ಇತ್ತೀಚಿನ ಸುದ್ದಿ
10ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ವಿಚಾರಧಾರೆ ಸೇರಿಸದಿದ್ದರೆ ಜು. 17ರಂದು ಹೆದ್ದಾರಿ ತಡೆ ಪ್ರತಿಭಟನೆ
11/07/2022, 10:47

ಉಡುಪಿ(reporterkarnataka.com):
ಸರಕಾರ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬ್ರಹ್ಮಶ್ರೀ
ನಾರಾಯಣ ಗುರುಗಳ ವಿಚಾರಧಾರೆಗಳನ್ನು ಯಥಾಸ್ಥಿತಿ ಕಾಪಾಡಿಕೊಂಡು ಬಾರದಿದ್ದರೆ ಜುಲೈ 17ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರಾಲಿಯ ಮುಖಾಂತರ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲಾಗುವುದು ಎಂದು ವೇದಿಕೆ ಎಚ್ಚರಿಸಿದೆ.
ಜುಲೈ 15ರೊಳಗೆ ಸರಕಾರ ಈ ಕುರಿತು ತೀರ್ಮಾನಿಸದಿದ್ದರೆ ಎಲ್ಲ ಬಿಲ್ಲವ ಸಮಾಜದ ಸಂಘ ಸಂಸ್ಥೆಗಳು, ಗರೋಡಿ ಪ್ರಮುಖರು, ನಾರಾಯಣಗುರುಗಳ ಅನುಯಾಯಿಗಳು
ಹಾಗೂ ಪಠ್ಯ ಪುಸ್ತಕದಿಂದ ವಂಚಿತರಾದ ವಿದ್ಯಾರ್ಥಿ ಸಮುದಾಯವನ್ನು ಸೇರಿಸಿಕೊಂಡು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಹೆದ್ದಾರಿ ತಡೆ ಮಾಡುವುದರ ಮೂಲಕ ಸರಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗುವುದು ಎಂದು ವೇದಿಕೆ ತಿಳಿಸಿದೆ.
2022-23ನೇ ಶೈಕ್ಷಣಿಕ ವರ್ಷದ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆ, ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳ ವಿಷಯವನ್ನು ಸಂಪೂರ್ಣ ಕೈಬಿಟ್ಟು ವಿಶ್ವ ಗುರುವಿಗೆ ಅಗೌರವ ತೋರಿಸಿದೆ. ಗುರುಗಳ ಆದರ್ಶಗಳನ್ನು ಪಾಲಿಸಿಕೊಂಡು ಬಂದಿರುವ ಬಹುಸಂಖ್ಯಾತ ಬಿಲ್ಲವ ಸಮುದಾಯಕ್ಕೆ ಹಾಗೂ ಗುರುಗಳ ಅನುಯಾಯಿಗಳಿಗೆ ಅತೀವ ನೋವನ್ನುಂಟು ಮಾಡಿದೆ. ಅಸ್ಪ್ರಶ್ಯತೆಯನ್ನು ಹೋಗಲಾಡಿಸಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಪಸರಿಸಿದ ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ಮಾಡಿದ ಅವಮಾನ.
ಈ ಹಿಂದೆ ಗಣರಾಜ್ಯೋತ್ಸವದ ದಿನದಂದು ದೆಹಲಿಯ ಕೆಂಪು ಕೋಟೆಯಲ್ಲಿ ಕೇಂದ್ರ ಸರಕಾರವು ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ನಿರಾಕರಿಸಿ ಇಡೀ ಬಿಲ್ಲವ ಸಮುದಾಯಕ್ಕೆ ನೋವನ್ನುಂಟು ಮಾಡಿದೆ. ಇದೀಗ ರಾಜ್ಯ ಸರಕಾರ ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಪಠ್ಯ ಪುಸ್ತಕದಿಂದ ತೆಗೆದು ಮುಗ್ದ ಮಕ್ಕಳ ಹಾಗೂ ಯುವ ಪೀಳಿಗೆಯ ಮುಂದಿನ ಜೀವನಕ್ಕೆ ಗುರುಗಳು ತೋರಿಸಿದ ಸಮಾಜ ಸುಧಾರಣೆ ಮತ್ತು ಧಾರ್ಮಿಕ ಚಿಂತನೆಯಿಂದ ವಂಚಿತರನ್ನಾಗಿಸಿದೆ.
ಈ ವಿಚಾರದಲ್ಲಿ ಈಗಾಗಲೇ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹಲವಾರು ಬಿಲ್ಲವ ಸಂಘ ಸಂಸ್ಥೆಗಳು ಶಾಸಕರಿಗೆ, ಸಚಿವರಿಗೆ, ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನೆಯ ಮೂಲಕ ಮನವಿ ಸಲ್ಲಿಸಿದರೂ ಕೂಡ ಈವರೆಗೆ ಸರಕಾರ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡದೆ ಇರುವುದರಿಂದ ಉಡುಪಿ ಜಿಲ್ಲೆಯ ಎಲ್ಲಾ ಬಿಲ್ಲವ ಸಂಘಟನೆಗಳು ಸೇರಿ ಉಗ್ರ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದೆ.