ಇತ್ತೀಚಿನ ಸುದ್ದಿ
ಕಟೀಲು ದೇಗುಲ ಸಂಪರ್ಕಿಸುವ ದೇವರಗುಡ್ಡೆ ಸಮೀಪ ಗುಡ್ಡೆ ಕುಸಿತ: ಲಾಕ್ ಡೌನ್ ನಿಂದ ತಪ್ಪಿದ ಭಾರಿ ಅನಾಹುತ
18/06/2021, 19:24
ಕಿನ್ನಿಗೋಳಿ(reporterkarnataka news): ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಬಿರುಸಿನ ಮಳೆಯ ಕಾರಣ ಕಟೀಲು- ಬಜಪೆ ರಾಜ್ಯ ಹೆದ್ದಾರಿಯ ದೇವರಗುಡ್ಡೆ ಬಳಿ ಇಂದು ಗುಡ್ಡ ಕುಸಿದಿದ್ದು, ಬಂಡೆಗಲ್ಲು ರಸ್ತೆಗೆ ಬಿದ್ದಿದೆ. ಲಾಕ್ ಡೌನ್ ನಿಂದ ವಾಹನ ಮತ್ತು ಜನ ಸಂಚಾರ ವಿರಳವಾಗಿರುವುದರಿಂದ ಭಾರಿ ಅನಾಹುತ ತಪ್ಪಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ಕಟೀಲು- ಬಜಪೆ ರಾಜ್ಯ ಹೆದ್ದಾರಿ ವಿಸ್ತರಿಸಲು ಹೆದ್ದಾರಿ ಬದಿಯ ಗುಡ್ಡಗಳನ್ನು ಕಡಿದು ರಸ್ತೆ ಅಗಲಗೊಳಿಸಲಾಗಿತ್ತು. ಈ ಗುಡ್ಡ ಮಳೆಗೆ ಕುಸಿದು ಬಿದ್ದಿದೆ.
ಕಳೆದ ಮಳೆಗಾಲದಲ್ಲಿ ಕೂಡ ದೇವರಗುಡ್ಡೆ ಬಳಿ ರಸ್ತೆ ಕುಸಿದಿತ್ತು. ಆದರೆ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.
ಶುಕ್ರವಾರ ಮುಂಜಾನೆ ಸುರಿದ ಭಾರಿ ಮಳೆಗೆ ರಸ್ತೆ ಬದಿ ಗುಡ್ಡದ ಬೃಹದಾಕಾರದ ಬಂಡೆಕಲ್ಲು ಸಹಿತ ಮಣ್ಣು ಮುಖ್ಯರಸ್ತೆಗೆ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿತು. ಸದಾ ಕಾಲ ಬ್ಯುಸಿಯಾಗಿರುವ ಕಟೀಲು- ಬಜಪೆ ರಾಜ್ಯ ಹೆದ್ದಾರಿ ಈಗ ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ ಜನ- ವಾಹನ ಸಂಚಾರ ಅತಿ ವಿರಳವಾಗಿದ್ದರಿಂದ ಭಾರಿ ಅನಾಹುತ ತಪ್ಪಿದೆ.