ಇತ್ತೀಚಿನ ಸುದ್ದಿ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಸಚಿವ ಈಶ್ವರಪ್ಪ ಕೊನೆಗೂ ರಾಜೀನಾಮೆ
14/04/2022, 19:24
ಬೆಂಗಳೂರು (reporterkarnataka.com):
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ .ಈಶ್ವರಪ್ಪ ಅವರು ತನ್ನ ಸಚಿವ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.
ಈಶ್ವರಪ್ಪ ಅವರು ನಿನ್ನೆ ಮೈಸೂರಿನ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ದೌಡಾಯಿಸಿದ್ದರು. ಬೆಂಗಳೂರಿನಲ್ಲಿ ಅವರು ಮಾಧ್ಯಮ ಜತೆ ಮಾತನಾಡಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಸಂತೋಷ್ ಪಾಟೀಲ್ ಯಾರೆಂದು ತನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.
ಈ ಮಧ್ಯೆ ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಮಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಂಗಿದ್ದ ಖಾಸಗಿ ಹೋಟೆಲ್ ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿದ್ದರು. ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಿ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿಯೂ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಇದೀಗ ಒತ್ತಡ ಹೆಚ್ಚುತ್ತಿದ್ದಂತೆ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ.