ಇತ್ತೀಚಿನ ಸುದ್ದಿ
ಶಾಸಕ ವೇದವ್ಯಾಸ ಕಾಮತರ ಭಗೀರಥ ಪ್ರಯತ್ನ: ಪಾಲಿಕೆ ನೀರಿನ ದರ ಕೊನೆಗೂ ಇಳಿಕೆ!
19/07/2022, 14:53

ಮಂಗಳೂರು(reporterkarnataka.com): ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಸತತ ಪ್ರಯತ್ನದ ಫಲವಾಗಿ ರಾಜ್ಯ ಸರಕಾರ ನೀರಿನ ದರ ಏರಿಕೆಗೆ ಕಡಿವಾಣ ಹಾಕಿದೆ. ಆ ಮೂಲಕ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.
ಮಂಗಳೂರು ಮಹಾನಗರಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ನೀರಿನ ದರ ಏರಿಕೆ ಕುರಿತು ಬಹಳಷ್ಟು ಚರ್ಚೆ ನಡೆದಿತ್ತು. ಆದರೆ ಪಾಲಿಕೆಯ ಸಭೆಯಲ್ಲಿ ಗೃಹ ಬಳಕೆಯ ನೀರಿನ ದರ ಏರಿಸಲಿಲ್ಲ. ಬದಲಿಗೆ ವಾಣಿಜ್ಯ ಬಳಕೆಯ ನೀರಿನ ದರ ಏರಿಸಲಾಗಿತ್ತು. ಪಾಲಿಕೆ ಚುನಾವಣೆಯ ಮುನ್ನ ಹಾಗೂ ನಂತರ ಮೇಯರ್ ಆಯ್ಕೆ ನಡೆಯದೆ ಆಡಳಿತಾಧಿಕಾರಿ ಆಳ್ವಿಕೆ ಇತ್ತು. ಈ ಸಂದರ್ಭದಲ್ಲಿ ಸರಕಾರದ ನಿಯಮ ಪಾಲಿಸಲು ಮುಂದಾದ ಆಡಳಿತಾಧಿಕಾರಿಗಳು ಗೃಹ ಬಳಕೆಯ 20 ಸಾವಿರ ಲೀಟರ್ ನೀರು ಲೀಟರ್ ಗೆ 100 ರೂ. ಇದ್ದ ಶುಲ್ಕವನ್ನು ಏಕಾಏಕಿಯಾಗಿ 174 ರೂ.ಗೆ ಹೆಚ್ಚಿಸಿದರು. ಪಾಲಿಕೆಯಲ್ಲಿ ಆಡಳಿತ ಜಾರಿಗೆ ಬಂದ ಬಳಿಕ ಆರಂಭದಲ್ಲೇ ನೀರಿನ ದರ ವಿಚಾರವೇ ಪ್ರಸ್ತಾಪವಾಯಿತು. ಈ ವಿಚಾರದಲ್ಲಿ ಬಿಜೆಪಿ ವಿರೋಧಿಗಳಿಗೆ ಆಹಾರದ ವಿಷಯವಾಯಿತು. ಈ ಬಗ್ಗೆ ಪಾಲಿಕೆ ಒಳಗೆ ಮತ್ತು ಹೊರಗೆ ಪ್ರತಿಭಟನೆ, ಪತ್ರಿಕಾಗೋಷ್ಠಿ, ಹೇಳಿಕೆಗಳು ನಡೆದವು. ಆಡಳಿತಾಧಿಕಾರಿಯಿಂದ ದರ ಏರಿಕೆಯಾಗಿದೆ ಎಂಬ ಬಿಜೆಪಿ ಜನಪ್ರತಿನಿಧಿಗಳ ಮಾತನ್ನು ಯಾರೂ ಕೇಳಲಿಲ್ಲ. ಏಕಾಏಕಿ 74 ರೂಪಾಯಿ ಏರಿಕೆಯಿಂದ ಬಿಜೆಪಿ ಕಾರ್ಪೊರೇಟರ್ ಗಳು ಜನಸಾಮಾನ್ಯರ ಎದುರು ವಿಲನ್ ಗಳಾಗಿ ಬಿಟ್ಟರು. ಈ ವಿಚಾರದಲ್ಲಿ 2020 ಮೇ ತಿಂಗಳ ಪಾಲಿಕೆ ಸಾಮಾನ್ಯ ಸಭೆಯಲ್ಲೂ ಪ್ರಸ್ತಾಪವಾಗಿ ಸಾಕಷ್ಟು ಆರೋಪ- ಪ್ರತ್ಯಾರೋಪ ಬಳಿಕ ಆಡಳಿತರೂಢ ಬಿಜೆಪಿ ದರ ಇಳಿಕೆಗೆ ಮುಂದಾಗಿ 174ರ ಬದಲಿಗೆ 140ಕ್ಕೆ ಇಳಿಸುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾಪ ಕಳುಹಿಸಿತ್ತು. ಆದರೆ ಇದರಿಂದ ರಾಜ್ಯ ಸರಕಾರಕ್ಕೆ ನಷ್ಟವಾಗುತ್ತದೆ ಎಂದು ಪ್ರಸ್ತಾಪವನ್ನು ತಿರಸ್ಕರಿಸಲಾಗಿತ್ತು.
ಪಟ್ಟು ಬಿಡದ ಶಾಸಕರು: ರಾಜ್ಯದಲ್ಲಿ ಬಿಜೆಪಿ ಸರಕಾರ ಹಾಗೂ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ನೀರಿನ ದರ ಇಳಿಸಲು ಸಾಧ್ಯವಾಗಲಿಲ್ಲ. ಪಾಲಿಕೆಯ ಪ್ರಸ್ತಾಪಕ್ಕೆ ರಾಜ್ಯ ಸರಕಾರ ಯಾವುದೇ ಮನ್ನಣೆ ನೀಡಿಲ್ಲ ಎಂಬ ಟೀಕೆಯೂ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ತಿರಸ್ಕಾರಗೊಂಡಿದ್ದ ಪ್ರಸ್ತಾಪಕ್ಕೆ ಮರು ಜೀವ ನೀಡಿದ್ದರು. ನೀರಿನ ದರ ಏರಿಕೆಯಿಂದ ಆಡಳಿತ ಪಕ್ಷ ಎದುರಿಸುತ್ತಿರುವ ಟೀಕೆ ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ಕಷ್ಟದ ಬಗ್ಗೆ ಅವರು ಸರಕಾರಕ್ಕೆ ಒಂದು ಸಮಗ್ರ ವರದಿ ಸಲ್ಲಿಸಿದರು. ಅವರ ವಾದಕ್ಕೆ ರಾಜ್ಯ ಸರಕಾರ ಮನ್ನಣೆ ನೀಡಿತು. ಅದರಂತೆ ನೀರಿನ ದರ 174 ರೂ.ನಿಂದ ಏಕಾಏಕಿ 100 ರೂ.ಗೆ ಇಳಿಸಿದೆ. ಆಡಳಿತಾಧಿಕಾರಿ 174 ರೂ.ಗೆ ಏರಿಸಿದರೆ, ಆಡಳಿತಗಾರರು 140 ರೂ.ಗೆ ನಿಗದಿಪಡಿಸಿದ್ದರು. ಆದರೂ ಇದನ್ನು ಪರಿಗಣಿಸದಿದ್ದ ಸರಕಾರ ಇದೀಗ ಏಕಾಏಕಿ 74 ರೂ. ಇಳಿಸಿದೆ. ಶಾಸಕ ಕಾಮತರ ಜನಪರ ಹೋರಾಟ ಯಶಸ್ವಿಯಾಗಿದೆ.