ಇತ್ತೀಚಿನ ಸುದ್ದಿ
ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ; ದಿವ್ಯಾ ಹಾಗರಗಿ ಶೀಘ್ರ ಬಂಧನ: ಮುಖ್ಯಮಂತ್ರಿ ಬೊಮ್ಮಾಯಿ
23/04/2022, 09:12
ಬೆಂಗಳೂರು(reporterkarnataka.com): 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಹಗರಣ ನಡೆಸಿದ ಆರೋಪ ಎದುರಿಸುತ್ತಿರುವ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯಸ್ಥೆ, ದಿವ್ಯಾ ಹಾಗರಗಿ ಅವರನ್ನು ಶೀಘ್ರ ಬಂಧಿಸಲಾಗುವುದು. ಈ ಬಗ್ಗೆ ಸಿಐಡಿ ಅಧಿಕಾರಿಗಳು ಚುರುಕಿನ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಹಿಂಜರಿಯುವ ಪ್ರಶ್ನೆಯೇ ಇಲ್ಲ. ಆರೋಪ ಕೇಳಿಬಂದ ತಕ್ಷಣ ನಾವೇ ಸಿಐಡಿ ತನಿಖೆಗೆ ಆದೇಶ ನೀಡಿದ್ದೇವೆ. ಇದು ಗೊತ್ತಿದ್ದರೂ ಕಾಂಗ್ರೆಸ್ ಮುಖಂಡರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇವರ ಸರ್ಕಾರ ಇದ್ದಾಗ ನಡೆದ ಹಗರಣಗಳ ಬಗ್ಗೆ ಯಾವತ್ತಾದರೂ ತನಿಖೆಗೆ ಆದೇಶ ನೀಡಿದ್ದಾರೆಯೇ?’ ಎಂದೂ ಪ್ರಶ್ನಿಸಿದರು.
‘ಅವರ ಆಡಳಿತದಲ್ಲಿ ನಡೆದ ಅಕ್ರಮಗಳ ತನಿಖೆ ಮಾತೇ ಎತ್ತಲಿಲ್ಲ. ಹಿಂದೆ ಆರಂಭವಾದ ಕೆಲ ತನಿಖೆಗಳನ್ನು ಪೂರ್ಣಗೊಳಿಸಲಿಲ್ಲ. ಆದರೆ, ನಾನು ಅಕ್ರಮದ ಆರೋಪ ಬಂದ ಕ್ಷಣದಿಂದಲೇ ಕ್ಷಿಪ್ರ ಕ್ರಮ ವಹಿಸಿದ್ದೇನೆ’ ಎಂದರು.
‘ದಿವ್ಯಾ ಅವರು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಹಾಗೂ ದಿಶಾ ಸಮಿತಿ ಸದಸ್ಯೆ ಆಗಿದ್ದಾರೆ. ಅವರ ಮೇಲೆ ಅಕ್ರಮ ಆರೋಪ ಬಂದ ಕಾರಣ ಎರಡೂ ಸ್ಥಾನದಿಂದ ಪದಚ್ಯುತಿಗೊಳಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.
‘ಈಗಾಗಲೇ ದಿವ್ಯಾ ಅವರ ಪತಿ ಸೇರಿ 12 ಆರೋಪಿಗಳನ್ನು ಬಂಧಿಸಲಾಗಿದೆ. ನಾವು ತನಿಖೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಪುನರುಚ್ಚರಿಸಿದರು.
‘ಪ್ರಕರಣದಲ್ಲಿ ಕಾಂಗ್ರೆಸ್‌ನ ಅಫಜಲಪುರ ಶಾಸಕ ಎಂ.ವೈ. ಪಾಟೀಲ ಅವರ ಗನ್‌ಮ್ಯಾನ್ ಹಯ್ಯಾಳಿ ಎಂಬಾತನನ್ನೂ ಬಂಧಿಸಲಾಗಿದೆ. ಇಂಥವರೇ ಗನ್‌ಮ್ಯಾನ್ ಬೇಕು ಎಂದು ಶಾಸಕರೇ ಕೇಳಿದ್ದಾರೆ. ನಾವು ನಿಯೋಜನೆ ಮಾಡಿದ್ದೇವೆ. ಆದರೆ, ಈಗ ಗನ್‌ಮ್ಯಾನ್ ಸರ್ಕಾರಿ ಕೆಲಸಗಾರ, ಅವರ ಅಕ್ರಮಕ್ಕೆ ಸರ್ಕಾರವೇ ಜವಾಬ್ದಾರಿ, ನನಗೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಯಾವಾಗಲೂ ತಮ್ಮೊಂದಿಗೆ ಇರುತ್ತಿದ್ದ ಗನ್‌ಮ್ಯಾನ್ ಯಾರು? ಏನು? ಅವನ ಹಿನ್ನೆಲೆ ಬಗ್ಗೆ ಇವರಿಗೆ ಗೊತ್ತೇ ಇತ್ತಲ್ಲ. ಈಗ ಏಕೆ ನುಸುಳಿಕೊಳ್ಳುವ ಹೇಳಿಕೆ ನೀಡಬೇಕು’ ಎಂದೂ ಬಸವರಾಜ ಬೊಮ್ಮಾಯಿ ಖಾರವಾಗಿ ಪ್ರಶ್ನಿಸಿದರು.