10:17 PM Thursday28 - November 2024
ಬ್ರೇಕಿಂಗ್ ನ್ಯೂಸ್
ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ!

ಇತ್ತೀಚಿನ ಸುದ್ದಿ

ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದ; ರಾಜ್ಯಕ್ಕೆ 65 ಸಾವಿರ ಕೋಟಿ ಬಂಡವಾಳ ಹರಿದು ಬರಲಿದೆ: ಸಿಎಂ ಬೊಮ್ಮಾಯಿ 

28/05/2022, 12:01

ಬೆಂಗಳೂರು(reporterkarnataka.com):  ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಕಂಪನಿಗಳು ಮುಂದೆ ಬಂದಿವೆ. ಅಂದಾಜು  65 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಕಂಪನಿಗಳು ಬದ್ಧತೆ ತೋರಿವೆ. ಇದು ಕೈಗಾರಿಕೆ ಸ್ಥಾಪನೆಗೆ ರಾಜ್ಯ ನೀಡುತ್ತಿರುವ ಪ್ರೋತ್ಸಾಹ ಹಾಗೂ ನೀತಿ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.‌

ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿನ ಪೂರಕ ಪರಿಸರ, ನೀತಿ ನಿಯಮಗಳು,  ತಂತ್ರಜ್ಞಾನ ಆಧಾರ, ಕೌಶಲ್ಯಯುತ ಮಾನವ ಸಂಪನ್ಮೂಲ, ಆರ್ ಎಂಡ್ ಡಿ ಕೇಂದ್ರಗಳು, ಉದ್ದಿಮೆಗಳಿಗೆ ನೀಡಲಾಗುವ ಪ್ರೋತ್ಸಾಹಕಗಳು, ಭೂಮಿಯ ಲಭ್ಯತೆಗಳಿಂದಾಗಿ ಬಂಡವಾಳ ಹೂಡಿಕೆ ಸಂಸ್ಥೆಗಳಿಗೆ ಕರ್ನಾಟಕದ ರಾಜ್ಯದ ಮೇಲೆ ವಿಶ್ವಾಸವನ್ನು ಮೂಡಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ -2022ಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಹಲವು ಜಾಗತಿಕ ಉದ್ದಿಮೆದಾರರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ಕರ್ನಾಟಕ ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, 

ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದವಾಗಿದೆ. ಕರ್ನಾಟಕದಲ್ಲಿ ಒಟ್ಟು 65 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ವಿಶ್ವ ಪ್ರಮುಖ ಸಂಸ್ಥೆಗಳು ಬದ್ಧತೆ ತೋರಿದ್ದು, ಸುಮಾರು 25 ಕಂಪನಿಗಳೊಂದಿಗೆ ಚರ್ಚಿಸಲಾಗಿದೆ. ಭಾರತ ದೇಶವನ್ನು ಹೊಸ ಆರ್ಥಿಕ ಶಕ್ತಿಯಾಗಿ ವಿಶ್ವ ಎದುರು ನೋಡುತ್ತಿದೆ. ಕರ್ನಾಟಕ ರಾಜ್ಯದ ಎಲ್ಲ ರಂಗಗಳಲ್ಲಿ ಹೂಡಿಕೆದಾರರು ಆಸಕ್ತಿ ತೋರಿದರು. ಬಂಡವಾಳ ಹೂಡಿಕೆಯ ಜೊತೆಗೆ ವಿಸ್ತರಣಾ ಕಾರ್ಯಕ್ಕೂ ಉತ್ಸುಕತೆ ತೋರಿದರು. ಹೈಡ್ರೋ ಪವರ್, ಏರೋಸ್ಪೇಸ್, ನವೀಕರಿಸಬಹುದಾದ ಇಂಧನ ಸೇರಿದಂತೆ ಪ್ರಮುಖ ಕ್ಷೇತ್ರದ ಅಂತರ

ರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಬಂಡವಾಳ ಹೂಡಿಕೆಯಲ್ಲಿ ಆಸಕ್ತಿ ತೋರಿದರು. ಹವಾಮಾನ ಬದಲಾವಣೆ, ನವೀಕರಿಸಬಹುದಾದ ಇಂಧನಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು ಎಂದರು.

ಕೋವಿಡ್ ನಂತರದ ದೇಶದ ಆರ್ಥಿಕತೆಯ ಬಲವರ್ಧನೆಯಲ್ಲಿ ಕರ್ನಾಟಕದ ಪಾತ್ರ ವಹಿಸಿದೆ ರಾಜ್ಯದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿರುವ ಸಂಸ್ಥೆಗಳ ಉದ್ದಿಮೆಗಳ ಸ್ಥಾಪನೆಗೆ ಅನುಕೂಲವಾಗುವಂತೆ ಮೂಲಭೂತಸೌಕರ್ಯ, ಉದ್ದಿಮೆ ಸ್ಥಾಪನೆಗೆ ಸರಳೀಕೃತ ಪ್ರಕ್ರಿಯೆಗಳು, ಈಸ್ ಆಫ್ ಡೂಯಿಂಗ್ ಬಿಸನೆಸ್ ನೀತಿಯ ಮೂಲಕ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.

ರೆನ್ಯೂ ಪವರ್ ಪ್ರೈ.ಲಿ.  ಕಂಪೆನಿಯು 50 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ 7 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸ್ಟೋರೇಜ್, ಗ್ರೀನ್ ಹೈಡ್ರೋಜನ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. 30 ಸಾವಿರಕ್ಕೂ ಹೆಚ್ಚು ಉದ್ಯೋಗವನ್ನು ನೀಡಲಿದೆ ಎಂದರು.ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು 2 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದು,4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.   10 ಸಾವಿರಕ್ಕೂ ಹೆಚ್ಚು ಉದ್ಯೋಗವನ್ನು ನೀಡಲಿದೆ ಎಂದರು.

ಜ್ಯೂಬಿಲಿಯಂಟ್ ಗ್ರೂಪ್, ಹಿಟಾಚಿ ಎನರ್ಜಿ, ಸೀಮೆನ್ಸ್ , ಅಬ್ ಇನ್ಬೇವ್, ದಸ್ಸಾಲ್ಟ್ ಸಿಸ್ಟಂ , ನಸ್ಟ್ಲೆ , ಆರ್ಸೆಲಾರ್ ಮಿತ್ತಲ್ ಸಂಸ್ಥೆ ಭಾರ್ತಿ ಎಂಟರ್ ಪ್ರೈಸಸ್, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡುವ ಭರವಸೆ ನೀಡಿವೆ ಎಂದರು.ಇದಲ್ಲದೆ ಅದಾನಿ ಗ್ರೂಪ್, ದಾಲ್ಮಿಯಾ ಸಿಮೆಂಟ್, ಜಾನ್ಸ್ ನ್ ಕಂಟ್ರೋಲ್ಸ್, ಹನಿವೆಲ್, ಐಬಿಎಂ, ಐಕಿಯ ಸ್ಟೋರ್ಸ್, ಪೇಪಾಲ್, ಆಕ್ಸಿಸ್ ಬ್ಯಾಂಕ್ ಸಂಸ್ಥೆಗಳು ರಾಜ್ಯದ ವಿವಿಧ ವಲಯಗಳಲ್ಲಿ ಹೂಡಿಕೆ ಅವಕಾಶ ಬಗ್ಗೆ ಆಸಕ್ತಿ ತೋರಿರುವುದಾಗಿ ತಿಳಿಸಿದರು.

ಕರ್ನಾಟಕ ಸರ್ಕಾರ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಹಮ್ಮಿಕೊಂಡಿರುವ ಯೋಜನೆಯಂತೆ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲಸೌಲಭ್ಯ ನೀಡಲು  ಆಕ್ಸಿಸ್ ಬ್ಯಾಂಕ್ ಸಂಸ್ಥೆಗೆ ಆ್ಯಂಕರ್ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುವಂತೆ ಕೋರಲಾಗಿದೆ ಎಂದು ತಿಳಿಸಿದರು.

ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ಹಾಗೂ ಬೆಂಗಳೂರು ಟೆಕ್ ಸಮಿಟ್ ನಲ್ಲಿ ಭಾಗವಹಿಸಲು ವಿಶ್ವದ ಎಲ್ಲ ಪ್ರಮುಖ ಸಂಸ್ಥೆಗಳಿಗೆ ಆಹ್ವಾನ ನೀಡಲಾಗಿದೆ ಎಂದರು.ನವೆಂಬರ್ ಮಾಹೆಯೊಳಗೆ ನಗರದ ಮೂಲಸೌಲಭ್ಯವನ್ನು ಸರಿಪಡಿಸಲಾಗುವುದು. ಇದಕ್ಕಾಗಿ ಕಾರ್ಯಪಡೆಯನ್ನು ರಚಿಸಲಾಗಿದೆ. ನಗರೋತ್ಥಾನ ಯೋಜನೆಯಡಿಯಲ್ಲಿ 6 ಸಾವಿರ ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದ್ದು, ಮುಂದಿನ 18 ತಿಂಗಳಲ್ಲಿ  ಕೆಲಸ ಪೂರ್ಣಗೊಳಿಸಲಾಗುವುದು ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು