ಇತ್ತೀಚಿನ ಸುದ್ದಿ
ಧಾರ್ಮಿಕ ಮಹತ್ವ ಕಡೆಗಣಿಸಿ ಗುಜ್ಜರಕೆರೆ ಅಭಿವೃದ್ಧಿ?: ಪವಿತ್ರ ಜಲದಲ್ಲಿ ಇನ್ನೂ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆ!
30/04/2022, 18:50
ಮಂಗಳೂರು(reporterkarnataka.com): ಸಾವಿರಾರು ವರ್ಷಗಳ ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯಿರುವ ನಗರದ ಮಂಗಳಾದೇವಿ ಸಮೀಪದ ಗುಜ್ಜರಕೆರೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದರೂ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿವೆ.
ನಾಥ ಪಂಥದ ಗುರು ಶ್ರೀ ಮತ್ಸ್ಯೇಂದ್ರನಾಥರಿಗಾಗಿ ಅವರ ಶಿಷ್ಯ ಗೋರಕ್ಷನಾಥರು ನಿರ್ಮಿಸಿದರು ಎನ್ನುವ ಐತಿಹ್ಯವಿದೆ.
ಇತ್ತೀಚೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಕೆರೆಯ ಅಭಿವೃದ್ಧಿ ಕಾರ್ಯ ನಡೆಯಿತು.
ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಕಡೆಗಣಿಸಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದು ಹಾಗೂ ಕೆರೆಯ ನೀರಿನ ಶುದ್ಧೀಕರಣಕ್ಕೆ ಕ್ರಮಗಳನ್ನು ಕೈಗೊಳ್ಳದೇ ಇರುವುದು ನೀರಿನಲ್ಲಿ ಬ್ಯಾಕ್ಟೀರಿಯಾ ಅಂಶ ಪತ್ತೆಗೆ ಕಾರಣವೆಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯಾಕ್ಟೀರಿಯಾ ಅಂಶಗಳು ಪತ್ತೆ; ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ವತಿಯಿಂದ ನೀರಿನ ಶುದ್ಧತೆ ಕುರಿತಂತೆ ಪರೀಕ್ಷಿಸಲು ಇತ್ತೀಚೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ ನೀರಿನ ಸ್ಯಾಂಪಲ್ ನಲ್ಲಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿದ್ದು ನೀರು ಸೇವನೆಗೆ ಯೋಗ್ಯವಲ್ಲ ಎಂದು ವರದಿ ಬಂದಿದೆ.
ಗುಜ್ಜರಕೆರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಭಾಗ್ಯ ಲಭಿಸಿದರೂ ನೀರಿನಲ್ಲಿ ಇನ್ನೂ ಬ್ಯಾಕ್ಟೀರಿಯಂಶಗಳು ಪೂರ್ಣಪ್ರಮಾಣದಲ್ಲಿ ನಿವಾರಣೆಯಾಗಿಲ್ಲ ಎನ್ನುವ ಅಂಶ ಈ ಹಿಂದೆಯೂ ಬೆಳಕಿಗೆ ಬಂದಿದ್ದು, ಡ್ರಜ್ಜಿಂಗ್ ಬಳಿಕವೂ ವಿಷಕಾರಿ ಅಂಶಗಳು ಪತ್ತೆಯಾಗಿರುವುದು ಹಾಗೂ ವಿಷಕಾರಿ ಅಂಶಗಳ ಪ್ರಮಾಣದಲ್ಲಿ ಏರಿಕೆ ಆಗಿರುವುದು ಆತಂಕಕಾರಿಯಾಗಿದೆ. ಈ ಪ್ರದೇಶದ ಒಳ ಚರಂಡಿ ಅವ್ಯವಸ್ಥೆ ಹಾಗೂ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಕಾನೂನುಗಳನ್ನು ಸಮರ್ಪಕವಾಗಿ ಸ್ಥಳೀಯ ಆಡಳಿತ ಜಾರಿ ಮಾಡದೇ ಇರುವುದು ಈ ಸಮಸ್ಯೆಗೆ ಮೂಲ ಕಾರಣ ಎಂಬುದು ಪರಿಸರ ಪ್ರೇಮಿಗಳ ನಿಲುವಾಗಿದೆ.
ಮೋಜು ಮಸ್ತಿ ಅಡ್ಡ: ಇಲ್ಲಿನ ಐತಿಹ್ಯಕ್ಕೆ ಧಾರ್ಮಿಕ ಹಿನ್ನೆಲೆಗೆ ಮಹತ್ವ ನೀಡದೆ ಕೇವಲ ಪ್ರವಾಸೋದ್ಯಮ ದೃಷ್ಟಿಯಿಂದ ಕೆರೆಯ ಸುತ್ತಲೂ ಸಿಂಥೆಟಿಕ್ ಟ್ರ್ಯಾಕ್, ವಿಹಾರಿಗಳಿಗೆ ಕುಳಿತುಕೊಳ್ಳಲು ಆಸನ, ಓಪನ್ ಜಿಮ್, ಮಕ್ಕಳಿಗೆ ಆಟವಾಡಲು ಸೌಕರ್ಯಗಳನ್ನು ಮಾಡಲಾಗಿದ್ದು, ಧಾರ್ಮಿಕ ಮಹತ್ವದ ಈ ಪವಿತ್ರ ತೀರ್ಥ ಕೆರೆಯು ರಾತ್ರಿ ವೇಳೆ ಮಧ್ಯಪಾನ ,ಧೂಮಪಾನಿಗಳ ತಾಣವಾಗಿ ಅನೈತಿಕ ಚಟುವಟಿಕೆಗಳಿಗೆ ಪೂರಕವಾದ ಮೋಜು ಮಸ್ತಿ ಅಡ್ಡೆಯಾಗಿ ಮಾರ್ಪಟ್ಟಿದೆ.
ಜಿಲ್ಲೆಯ ಪುರಾತನ ದೇಗುಲದ ತೀರ್ಥ ಕೆರೆಯು ಆಗಿರುವ ಗುಜ್ಜರಕೆರೆಯ ಪರಿಸರದಲ್ಲಿ ಜಿಲ್ಲೆಯ ಪ್ರಸಿದ್ಧ ದೈವಜ್ಞರ ಸಮ್ಮುಖದಲ್ಲಿ ಈ ಹಿಂದೆ ನಡೆದಿದ್ದ ಪ್ರಶ್ನಾಚಿಂತನೆಯ ವಿಚಾರಗಳು, ಕೆರೆಯ ಐತಿಹಾಸಿಕ ಧಾರ್ಮಿಕ ಐತಿಹಾಸಿಕ ಮಹತ್ವ ಕಡೆಗಣಿಸಿ ಕೇವಲ ಪಿಕ್ ನಿಕ್ ಸ್ಪಾಟ್ ಆಗಿ ಪರಿವರ್ತಿಸಿರುವುದಕ್ಕೆ ಪರಿಸರ ನಿವಾಸಿಗಳ ವಿರೋಧ ವ್ಯಕ್ತವಾಗಿದೆ.
ಆಡಳಿತದ ಸಂಪೂರ್ಣ ನಿರ್ಲಕ್ಷ್ಯ: ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ತಿದ್ದುಪಡಿ ಕಾಯ್ದೆಯ ಸೆಕ್ಷನ್ 12ರ ಅನ್ವಯ ಕೆರೆ ಸುತ್ತಲಿನ 30 ಮೀಟರ್ ಪ್ರದೇಶ ಬಫರ್ ಜೋನ್ ಆಗಿದ್ದು, ಅದರಲ್ಲಿನ ಒತ್ತುವರಿಯನ್ನು ತೆರವು ಮಾಡದಿರುವುದು ಸೇರಿದಂತೆ ಇನ್ನಿತರ ಕೆರೆ ಸಂರಕ್ಷಣಾ ವಿಚಾರಗಳಿಗೆ ಪೂರಕವಾಗಿ ಸ್ಥಳೀಯ ಆಡಳಿತ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಿದ್ದು, ಈ ನಿರ್ಲಕ್ಷದಿಂದಲೇ ಹಲವು ಸಮಸ್ಯೆ ಎದುರಾಗಿದ್ದು, ಪ್ರಮುಖವಾಗಿ ಸ್ಥಳೀಯ ಒಳಚರಂಡಿ ನೀರು ಕೆರೆಗೆ ಸೇರಿ ಕೆರೆಯ ನೀರಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ಸಂದೇಹವೂ ಇದ್ದು ಈ ಕೆರೆಯ ವಿಚಾರದಲ್ಲಿ ಕೆರೆ ಸಂರಕ್ಷಣಾ ಕಾನೂನುಗಳನ್ನು ಅನ್ವಯಿಸಿ ಕಠಿಣ ಕ್ರಮ ಕೈಗೊಳ್ಳುವಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದ್ದು, ಕೇವಲ ದುಂದು ವೆಚ್ಚದ ಯೋಜನೆಗಳಿಗೆ ಆಸ್ಪದ ನೀಡಿರುವ ಕಾರಣ ಭವಿಷ್ಯದಲ್ಲಿ ಕೆರೆಯ ಪರಿಸರಕ್ಕೆ ಇನ್ನೂ ಹೆಚ್ಚಿನ ಹಾನಿ ಎದುರಾಗುವುದರಲ್ಲಿ ಸಂಶಯವಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಎರಡು ದಶಕಗಳ ಹೋರಾಟ; ಈ ಪವಿತ್ರ ತೀರ್ಥ ಕೆರೆಯು ನಾಮಾವಶೇಷ ಸ್ಥಿತಿ ತಲುಪಿದ್ದಾಗ , ಸ್ಥಳೀಯರು ಸೇರಿ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯನ್ನು ಸ್ಥಾಪಿಸಿ 2001ರಿಂದ ಹಲವು ಹಂತಗಳಲ್ಲಿ ಹೋರಾಟ ನಡೆಸಿ ಕೆರೆಯನ್ನು ಸಂರಕ್ಷಿಸಿದ್ದಾರೆ.
ಎರಡು ದಶಕಗಳಲ್ಲಿ ಸ್ಥಳೀಯ ಆಡಳಿತ ಈ ಕೆರೆಯ ಸಂರಕ್ಷಣಾ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದ ಸಂದರ್ಭ ಹಲವು ಬಾರಿ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೊರೆ ಹೋಗಿರುವುದು ಗಮನಾರ್ಹ.