ಇತ್ತೀಚಿನ ಸುದ್ದಿ
ಭಟ್ಕಳ ಸೇರಿದಂತೆ ರಾಜ್ಯದ 3 ಕಡೆ ಎನ್‌ಐಎ ದಾಳಿ: 3 ಮಂದಿ ಶಂಕಿತ ಉಗ್ರರು ವಶಕ್ಕೆ
31/07/2022, 17:15
ಬೆಂಗಳೂರು(reporterkarnataka.com): ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸೇರಿದಂತೆ ರಾಜ್ಯದ 3 ಕಡೆಗಳಿಗೆ ಎನ್‌ಐಎ ದಾಳಿ ನಡೆಸಿದ್ದು, 3 ಮಂದಿ ಶಂಕಿತ ಉಗ್ರರನ್ನು ವಶಕ್ಕೆ ಪಡೆಯಲಾಗಿದೆ.
ಇಂಟೆಲಿಜೆನ್ಸಿ,ಎನ್‌ಐಎ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ನೇತೃತ್ವದಲ್ಲಿ ರಾಜ್ಯದ ಮೂರು ಕಡೆಗಳಲ್ಲಿ ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ತುಮಕೂರು ಹಾಗೂ ಬೆಳಗಾವಿಯಲ್ಲಿ ಏಕಕಾಲದಲ್ಲಿ ದಾಳಿಯನ್ನು ನಡೆಸಲಾಗಿದೆ. ಮೂವರು ಶಂಕಿತ ಉಗ್ರರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದರೆ ಇವರೆಲ್ಲಾ ಯಾವ ಸಂಘಟನೆಗೆ ಸೇರಿದ್ದಾರೆ ಅನ್ನೋದು ಇನ್ನೂ ಖಚಿತವಾಗಿಲ್ಲ.
ರಾಜ್ಯ ಮಾತ್ರವಲ್ಲದೇ ಎನ್‌ಐಎ ಅಧಿಕಾರಿ ಗಳು ಮಧ್ಯಪ್ರದೇಶದ ಭೋಪಾಲ್ ಹಾಗೂ ರಾಯ್‌ಸೇನ್ ಜಿಲ್ಲೆ, ಬಿಹಾರದ ಅರರಿಯಾ ಜಿಲ್ಲೆ, ಗುಜರಾತ್ ರಾಜ್ಯದ ಬರೂಚಾ, ಸೂರತ್, ನವ್‌ಸರಿ ಹಾಗೂ ಅಹಮದಾಬಾದ್ ಜಿಲ್ಲೆ, ಉತ್ತರ ಪ್ರದೇಶದ ದಿಯೋಬಾಂಡ್ ಜಿಲ್ಲೆ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ಹಾಗೂ ನಾಂದೇಡ್ ಜಿಲ್ಲೆಯಲ್ಲಿ ದಾಳಿ ನಡೆಸಲಾಗಿದೆ.
ಭಟ್ಕಳದಲ್ಲಿ ಅರೆಸ್ಟ್: ಐಸಿಸ್ ಜತೆ ನಂಟು ಹೊಂದಿರುವ ಶಂಕೆ ಹಿನ್ನೆಲೆ ಎನ್ಐಎ ಅಧಿಕಾರಿಗಳ ತಂಡ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಶಂಕಿತ ಉಗ್ರನನ್ನು ಅಬ್ದುಲ್ ಮಸ್ತಿರ್ (30 ) ಎಂದು ಗುರುತಿಸಲಾಗಿದೆ.
ಈತ ಐಎಸ್‍ಐಎಸ್ ಬರಹಗಳನ್ನು ಭಾಷಾಂತರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಕಾರಣಕ್ಕಾಗಿ ಅಬ್ದುಲ್ ಮಸ್ತಿರನನ್ನು ಭಟ್ಕಳ ನಗರದ ಅರ್ಬನ್ ಬ್ಯಾಂಕ್ ಬಳಿ ಇರುವ ಆತನ ಮನೆಯಿಂದ ಎನ್‍ಐಎ ತಂಡ ವಶಕ್ಕೆ ಪಡೆದಿದೆ.
ಪ್ರಾಥಮಿಕ ಮಾಹಿತಿಯಂತೆ ಈತ ಭಟ್ಕಳ ನಗರದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂಬ ಆರೋಪವಿದೆ.