ಇತ್ತೀಚಿನ ಸುದ್ದಿ
2 ತಿಂಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಜಯ; ನಾರಾಯಣಗುರು ಪಠ್ಯ ಮರು ಸೇರ್ಪಡೆಗೆ ಕೇಂದ್ರ ಮಾಜಿ ಸಚಿವ ಪೂಜಾರಿ ಹರ್ಷ
14/07/2022, 22:14

ಮಂಗಳೂರು(reporterkarnataka.com):ನಾರಾಯಣಗುರುಗಳ ಅನುಯಾಯಿಗಳು, ಬಿಲ್ಲವ ಸಮುದಾಯದವರು ಸಂಘಟಿತರಾಗಿ 2 ತಿಂಗಳಿಂದ ನಡೆಸುತ್ತಿದ್ದ ಹೋರಾಟದ ಫಲವಾಗಿ 10ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತ ಪಠ್ಯ ಮತ್ತೆ ಸೇರ್ಪಡೆಗೊಂಡಿದೆ ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಜತೆ ಗುರುವಾರ ಚರ್ಚಿಸಿದ ಅವರು, ಸಮಾಜದಲ್ಲಿ ಅನ್ಯಾಯ ಎದುರಿಸಿ ನಿಲ್ಲುವಲ್ಲಿ ಎಲ್ಲರೂ ಸಂಘಟಿತರಾದರೆ ಜಯ ಸಾಧ್ಯ. ಬ್ರಹ್ಮಶ್ರೀ ನಾರಾಯಣಗುರುಗಳೂ ನಮ್ಮ ಹೋರಾಟದ ಹಿಂದೆ ಇರುತ್ತಾರೆ ಎನ್ನುವುದಕ್ಕೆ ಇದು ನಿದರ್ಶನ ಎಂದರು.
ಹೋರಾಟದಲ್ಲಿ ಪಾಲ್ಗೊಂಡ ನಾರಾಯಣ ಗುರುಗಳ ಅನುಯಯಾಯಿಗಳು, ಬಿಲ್ಲವ ಸಮುದಾಯದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ನಾರಾಯಣ ಗುರುಗಳ ತತ್ವದಂತೆ ಮುಂದೆಯೂ ಸಮಾಜ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಘರ್ಷರಹಿತವಾಗಿ, ಪಕ್ಷಭೇದ ಮರೆತು ಹೋರಾಟ ನಡೆಸುವಂತೆ ಮಾರ್ಗದರ್ಶನ ನೀಡಿದರು.