಾದ ಬಳಿಕ 27ರಂದು ಸಂಜೆಯ ಬಳಿಕ ಸುರತ್ಕಲ್ ಹೊರವಲಯದಲ್ಲಿ ಸುಹಾಶ್ ಶೆಟ್ಟಿ, ಗಿರಿಧರ್ ಮತ್ತು ಮೋಹನ್ ಕೊಲೆಗೆ ಸಂಚು ರೂಪಿಸುತ್ತಾರೆ. ಈ ವೇಳೆ ಅವರಿಗೆ ಆಗದವರ ಕೆಲವರ ಹೆಸರುಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಅಂದು ಸಂಜೆವರೆಗೆ ಅಭಿಷೇಕ್, ದೀಕ್ಷಿತ್, ಶ್ರೀನಿವಾಸ್ ಅಲ್ಲಿಗೆ ಬಾರದ ಹಿನ್ನೆಲೆಯಲ್ಲಿ ಅಂದು ರಾತ್ರಿ ಸುಹಾಸ್ ಶೆಟ್ಟಿ ಕಾವೂರು ಜ್ಯೋತಿ ನಗರದ ತನ್ನ ಸ್ನೇಹಿತನ ಮನೆಗೆ ಹೋಗಿ ಅಲ್ಲಿ ರಾತ್ರಿ ತಂಗುತ್ತಾನೆ. ಮರು ದಿನ ಬೆಳಗ್ಗೆ ಅಂದರೆ 28ರಂದು ಬೆಳಗ್ಗೆ 5.30ಕ್ಕೆ ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ, ಮೂರು ತಲವಾರು, ಡ್ರ್ಯಾಗನ್ ಜತೆ ಬಂಟ್ವಾಳದ ಕಾರಿಂಜೇಶ್ವರ ದೇವಸ್ಥಾನಕ್ಕೆ ತೆರಳುತ್ತಾನೆ. 27ರಂದು ಸುಹಾಸ್ ಶೆಟ್ಟಿ ಸೇರಿ ಇತರರಿಗೆ ಹಳೆಯ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಗೆ ಹಾಜರಾಗಬೇಕಾಗಿರುತ್ತದೆ. ಕೋರ್ಟ್ ಹಾಜರಾಗಲು ಬಂದು ಅಲೋಶಿಯಸ್ ಪ್ರೈಮರಿ ಸ್ಕೂಲ್ ಬಳಿ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ಅಲ್ಲಿ ಕೊಲ್ಲಬೇಕಾದ ವ್ಯಕ್ತಿಯ ಟಾರ್ಗೆಟ್ ಬಗ್ಗೆ ಚರ್ಚೆ ನಡೆಯುತ್ತದೆ. ಅಲ್ಲಿ ಮುಹಮ್ಮದ್ ಫಾಝಿಲ್ ಬಗ್ಗೆ ಚರ್ಚೆ ಮಾಡಿ, ಅವರನ್ನು ಹತ್ಯೆಗೈಯ್ಯಲು ತೀರ್ಮಾನಿಸುತ್ತಾರೆ ಎಂದು ಶಶಿಕುಮಾರ್ ಮಾಹಿತಿ ನೀಡಿದರು.

ಕೋರ್ಟ್ ಗೆ ಹಾಜರಾದ ಬಳಿಕ ಮಂಕಿ ಕ್ಯಾಪ್ ಖರೀದಿಸುತ್ತಾರೆ. ಅಲ್ಲಿಂದ ಸುರತ್ಕಲ್ ಹೊರವಲಯದ ಕಿನ್ನಿಗೋಳಿ ಎಂಬಲ್ಲಿ ಬಾರ್ ಗೆ ಹೋಗಿ ಸುಹಾಶ್, ಮೋಹನ್, ಅಭಿ, ಶ್ರೀನಿವಾಸ್ ಮಧ್ಯಾಹ್ನದ ಊಟ ಮಾಡಿ ನಂತರ ಮತ್ತಿಬ್ಬರು ಆರೋಪಿಗಳನ್ನು ಸೇರಿಕೊಂಡು ಫಾಝಿಲ್ ಎಲ್ಲಿದ್ದಾನೆ ಎಂದು ತಿಳಿದುಕೊಳ್ಳಲು ಮುಂದಾಗುತ್ತಾರೆ. ಫಾಝಿಲ್ ಮಂಗಳಪೇಟೆಯಲ್ಲಿರುತ್ತಾರೆ ಎಂದು ತಿಳಿದುಕೊಂಡು ಸುರತ್ಕಲ್ ಜಂಕ್ಷನ್ ಗೆ ಬಂದು ಅಲ್ಲಿ ಕಾಯುತ್ತಿರುತ್ತಾರೆ. ಫಾಝಿಲ್ ಚಲನವಲನದ ಮೇಲೆ ನಿಗಾ ಇಟ್ಟಿರುತ್ತಾರೆ. ಜಂಕ್ಷನ್ ನಲ್ಲಿ ಎರಡು ಮೂರು ಬಾರಿ ಕಾರಿನಲ್ಲಿ ಆರೋಪಿಗಳು ಓಡಾಡುತ್ತಾರೆ ಎಂದು ಅವರು ತಿಳಿಸಿದರು.

ಅಂದು ರಾತ್ರಿ 8.30ರ ಸುಮಾರಿಗೆ ಒಟ್ಟು 6 ಜನರ ಹಂತಕರ ತಂಡ ಸುರತ್ಕಲ್ ಜಂಕ್ಷನ್ ಬಳಿ ಬರುತ್ತದೆ. ಮೂವರು ತಲವಾರುಗಳೊಂದಿಗೆ ಕಾರಿನಿಂದ ಕೆಳಗಿಳಿಯುತ್ತಾರೆ. ಸುಹಾಸ್ ಶೆಟ್ಟಿ, ಅಭಿಷೇಕ್, ಮೋಹನ್ ಹತ್ಯೆಯಲ್ಲಿ ನೇರವಾಗಿ ಪಾಲ್ಗೊಳ್ಳುತ್ತಾರೆ. ಗಿರಿಧರ್ ಡ್ರೈವಿಂಗ್ ನಲ್ಲಿರುತ್ತಾನೆ, ಶ್ರೀನಿವಾಸ್ ಎಂಬಾತ, ಯಾರಾದರೂ ತಡೆಯಲು ಬಂದರೆ ಅವರನ್ನು ಎದುರಿಸಲು ಸಿದ್ಧನಾಗಿ ನಿಂತಿರುತ್ತಾನೆ. ದೀಕ್ಷಿತ್ ಕಾರಿನಲ್ಲಿ ಕೂತಿರುತ್ತಾನೆ. ಕೃತ್ಯದ ಬಳಿಕ ಅದೇ ಕಾರಿನಲ್ಲಿ 6 ಮಂದಿ ಕೂಡ ಪಲಿಮಾರ್ ರಸ್ತೆ ಮೂಲಕ ಕಾರ್ಕಳ ತಾಲೂಕಿನ ಇನ್ನಾ ಗ್ರಾಮಕ್ಕೆ ತೆರಳಿ ಅಲ್ಲಿನ ನಿರ್ಜನ ಪ್ರದೇಶದಲ್ಲಿ ಕಾರು ಬಿಟ್ಟು ಶ್ರೀನಿವಾಸನ ಸ್ನೇಹಿತನ ಕಾರು ತರಿಸಿ ಅಲ್ಲಿಂದ ಪರಾರಿಯಾಗಿ ಅಡಗಿಕೊಳ್ಳುತ್ತಾರೆ. ಕೊನೆಗೆ ಇಂದು ಬೆಳಗ್ಗಿನ ಜಾವ ಆರೋಪಿಗಳು ಇರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಉದ್ಯಾವರ ಹೊರವಲಯದಲ್ಲಿ ಪೊಲೀಸ್ ತಂಡ ಎಲ್ಲ,6 ಮಂದಿಯನ್ನೂ ಬಂಧಿಸಿದೆ ಎಂದು ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಇಂದು ಬೆಳಗ್ಗೆ ವಶಕ್ಕೆ ಪಡೆದು ನಿರಂತರ ವಿಚಾರಣೆ ನಡೆಸಲಾಗಿದೆ. ಕೃತ್ಯ ನಡೆಸಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಅವರನ್ನು ಕಸ್ಟಡಿಗೆ ಪಡೆದುಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು