ಇತ್ತೀಚಿನ ಸುದ್ದಿ
ಕೇರಳದ ಟೊಮೆಟೋ ಜ್ವರ: ಕೊಡಗಿನಲ್ಲಿ ಮುನ್ನೆಚ್ಚರಿಕಾ ಕ್ರಮ; ಗಡಿಯಲ್ಲಿ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ
15/05/2022, 19:00
ಮಡಿಕೇರಿ(reporterkarnataka.com): ಕೇರಳದಲ್ಲಿ ಕಂಡು ಬಂದ ಟೊಮೆಟೋ ಜ್ವರದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಿಂದ ಕೊಡಗಿಗೆ ಬರುವ ವಾಹನಗಳನ್ನು ಗಡಿ ಭಾಗದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ಟೊಮೆಟೋ ಜ್ವರ 5 ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬರುತ್ತಿದ್ದು, ಕೋವಿಡ್‍ಗೂ ಟೊಮೆಟೋ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ. ಇದುವರೆಗೂ ಕೊಡಗಿನಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಕೊಡಗಿಗೆ ಸಾಕಷ್ಟು ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯ ಜನ ಎಚ್ಚರ ವಹಿಸಬೇಕು. ಈಗಾಗಲೇ ತಾಲೂಕು ವೈದ್ಯಾಧಿಕಾರಿಗಳಿಗೂ ಜವಾಬ್ದಾರಿಯನ್ನು ನೀಡಲಾಗಿದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಮೈ-ಕೈ ನೋವು, ಜ್ವರ, ಚರ್ಮದಲ್ಲಿ ಗುಳ್ಳೆಗಳು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಡಾ.ಆರ್.ವೆಂಕಟೇಶ್ ತಿಳಿಸಿದರು.