ಇತ್ತೀಚಿನ ಸುದ್ದಿ
ಸಿಎಂ ತಂಗಿದ್ದ ಹೋಟೆಲ್ ಗೆ ಯುವ ಕಾಂಗ್ರೆಸ್ ಮುತ್ತಿಗೆ, ಕಪ್ಪು ಬಾವುಟ ಪ್ರದರ್ಶನ: ಪೊಲೀಸ್ ಕಮಿಷನರ್ ತಲೆದಂಡ?
12/04/2022, 19:20
ಮಂಗಳೂರು(reporterkarnataka.com): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಂಗಿದ್ದ ನಗರದ ಖಾಸಗಿ ಹೋಟೆಲ್ ವೊಂದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶಿಸಿದ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಮಂಗಳೂರು ಪೊಲೀಸ್ ಕಮಿಷನರ್ ತಲೆದಂಡವಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಪ್ರಕರಣದ ಕುರಿತು ಮಾಹಿತಿ ರಾಜ್ಯ ಗೃಹ ಇಲಾಖೆಗೆ ಈಗಾಗಲೇ ರವಾನೆಯಾಗಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಗೃಹ ಸಚಿವಾಲಯ ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಲ್ಲಿ ವಿವರಣೆ ಕೇಳಿದೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಂಗಿದ್ದ ಹೋಟೆಲ್ ಗೆ ಕಪ್ಪು ಬಾವುಟ ಜತೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿರುವುದನ್ನು ಸ್ಥಳೀಯ ಪೊಲೀಸ್ ಇಲಾಖೆಯ
ಭದ್ರತಾ ಲೋಪವೆಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಹೊಟೇಲಿನ ಬಾಗಿಲವರೆಗೆ ತಲುಪುವ ತನಕ ಪೊಲೀಸರಿಗೆ ಯಾವುದೇ ಸುಳಿವು ದೊರಕಿರಲಿಲ್ಲ.
ಕಾಂಗ್ರೆಸ್ ಕಾರ್ಯಕರ್ತರು ಹೋಟೆಲ್ ಗೆ ಮುತ್ತಿಗೆ ಹಾಕುವ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ ರಾಜ್ಯ ಗುಪ್ತಚರ ಇಲಾಖೆ ಕೂಡ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅಥವಾ ಗುಪ್ತಚರ ಇಲಾಖೆಯ ಮುಖ್ಯಸ್ಥರ ತಲೆದಂಡವಾಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ರಿಪೋರ್ಟರ್ ಕರ್ನಾಟಕಕ್ಕೆ ಮಾಹಿತಿ ಲಭಿಸಿದೆ.
ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ ಅವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ರಾಷ್ಟ್ರಕವಿ ಡಾ. ಗೋವಿಂದ ಪೈ ಸರ್ಕಲ್ ಬಳಿಯಿರುವ ಹೋಟೆಲ್ ಗೆ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶಿಸಿ ಧಿಕ್ಕಾರ ಕೂಗಿದ್ದರು. ಯಾವುದೇ ಸೂಚನೆ ಇಲ್ಲದೆ ಮುತ್ತಿಗೆ ನಡೆಸಿರುವುದರಿಂದ ಭದ್ರತಾ ಸಿಬ್ಬಂದಿಗಳು ಸ್ವಲ್ಪ ಹೊತ್ತು ವಿಚಲಿತರಾದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಸಿಬ್ಬಂದಿಗಳು ಕಾಂಗ್ರೆಸ್ ಕಾರ್ಯಕರ್ತರು ಹೋಟೆಲ್ ಗೆ ನುಗ್ಗುವುದನ್ನು ತಡೆದರು. ನಂತರ ಪ್ರತಿಭಟನಾಕಾರರನ್ನು ಬಂಧಿಸಲಾಯಿತು.