ಇತ್ತೀಚಿನ ಸುದ್ದಿ
ಗಾಂಧೀಜಿಯ ಅಹಿಂಸೆ ಹಾಗೂ ಕ್ರಾಂತಿಕಾರಿಗಳು ನಡೆಸಿದ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ: ಸಂಸದ ನಳಿನ್
28/05/2022, 20:42
ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಮಹಾತ್ಮಾಗಾಂಧಿಯವರ ಅಹಿಂಸೆ ಹಾಗೂ ಕ್ರಾಂತಿಕಾರಿಗಳು ನಡೆಸಿದ ಹೋರಾಟಗಳಿಂದ ದೇಶಕ್ಕೆ ಸ್ವಾತಂತ್ರ್ಯಲಭಿಸಿದೆ. ಈ ಹೋರಾಟಗಳಲ್ಲಿ ಬಲಿದಾನವಾದ ಸಹಸ್ರಾರು ಜನರನ್ನು ಸ್ಮರಿಸಿಕೊಳ್ಳುವ ಅಗತ್ಯವಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಶನಿವಾರ ನಗರದ ಪುರಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
750 ವರ್ಷ ಮೊಘಲರು ಹಾಗೂ 250 ವರ್ಷ ಬ್ರಿಟಿಷರು ಆಳಿದ ಈ ನೆಲದ ಸ್ವಾತಂತ್ರ್ಯಕ್ಕಾಗಿ ಒಂದು ಸಾವಿರ ವರ್ಷಗಳ ಕಾಲ ಹೋರಾಟ ನಡೆದಿದೆ, ಅದು ಕತ್ತಲ ಯುಗವಲ್ಲ, ಹೋರಾಟದ ಯುಗವಾಗಿತ್ತು, ಸ್ವಾತಂತ್ರ್ಯಕ್ಕಾಗಿ ಇಲ್ಲಿನ ರಾಷ್ಟ್ರ ಭಕ್ತರು ನಿರಂತರವಾಗಿ ಹೋರಾಟ ನಡೆಸಿದ್ದಾರೆ, ಇಂದಿನ ನಮ್ಮ ಸ್ವಾಭಿಮಾನದ ಬದುಕಿಗೆ ಅವರ ಹೋರಾಟ ಹಾಗೂ ಬಲಿದಾನವೇ ಕಾರಣ ಎಂದರು.
ಭಾರತೀಯರಾದ ನಾವು ದೇಶವನ್ನು ಮಾತೆ ಎನ್ನುತ್ತೇವೆ, ಇಲ್ಲಿನ ಪರಂಪರೆ, ಸಂಸ್ಕೃತಿ, ಎಲ್ಲವೂ ಶ್ರೇಷ್ಠ, ಜಗತ್ತಿಗೆ ಅತಿ ಹೆಚ್ಚು ಕೊಡುಗೆಗಳನ್ನು ನೀಡಿದ ದೇಶವಿದು, ವಸುದೈವ ಕುಟುಂಬಕ್ಕಂ ಎಂದು ತಿಳಿದ ನಾವು ಜಗತ್ತನ್ನೇ ಕುಟುಂಬ ಎಂದು ನೋಡುತ್ತೇವೆ, ಸಕಲ ಚರಾಚರ ಜೀವಿಗಳಲ್ಲಿ ದೇವರನ್ನು ಕಂಡ ಈ ಭಾರತೀಯ ನೆಲದಲ್ಲಿ ಮಾನವ ಮಹಾತ್ಮನಾಗಬಲ್ಲ, ಜಗತ್ತಿಗೆ ಅದ್ಬುತ ಕೊಡುಗೆ ನೀಡಿದ ಈ ದೇಶ ಒಂದು ಕಾಲದಲ್ಲಿ ವಿಶ್ವಕ್ಕೆ ಮಾರ್ಗದರ್ಶಕವಾಗಿತ್ತು, ಅಲ್ಲದೇ ಶ್ರೀಮಂತವೂ ಆಗಿತ್ತು ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು, ಬಲಿದಾನವಾದವರನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಇತಿಹಾಸವನ್ನು ಮರೆತರೆ ನಮ್ಮನ್ನು ಇತಿಹಾಸ ಮರೆಯುತ್ತದೆ ಎಂಬುದನ್ನು ಯುವಜನತೆಗೆ ತಿಳಿಯಬೇಕು, 1947ರಲ್ಲಿ ಸ್ವಾತಂತ್ರ್ಯಲಭಿಸಿದ ಎರಡು ಪೀಳಿಗೆಯ ನಂತರ ನಾವು ಹುಟ್ಟಿದೇವೆ, ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಶ್ಲೇಷದ ಅನುಭವವೂ ನಮ್ಮಲ್ಲಿ ಇಲ್ಲ ಎನ್ನಬಹುದು, ಅಂದು ನಮ್ಮ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಗುಲಾಮರನ್ನಾಗಿಸಿಕೊಂಡ ಸನ್ನಿವೇಶಗಳನ್ನು ಇಂದು ನೆನಪು ಮಾಡಿಕೊಳ್ಳಲು ಸಾಧ್ಯವಿಲ್ಲ, ಇಂತಹ ಸ್ಥಿತಿಯಲ್ಲಿ ಸ್ವಾತಂತ್ರ್ಯಕ್ಕೆಹೋರಾಡಿದವರು, ಸಾವನ್ನಪ್ಪಿದವರ ನೆನಪು ಮಾಡಿಕೊಳ್ಳಬೇಕು, ಈ ದಿಸೆಯಲ್ಲಿ ಆತ್ಮಾವಲೋಕನ ಅಗತ್ಯವಾಗಿದೆ, ಇಂದು ಸರ್ಕಾರವನ್ನೇ ಪ್ರಶ್ನಿಸುವಂತಹ ಹಕ್ಕನ್ನು ಪಡೆದಿರುವ ನಮಗೆ ಅದು ಸಾಧ್ಯವಾಗಿದ್ದು ಸ್ವಾತöತ್ರ್ಯ ತಂದುಕೊಟ್ಟ ನಮ್ಮ ಪೂರ್ವಜರಿಂದ ಎಂದರು.
ಸ್ವಾತಂತ್ರ್ಯದ ಚಳುವಳಿಯಲ್ಲಿ ನಾವು ಪ್ರತ್ಯಕ್ಷವಾಗಿ ಭಾಗವಹಿಸದಿದ್ದರೂ ಅದರ ಅನುಭವವಾಗಲಿ ಎಂಬ ಸದುದ್ದೇಶದಿಂದ ಹಾಗೂ ಯುವ ಜನತೆಗೆ ಸ್ವಾತಂತ್ರ್ಯ ಹೋರಾಟದ ಮಹತ್ವ ಹಾಗೂ ವೈಭವ ತಿಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕಾರ್ಯಕ್ರಮಗಳನ್ನು ಆಯೋಜಿಸಿವೆ, ಯುವ ಜನತೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು, ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳನ್ನು ನೋಡಬೇಕು, ನಮ್ಮ ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡು, ಸಮಾಜದಲ್ಲಿ ಸಾಮರಸ್ಯ ಕದಡದಂತೆ ಜೀವನ ನಡೆಸಬೇಕು ಎಂದು ತಿಳಿಸಿದರು.
ಅಂದಿನಂತೆ ಇಂದು ನಾವು ಬ್ರಿಟಿಷರ ಸಂಕೋಲೆಯಲ್ಲಿ ಹಕ್ಕು ಕಳೆದುಕೊಂಡಿಲ್ಲ, ಉತ್ತಮ ಶಿಕ್ಷಣ ಪಡೆದು, ನಮ್ಮ ಹಕ್ಕನ್ನು ಮರೆಯದೇ ಚಲಾಯಿಸಬೇಕು, ಕರ್ತವ್ಯಗಳನ್ನು ಸೂಕ್ತವಾಗಿ ನಿಭಾಯಿಸಬೇಕು, ಯುವಜನತೆ ಮೇಲೆ ಭಾರತದ ಭವಿಷ್ಯ ನಿಂತಿದೆ, ಜೀವನವನ್ನು ಲಘುವಾಗಿ ತಗೆದುಕೊಳ್ಳದೇ ಶಿಸ್ತಿನಿಂದ ರೂಢಿಸಿಕೊಳ್ಳಬೇಕು, ದೇಶ ಕಟ್ಟುವ ಸಾಮಾಜಿಕ ಕಳಕಳಿಯಿರುವ ಭಾರತೀಯರಾಗಬೇಕು ಎಂದು ಅವರು ಯುವಜನತೆಗೆ ಕರೆ ನೀಡಿದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಇದೊಂದು ವಿಶಿಷ್ಟ ಹಾಗೂ ಅರ್ಥಗರ್ಭಿತ ಕಾರ್ಯಕ್ರಮ, ದೇಶದ ಎಲ್ಲಾ ನಾಗರೀಕರನ್ನು ತೊಡಗಿಸಿಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿರುವ ವಿಶಿಷ್ಟ ಹಾಗೂ ಮಹತ್ವಪೂರ್ಣವಾದ ಕಾರ್ಯಕ್ರಮ ಇದಾಗಿದೆ, ರಾಜ್ಯದ 75 ಸ್ಥಳಗಳಲ್ಲಿ ತಾಯಿ ಭಾರತಿಗೆ ಕನ್ನಡದ ಬಂಧುಗಳಿಂದ ವಿಶೇಷ ಆರತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾವು ಭಾಗಿಗಳಾಗಲಿಲ್ಲ, ಆದರೆ ನಮ್ಮ ಪೂರ್ವಜರು ತಂದುಕೊಟ್ಟ ಸ್ವಾತಂತ್ರ್ಯ ಉಳಿಸಿ ಬೆಳಸಿಕೊಂಡು ಹೋಗಬೇಕು ಎಂಬ ಚಿಂತನೆ ಕೆಂದ್ರ ಹಾಗೂ ರಾಜ್ಯ ಸರ್ಕಾರದ್ದಾಗಿದ್ದು, ಇದನ್ನು ಯುವ ಪೀಳಿಗೆ ಅರಿಯಬೇಕು ಎಂದು ಹೇಳಿದರು. 1857ರಲ್ಲಿ ಸಿಪಾಯಿದಂಗೆ ನಡೆಯಿತು, ಆದರೆ, 1837ರಲ್ಲಿ ಸ್ವಾತಂತ್ರö್ಯಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಆರಂಭವಾಗಿತ್ತು,ಸುಳ್ಯದ ಕದಂಬಾಡಿ ರೈತರ ತ್ಯಾಗ ಬಲಿದಾನ ಸ್ಮರಣೀಯ, ಕದಂಬಾಡಿ ರಾಮೇಗೌಡರ ನೆನಪನ್ನು ಈ ಪೀಳಿಗೆಗೆ ತಿಳಿಸಿಕೊಡುವ ಸಲುವಾಗಿ ಠಾಗೂರು ಪಾರ್ಕ್ ಬಳಿ ಅವರ ಪುತ್ಥಳಿ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್‌ಸಾರ್, ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಕೆ. ಜಗದೀಶ್ ಪೈ, ಮೂಡಾ ಅಧ್ಯಕ್ಷರಾದ ರವಿಶಂಕರ್ ಮಿಜಾರು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಸಹಾಯಕ ಆಯುಕ್ತ ಮದನ್ ಮೋಹನ್ ಹಾಗೂ ಉಪನ್ಯಾಸಕರಾಗಿ ಆಗಮಿಸಿದ್ದ ನಾರಾಯಣ ಗುರು ಕಾಲೇಜಿನ ಪ್ರಾಧ್ಯಾಪಕ ಕೇಶವ್ ಬಂಗೇರಾ ವೇದಿಕೆಯಲ್ಲಿದ್ದರು.
ಮೆರವಣಿಗೆಗೆ ಚಾಲನೆ: ಇದಕ್ಕೂ ಮುನ್ನ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಮೃತ ಭಾರತಿಗೆ ಕನ್ನಡ ಆರತಿ ಕಾರ್ಯಕ್ರಮದ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರಣಿಗೆಗೆ ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಕೆ. ಜಗದೀಶ್ ಪೈ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಾಥ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ, ಕ್ರೀಡಾ ಇಲಾಖೆ ನಿರ್ದೇಶಕ ಪ್ರದೀಪ್ ಡಿ.ಸೋಜ ಸೇರಿದಂತೆ ಅಧಿಕಾರಿಗಳು, ವಿವಿಧ ಸ್ತಿಶಕ್ತಿ ಸಂಘ ಪ್ರತಿನಿಧಿಗಳು,ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ,ಸೇವಕಿಯರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿದ್ದರು.
ಮೆರವಣಿಗೆಯಲ್ಲಿ ಚಂಡೆ, ಕಲ್ಲಡ್ಕ ಗೊಂಬೆ, ಸ್ಯಾಕ್ಸೋಫೋನ್, ಡೊಳ್ಳು ಕುಣಿತ, ಕೊರಗರ ಡೊಳ್ಳು, ಕೊಂಕಣಿ ನೃತ್ಯ ಸೇರಿದಂತೆ ಹಲವು ಪ್ರಕಾರಗಳ ಸಾಂಸ್ಕೃತಿಕ ಕಲಾ ಪ್ರಕಾರಗಳು ನೋಡುಗರ ಕಣ್ಮನ ಸೆಳೆದವು.