ಇತ್ತೀಚಿನ ಸುದ್ದಿ
ಭಾಗಮಂಡಲ: ತುಂಬಿ ಹರಿಯುತ್ತಿರುವ 30ಕ್ಕೂ ಅಧಿಕ ಜಲಪಾತಗಳು; ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಕೊಡಗು!!
24/06/2022, 17:35
ಮಡಿಕೇರಿ(reporterkarnataka.com): ಕಳೆದ ಒಂದು ವಾರದಿಂದ ಮುಂಗಾರು ಚುರುಕುಗೊಂಡಿದ್ದು, ರಾಜ್ಯಾದ್ಯಂತ ಬಿರುಸಿನ ಮಳೆಯಾಗುತ್ತಿದೆ.ಕೊಡಗು ಜಿಲ್ಲೆಯ ಗಡಿಯಂಚಿನ ಗ್ರಾಮ ಕರಿಕೆ ದೇಶದಲ್ಲಿಯೇ ಜಲಪಾತಗಳ ಗ್ರಾಮ ಎಂಬ ಖ್ಯಾತಿಗೆ ಪಾತ್ರವಾಗಿದೆ. ಪ್ರವಾಸಿಗರು ಬಹು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ.
ಭಾಗಮಂಡಲದಿಂದ ಕರಿಕೆಗೆ ಬರುವ ಹೆದ್ದಾರಿಯಲ್ಲಿ 30ಕ್ಕೂ ಅಧಿಕ ಜಲಪಾತಗಳು ಪ್ರವಾಸಿಗರನ್ನು ನಿಬ್ಬೆರಗಾಗಿಸುತ್ತದೆ. ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಈ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ಈ ದೃಶ್ಯಗಳನ್ನು ನೋಡಲು ಕರಿಕೆ ಗ್ರಾಮಕ್ಕೆ ನೂರಾರು ಪ್ರವಾಸಿಗರು ಇತ್ತೀಚಿನ ದಿನಗಳಲ್ಲಿ ಬರುತ್ತಿದ್ದಾರೆ. ಮೂವತ್ತಕ್ಕೂ ಅಧಿಕ ಜಲಪಾತಗಳು ಹೆದ್ದಾರಿಯ ಪಕ್ಕದಲ್ಲಿ ಕಾಣಸಿಗುವುದು ಇಲ್ಲಿಯ ವಿಶೇಷ.
30 ಕಿಲೋಮೀಟರ್ ದೂರದ ರಸ್ತೆಯಲ್ಲಿ ಪ್ರತಿ ಕಿಲೋಮೀಟರಿಗೂ ಒಂದಂತೆ ಜಲಪಾತಗಳು ಈ ಭಾಗದಲ್ಲಿ ಕಾಣಸಿಗುತ್ತದೆ. ಸುಳ್ಯದಿಂದ 30 ಕಿಲೋಮೀಟರ್ ದೂರದಲ್ಲಿದೆ ಇದು. ಮಡಿಕೇರಿಯಿಂದ 35 ಕಿಲೋಮೀಟರ್ ದೂರದಲ್ಲಿದೆ. ಇನ್ನೊಂದು ಕೇರಳದ ಮುಖಾಂತರವೂ ಈ ಭಾಗಕ್ಕೆ ನಾವು ಪ್ರವೇಶಿಸಬಹುದು. ಕಾಸರಗೋಡಿನಿಂದ ಪಾಣತ್ತೂರು ಭಾಗಕ್ಕೆ ನಾವು ಬಂದು ಕರಿಕೆ ತಲುಪಬಹುದು.
ಕರಿಕೆಯಿಂದ ಭಾಗಮಂಡಲ ರಸ್ತೆಯಲ್ಲಿ ಮಳೆಗಾಲದಲ್ಲಿ ಧುಮ್ಮಿಕ್ಕುವ ಈ ಜಲಪಾತಗಳು ಸ್ವರ್ಗವನ್ನೇ ಸೃಷ್ಟಿಸುತ್ತವೆ. ಮಾನ್ಸೂನ್ ಪ್ರವಾಸಕ್ಕೆ ಕರಿಕೆ ಹೇಳಿ ಮಾಡಿದ ಸ್ಥಳದಂತಿದೆ.