ಇತ್ತೀಚಿನ ಸುದ್ದಿ
ಎಣ್ಣಿಹೊಳೆ ಏತ ನೀರಾವರಿ ಯೋಜನೆಗೆ ಸಿಎಂ ಚಾಲನೆ: ಕಾರ್ಕಳ ಸಮಗ್ರ ಅಭಿವೃದ್ಧಿಗೆ 40 ಕೋಟಿ ಘೋಷಣೆ
01/06/2022, 23:07
ಕಾರ್ಕಳ(reporterkarnataka.com): ಶಿಲ್ಪಕಲೆಗೆ ಹೆಸರುವಾಸಿಯಾದ ಕಾರ್ಕಳದಲ್ಲಿ ಕ್ಲಸ್ಟರ್ ಹಾಗೂ ಮಂಗಳೂರಿನ ಸಮೀಪ ಅಂತಾರಾಷ್ಟ್ರೀಯ ಮಟ್ಟದ ಫರ್ನೀಚರ್ ಕ್ಲಸ್ಟರ್ ಪ್ರಾರಂಭಿಸಲು ತೀರ್ಮಾನನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಎಣ್ಣಿಹೊಳೆ ಏತ ನೀರಾವರಿ ಯೋಜನೆ ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಪ್ರದೇಶದಲ್ಲಿ ಗ್ರೀನ್ ಪವರ್ ಅಭಿವೃದ್ಧಿ, ಹಸಿರು ಇಂಧನ ಆಧಾರಿತ ಕೈಗಾರಿಕಾ ಹಬ್ ನಿರ್ಮಿಸಲು ತೀರ್ಮಾನ ಮಾಡಲಾಗಿದೆ. ಕಾರ್ಕಳದಲ್ಲಿ ಶಿಲ್ಪಿಗಳು, ಮರದ ಕೆಲಸ ಮಾಡುವವರಿಗೆ ಕ್ಲಸ್ಟರ್ ನ್ನು ಸ್ಥಾಪಿಸಲು ಶೀಘ್ರದಲ್ಲಿಯೇ ಅನುಮೋದನೆ ನೀಡಲಾಗುವುದು. ಈ ರೀತಿ ಸಮಗ್ರ, ಸಶಕ್ತ, ಸಮೃದ್ಧಿ ಕರ್ನಾಟಕ ಕಟ್ಟುವ ಬದ್ಧತೆ ಸರ್ಕಾರ ತೋರುತ್ತಿದೆ ಎಂದರು
ಕಾರ್ಕಳದಲ್ಲಿ ಪ್ರಾಚೀನ ಜೈನಬಸದಿಗಳು ಸೇರಿದಂತೆ ಇತರೆ ಪ್ರವಾಸಿ ತಾಣಗಳ ಟೂರಿಸಂ ಸರ್ಕೀಟ್ ನ್ನು ಅಭಿವೃದ್ದಿಗೊಳಿಸಲಾಗುವುದು. ಕರಾವಳಿ ಭಾಗದಲ್ಲಿ ಬೀಚ್ ಟೂರಿಸಂ ಹಾಗೂ ಯಾತ್ರಾ ಪ್ರವಾಸೋದ್ಯಮ ಈ ವರ್ಷ ಅಭಿವೃದ್ಧಿ ಮಾಡಲಾಗುವುದು. ಉದ್ಯೋಗ ಹೆಚ್ಚಳ, ಕೈಗಾರಿಕೆಗೆ ಹೆಚ್ಚಳಕ್ಕೆ ಒತ್ತು ನೀಡಲಾಗುವುದು ಎಂದರು.
ಕರಾವಳಿ ಜಿಲ್ಲೆಗಳನ್ನು ಆಧುನಿಕ ಅಭಿವೃದ್ಧಿಯ ಜಿಲ್ಲೆಗಳನ್ನಾಗಿ ಮಾಡಬೇಕೆಂದು ಕರಾವಳಿ ಭಾಗದ ಸಚಿವರಿಗೆ ಸೂಚಿಸಿದ್ದೇನೆ. ಇದಕ್ಕಾಗಿ ಪೂರಕ ಕಾರ್ಯಕ್ರಮಗಳನ್ನು ಆಯವ್ಯಯದಲ್ಲಿ ರೂಪಿಸಲಾಗಿದೆ.ಕಾರವಾರ ಮತ್ತು ಮಂಗಳೂರಿನ ಬಂದರುಗಳ ವಿಸ್ತರಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. 2 ಬಂದರುಗಳಲ್ಲಿ ಹೆಚ್ಚಿನ ಪ್ರಮಾಣದ ಹಡಗುಗಳು ತಂಗಲು ಹಾಗೂ ಅಲ್ಲಿನಚಟುವಟಿಕೆಗಳಿಗೆ ಜಮೀನು ನೀಡಲಾಗಿದೆ. 8 ಮೀನುಗಾರರ ಬಂದರಿಗೆ ಯೋಜನೆ ರೂಪಿಸಿದ್ದು , ಅನುದಾನ ನೀಡಲಾಗಿದ್ದು, ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಆಳಸಮುದ್ರದ ಮೀನುಗಾರಿಕೆ ದೋಣಿಗಳನ್ನು ನೀಡುವ ಯೋಜನೆ ಜಾರಿಗೆ ತರಲಾಗಿದೆ. ಕರಾವಳಿ ಭಾಗದ ಆರ್ಥಿಕ ಚಟುವಟಿಕೆಗಳ ಅಭಿವೃದ್ಧಿಗೆ ಇವು ಪೂರಕವಾಗಿವೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ 8 ವರ್ಷ ಪೂರೈಸಿದ್ದಾರೆ. ಅವರು ದೂರದೃಷ್ಟಿಯುಳ್ಳ ದಕ್ಷ ನಾಯಕ. ಆಯುಷ್ಮಾನ ಭಾರತ ಯೋಜನೆಯ ಮೂಲಕ ಬಡವರಿಗಾಗಿ ಆರೋಗ್ಯ ಕವಚ ನೀಡಿದ್ದಾರೆ. ರೈತರಿಗಾಗಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಮೂಲಭೂತ ಸೌಕರ್ಯ ಯೋಜನೆಗಳಡಿ,ಒ ಸಾಗರಮಾಲಾ ಯೋಜನೆಯಡಿ ಕರಾವಳಿ ಭಾಗದ ಎಲ್ಲ ಬಂದರುಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಕರಾವಳಿ ಭಾಗದಲ್ಲಿ 2400 ಕೋಟಿ ರೂ.ಗಳ 24 ಯೋಜನೆಗಳಿಗೆ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಈಗಾಗಲೇ ಸಲ್ಲಿಸಲಾಗಿದ್ದು, ಇವೆಲ್ಲವೂ ಕರಾವಳಿ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.
ಡೀಮ್ಡ್ ಫಾರೆಸ್ಟ್ ನ ಸಮಸ್ಯೆಯನ್ನು ಬಗೆಹರಿಸಿ 6,33,000 ಎಕರೆ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಪ್ರದೇಶದಿಂದ ಹೊರಗುಳಿಸಿ, ಉಳುಮೆ ಮಾಡುತ್ತಿರುವವರಿಗೆ , ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡುವ ಕೆಲಸ ಮಾಡಲಾಗಿದೆ. ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಉಳುಮೆ ಮಾಡುವವರಿಗೆ ಜಮೀನಿನ ಹಕ್ಕನ್ನು ನೀಡಲು ವಿಶೇಷವಾದ ಕಾನೂನನ್ನು ರಚಿಸಿ, ಜಮೀನಿನ ಹಕ್ಕುಪತ್ರವನ್ನು ನೀಡಲಾಗುವುದು.ಜನರಿಗೆ ನ್ಯಾಯ ಒದಗಿಸುವ ಜನಸ್ಪಂದನೆಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಬಹಳ ವರ್ಷಗಳಿಂದ ಇರುವ ಈ ಸಮಸ್ಯೆಗೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಒದಗಿಸುವ ಬದ್ಧತೆ ಸರ್ಕಾರಕ್ಕಿದೆ ಎಂದರು.
ಎಣ್ಣೆಹೊಳೆ ಏತ ನೀರಾವರಿ ಯೋಜನೆ ರೂಪಿಸಿದ ಸರ್ಕಾರದ ಅವಧಿಯಲ್ಲಿಯೇ ಯೋಜನೆಯನ್ನು ಪೂರ್ಣಗೊಳಿಸಿರುವುದು ನಮ್ಮ ಸರ್ಕಾರದ ಹೆಗ್ಗಳಿಕೆ. ನೀರಾವರಿ ಸಚಿವರು ರಾಜ್ಯದ ಪ್ರಮುಖ ನೀರಾವರಿಯೋಜನೆಗಳ ಅನುಷ್ಠಾನದಲ್ಲಿ ಬದ್ಧತೆಯನ್ನು ತೋರಿದ್ದಾರೆ. ಕಂದಾಯ ಸಚಿವರು , ಜನರ ಮನೆ ಬಾಗಿಲಿಗೆ ಕಂದಾಯ ದಾಖಲೆಯನ್ನು ತರುವ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಮೀನುಗಾರಿಕೆ ಅಭಿವೃದ್ಧಿ, ದೀನದಲಿತರ ಅಭಿವೃದ್ಧಿಗೆ ಈ ಭಾಗದ ಸಚಿವರು ಶ್ರಮವಹಿಸಿದ್ದಾರೆ. ಎಸ್ ಸಿ ಎಸ್ ಟಿ ಕಾರ್ಯಕ್ರಮಗಳಿಗೆ 28 ಸಾವಿರ ಕೋಟಿ ಅನುದಾನ ನೀಡುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ. ಎಸ್ ಸಿ ಎಸ್ ಟಿ ಜನಾಂಗದ ಬಿಪಿಎಲ್ ಕುಟುಂಬಕ್ಕೆ 75 ಯೂನಿಟ್ ಗಳ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆ್ಯಸಿಡ್ ದಾಳಿಗೆ ಒಳಗಾಗಿರುವ ಹೆಣ್ಣುಮಕ್ಕಳಿಗೆ ನೀಡಲಾಗುತ್ತಿದ್ದು ಮಾಸಿಕ ಧನಸಹಾಯವನ್ನು 3000 ರೂ.ನಿಂದ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಸಂಧ್ಯಾ ಸುರಕ್ಷೆ, ವಿಧವೆಯರು, ಅಂಗವಿಕಲರಿಗೆ ಮಾಸಾಶನ ಹೆಚ್ಚಳ, ರೈತ ವಿದ್ಯಾನಿಧಿಯ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ, 60 ವರ್ಷ ವಯೋಮಾನದವರಿಗೆ ಆರೋಗ್ಯ ತಪಾಸಣೆ, ಕಿಮೋ ಥೆರಪಿಗಾಗಿ 10 ಹೊಸ ಕೇಂದ್ರಗಳು, 60 ಸಾವಿರ ಸೈಕಲ್ ಡಯಾಲಿಸಿಸ್ ವ್ಯವಸ್ಥೆ ಮಾಡುವ ಮೂಲಕ ದುಡಿಯುವ ವರ್ಗಕ್ಕೆ ಸಹಾಯ ಮಾಡಲಾಗುತ್ತಿದೆ ಎಂದರು.
ಕಾರ್ಕಳ ಕ್ಷೇತ್ರ ಸಮಗ್ರ ಅಭಿವ್ರದ್ದಿಗೆ ಹೆಚ್ಚುವರಿಯಾಗಿ 40 ಕೋ.ರೂ ಬಿಡುಗಡೆಗೊಳಿಸಿದರು.