1:03 AM Sunday21 - September 2025
ಬ್ರೇಕಿಂಗ್ ನ್ಯೂಸ್
ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ…

ಇತ್ತೀಚಿನ ಸುದ್ದಿ

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ: ತಲಕಾವೇರಿ, ಭಾಗಮಂಡಲದಲ್ಲಿ ಉಕ್ಕಿ ಹರಿದ ತೊರೆ; ಜನಜೀವನ ಅಸ್ತವ್ಯಸ್ತ

19/05/2022, 08:26

ಸಾಂದರ್ಭಿಕ ಚಿತ್ರ
ಮಡಿಕೇರಿ(reporterkarnataka.com): ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬುಧವಾರದಿಂದ

ಧಾರಾಕಾರ ಮಳೆಯಾಗಿದೆ. ನೈಋತ್ಯ ಮುಂಗಾರಿನ ಪ್ರವೇಶಕ್ಕೂ ಮೊದಲೇ ವಾಯುಭಾರ ಕುಸಿತದಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿರುವುದಲ್ಲದೆ ಕೃಷಿ ಚಟುವಟಿಕೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೂ ಹಿನ್ನಡೆಯಾಗಿದೆ.

ಕಳೆದ ಕೆಲವು ದಿನಗಳಿಂದ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಸೂರ್ಯ ದರ್ಶನವೇ ಇಲ್ಲದಂತೆ ಕಾರ್ಮೋಡಗಳು ಕವಿದಿವೆ. ಮಂಗಳವಾರ ರಾತ್ರಿ ಮಡಿಕೇರಿ, ತಲಕಾವೇರಿ ಕ್ಷೇತ್ರ, ಭಾಗಮಂಡಲ, ನಾಪೋಕ್ಲು, ಶನಿವಾರಸಂತೆ, ಶಾಂತಳ್ಳಿ ವಿಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಕಿರು ತೊರೆಗಳು ಉಕ್ಕಿ ಹರಿದಿವೆ. ಗ್ರಾಮೀಣ ಭಾಗದ ಸಂಚಾರ ವ್ಯವಸ್ಥೆಗೆ ತೊಡಕುಂಟಾಗಿದೆ.

ಕಾವೇರಿ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ ಸರಾಸರಿ 3 ಇಂಚಿನಷ್ಟು ಮಳೆಯಾಗಿದ್ದರೆ, ಮಡಿಕೇರಿ ವ್ಯಾಪ್ತಿಯಲ್ಲಿ 2 ಇಂಚು ಮಳೆ ಸುರಿದಿದೆ. ಬುಧವಾರ ಬೆಳಗ್ಗೆ ಕೂಡಾ ಜಿಲ್ಲೆಯಲ್ಲಿ ಮಳೆಯ ವಾತಾವರಣವಿತ್ತು.

ಚಾಲಕರ ಪರದಾಟ: ಕವಿದ ಮೋಡ, ಸುರಿಯುವ ಮಳೆಯೊಂದಿಗೆ, ರಾತ್ರಿ ಮತ್ತು ಬೆಳಗಿನ ಅವಧಿಯಲ್ಲಿ ದಟ್ಟವಾಗಿರುವ ಮಂಜಿನಿಂದ ರಸ್ತೆಗಳು ಸ್ಪಷ್ಟವಾಗಿ ಕಾಣದೆ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಸಕ್ಕೆಂದು ಜಿಲ್ಲೆಗೆ ಪ್ರತಿನಿತ್ಯ ಹೊರ ಜಿಲ್ಲೆ, ರಾಜ್ಯಗಳಿಂದ ನೂರಾರು ವಾಹನಗಳು ಆಗಮಿಸುತ್ತಿದ್ದು, ಮಂಜು ಮುಸುಕಿದಾಗ ಅಪಘಾತಗಳು ಸಾಮಾನ್ಯವಾಗಿದೆ.

ವಿದ್ಯುತ್ ವ್ಯತ್ಯಯ: ನಿರಂತರ ಮಳೆಯಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ವಿದ್ಯುತ್ ಮಾರ್ಗದಲ್ಲಿ ಅಲ್ಲಲ್ಲಿ ಮರದ ಕೊಂಬೆಗಳು ಬಿದ್ದಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಮಡಿಕೇರಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 49.12 ಮಿ.ಮೀ. ಮಳೆಯಾಗಿದ್ದು, ನಂತರದಲ್ಲಿ ಮತ್ತಷ್ಟು ಚುರುಕುಗೊಂಡಿದೆ.

ಕಳೆದ 24ಗಂಟೆಗಳಲ್ಲಿ ಮಡಿಕೇರಿ ತಾಲೂಕಿನಲ್ಲಿ 51.65 ಮಿ.ಮೀ. ವೀರಾಜಪೇಟೆ ತಾಲೂಕಿನಲ್ಲಿ 38.03 ಮಿ.ಮೀ. ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 57.67 ಮಿ.ಮೀ. ಮಳೆ ಬಿದ್ದಿದೆ.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 44.80, ನಾಪೋಕ್ಲು 47.80, ಸಂಪಾಜೆ 44, ಭಾಗಮಂಡಲ 70, ವೀರಾಜಪೇಟೆ ಕಸಬಾ 52.60, ಹುದಿಕೇರಿ 27, ಶ್ರೀಮಂಗಲ 47.60, ಪೊನ್ನಂಪೇಟೆ 35, ಅಮ್ಮತ್ತಿ 32.50, ಬಾಳೆಲೆ 33.50, ಸೋಮವಾರಪೇಟೆ ಕಸಬಾ 60, ಶನಿವಾರಸಂತೆ 50.20, ಶಾಂತಳ್ಳಿ 68.40, ಕೊಡ್ಲಿಪೇಟೆ 46, ಕುಶಾಲನಗರ 76.40, ಸುಂಟಿಕೊಪ್ಪ 45 ಮಿ.ಮೀ.ಮಳೆಯಾಗಿದೆ.

ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಬುಧವಾರ ಜಲಾಶಯದಲ್ಲಿ 2848.35 ಅಡಿ ನೀರಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 2821.66 ಅಡಿ ನೀರು ಸಂಗ್ರಹವಾಗಿತ್ತು.

ಜಲಾಶಯಕ್ಕೆ ಪ್ರಸಕ್ತ 760 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ಒಳ ಹರಿವು 287 ಕ್ಯುಸೆಕ್’ನಷ್ಟಿತ್ತು. ಜಲಾಶಯದಿಂದ ನದಿಗೆ ಹಾಗೂ ನಾಲೆಗೆ ತಲಾ 20 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಹೊರ ಹರಿವು ನದಿಗೆ 50 ಹಾಗೂ ನಾಲೆಗೆ 40 ಕ್ಯುಸೆಕ್’ನಷ್ಟಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು