5:37 AM Thursday25 - June 2026
ಬ್ರೇಕಿಂಗ್ ನ್ಯೂಸ್
ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ…

ಇತ್ತೀಚಿನ ಸುದ್ದಿ

ಬೊಮ್ಮಾಯಿ ಸರಕಾರಕ್ಕೆ ವರ್ಷದ ಸಂಭ್ರಮ; ಪ್ರತಿ ಜಿಲ್ಲೆಯಲ್ಲಿ ಜನೋತ್ಸವ: ಸಚಿವ ಸುನಿಲ್ ಕುಮಾರ್  

26/07/2022, 20:35

ಬೆಂಗಳೂರು(reporterkarnataka.com): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಬಿಜೆಪಿ ಸರಕಾರವು ಒಂದು ವರ್ಷವನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ರಾಜ್ಯಾದ್ಯಂತ ಇದೇ 28ರಿಂದ ಎಲ್ಲ ಜಿಲ್ಲೆಗಳಲ್ಲಿ ಜನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂಬಂಧ ಮೊದಲ ಕಾರ್ಯಕ್ರಮ ಜುಲೈ 28ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ ಎಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದರು.

ಬಿಜೆಪಿ ಆಡಳಿತದ ಮೂರು ವರ್ಷ ಮತ್ತು ಬೊಮ್ಮಾಯಿ ನೇತೃತ್ವದ ಸರಕಾರದ ಒಂದು ವರ್ಷವನ್ನು ಜನೋತ್ಸವವಾಗಿ ರಾಜ್ಯದಾದ್ಯಂತ ನಡೆಸಲಾಗುತ್ತಿದೆ ಎಂದು ಹೇಳಿದರು.

ಇಂಧನ ಇಲಾಖೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಹೊಸ ಹೊಸ ಯೋಜನೆಗಳನ್ನು ಜನರಿಗೆ ತಲುಪಿಸಲಾಗಿದೆ. ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ 75 ಯೂನಿಟ್ ಉಚಿತ ವಿದ್ಯುತ್ ಕೊಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಟ್ರಾನ್ಸ್‌ ಫಾರ್ಮರ್ ನಿರ್ವಹಣಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಒಂದು ವಾರದಲ್ಲಿ ಸುಮಾರು 3.5 ಲಕ್ಷದಿಂದ 4 ಲಕ್ಷ ಟ್ರಾನ್ಸ್ ಫಾರ್ಮರ್ ನಿರ್ವಹಣೆ ಮಾಡಲಾಗಿದೆ ಎಂದು ವಿವರಿಸಿದರು.

ಸುಟ್ಟು ಹೋದ ಟಿ.ಸಿ.ಗಳನ್ನು 24 ಗಂಟೆಯೊಳಗೆ ಬದಲಿಸಬೇಕೆಂಬ ದೊಡ್ಡ ಪ್ರಯತ್ನ ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಆರಂಭಿಸಿದ್ದು, ಒಂದು ವರ್ಷದಲ್ಲಿ ಪ್ರಗತಿಯನ್ನು ನಮ್ಮ ಇಲಾಖೆ ಮೂಲಕ ಕಾಣುತ್ತಿದ್ದೇವೆ. ಬೆಂಗಳೂರಿನಲ್ಲಿ ಒಕ್ಕುಪೆನ್ಸಿ ಸರ್ಟಿಫಿಕೇಟ್ ಇಲ್ಲದೆ ವಿದ್ಯುತ್ ಸಂಪರ್ಕ ಇಲ್ಲ ಎಂಬ ತಪ್ಪು ನಿರ್ಧಾರವನ್ನು ಹಿಂದಿನ ಕಾಂಗ್ರೆಸ್ ಮಾಡಿತ್ತು. ಅದನ್ನು ಸರಿಪಡಿಸಿ 5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡುವ ಪ್ರಯತ್ನ ಮಾಡಲಾಗಿದೆ ಎಂದರು.

ಕೆಪಿಟಿಸಿಎಲ್ ಮೂಲಕ 1,850 ಕಿಮೀ ಹೊಸ ವಿದ್ಯುತ್ ಲೈನನ್ನು ಒಂದು ವರ್ಷದಲ್ಲಿ ಎಳೆಯಲಾಗಿದೆ. ಇದೊಂದು ದೊಡ್ಡ ಸಾಧನೆ. 37 ಕಡೆಗಳಲ್ಲಿ ಸಬ್ ಸ್ಟೇಷನ್ ನಿರ್ಮಾಣ, 200 ಕಡೆಗಳಲ್ಲಿ ಸಬ್ ಸ್ಟೇಷನ್ ಉನ್ನತೀಕರಣ ಮಾಡಲಾಗಿದೆ. ಇದು ಸೇರಿದಂತೆ ವಿವಿಧ ಇಲಾಖೆಗಳ ಸಾಧನೆಯನ್ನು ಜನೋತ್ಸವದ ಮೂಲಕ ತಿಳಿಸಲಾಗುವುದು ಎಂದು ತಿಳಿಸಿದರು.

ನಾವು ಜನರನ್ನು ಕಣ್ಮುಂದೆ ಇಟ್ಟುಕೊಂಡು ಜನೋತ್ಸವ ಮಾಡಿದರೆ, ಕಾಂಗ್ರೆಸ್‍ನವರು ವ್ಯಕ್ತಿಯನ್ನು ಕಣ್ಮುಂದೆ ಇಟ್ಟುಕೊಂಡು ವ್ಯಕ್ತಿಯ ಉತ್ಸವ ಮಾಡುತ್ತಿದ್ದಾರೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ ಎಂದು ವಿವರಿಸಿದರು. ನಾವು ಯಾವತ್ತೂ ವ್ಯಕ್ತಿಯನ್ನು ಆರಾಧಿಸಲಿಲ್ಲ. ನಾವು ವಿಚಾರ, ಜನರನ್ನು ಆರಾಧಿಸಿದ್ದೇವೆ. ವ್ಯಕ್ತಿ ಆರಾಧಿಸುವ ಅವರು ಸಿದ್ದರಾಮೋತ್ಸವ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ತನ್ನ ಆಡಳಿತದ ಅವಧಿಯಲ್ಲಿ ಜಾತಿಗಳ ನಡುವೆ ವಿಷಬೀಜ ಬಿತ್ತಿದ್ದರು. ಅದನ್ನು ಜಮೀರ್ ಮುಂದುವರಿಸಿದ್ದಾರೆ ಎಂದ ಅವರು, ಯಾವುದೇ ಜಾತಿಗೆ ಸೀಮಿತವಾಗಿ ಸರಕಾರವೊಂದು ಕೆಲಸ ಮಾಡಲು ಸಾಧ್ಯವಿಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ಇವತ್ತಿನ ಅನಿವಾರ್ಯತೆ. ಆ ಕಾರ್ಯವನ್ನು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನೆಲೆಯಲ್ಲಿ ಬಿಜೆಪಿ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷವು ಜಾತಿಗಳನ್ನು ಒಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು