ಇತ್ತೀಚಿನ ಸುದ್ದಿ
ನಿಮಗೆ ಗೊತ್ತಾಗದಾಗೆ ನಿಮ್ಮ ರೇಶನ್ ಕಾರ್ಡ್ ಬಿಪಿಎಲ್ ನಿಂದ ಎಪಿಎಲ್ ಗೆ ಬದಲಾಗುತ್ತೆ. !!: ಕಾರಣ ಏನು ಗೋತ್ತೇ?.ಓದಿ ಮುಂದಕ್ಕೆ
12/06/2021, 14:10
ಅನುಷ್ ಪಂಡಿತ್ ಮಂಗಳೂರು
info. reporterkaranataka@gmail.com
ಕೊರೊನಾ ಮಹಾಮಾರಿಯಿಂದ ಜನರು ಕೆಲಸವಿಲ್ಲದೆ ಪರದಾಡುತ್ತಿರುವ ಸಂದಿಗ್ಧ ಕಾಲದಲ್ಲಿ ಬಡ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಬ್ಯಾಂಕ್ ಸಾಲಕ್ಕಾಗಿ ಸಲ್ಲಿಸಿದ ಆದಾಯ ತೆರಿಗೆ(ಐಟಿ) ಪಾವತಿಯೇ ಈಗ ಕೊರಳಿಗೆ ನೇಣಾಗಿ ಪರಿಣಮಿಸಿದೆ. ಐಟಿ ಪಾವತಿಸಿದ ಮಂದಿಯ ಬಿಪಿಎಲ್ ಕಾರ್ಡ್ ಸದ್ದಿಲ್ಲದೆ ರದ್ದಾಗುತ್ತಿದೆ.
ಬಹುಕೋಟಿ ಉದ್ಯಮಿಗಳಿಂದ ಆರಂಭಗೊಂಡು ಒಬ್ಬ ಸಾಮಾನ್ಯ ಮನುಷ್ಯ ವರೆಗೆ ಎಲ್ಲರೂ ಬ್ಯಾಂಕ್ ಲೋನ್ ಹೊಂದಿದವರೇ ಆಗಿರುತ್ತಾರೆ. ತಮ್ಮ ಅಗತ್ಯ ಕಾರ್ಯಗಳಿಗೆ ಬ್ಯಾಂಕ್‌ಗಳಲ್ಲಿ ಲೋನ್ ಪಡೆಯುವ ಮೊದಲು ಮೂರು ವರ್ಷದ ಐಟಿ ದಾಖಲೆಯನ್ನು ಬ್ಯಾಂಕಿಗೆ ಸಲ್ಲಿಸಬೇಕು. ಇಂತಿಷ್ಟು ಆದಾಯವಿದ್ದರೆ ಮಾತ್ರ ಸಾಲ ಕೊಡುವುದಾಗಿ ಬ್ಯಾಂಕ್ ಹೇಳುತ್ತದೆ. ಸ್ವ ಉದ್ಯೋಗ ಮಾಡುವವರು ತಮಗೆ ವಾರ್ಷಿಕವಾಗಿ ಅಷ್ಟು ಆದಾಯ ಬರದಿದ್ದರೂ ಬ್ಯಾಂಕ್ ಲೋನ್ ಗಾಗಿ ಆದಾಯ ಹೆಚ್ಚು ತೋರಿಸಿ ಐಟಿ ಫೈಲ್ ಮಾಡುತ್ತಾರೆ. ಇದನ್ನೇ ಅಸ್ತ್ರವಾಗಿಸಿಕೊಂಡು ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ. ಇದರಿಂದ ಬಡತನ ರೇಖೆಗಿಂತ ಕೆಳಗಿರುವ ರೇಶನ್ ಕಾರ್ಡ್ ದಾರರು ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
೧.೨೦ ಲಕ್ಷ ರೂ.ಗಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿದವರು ಬಿಪಿಎಲ್ ಕಾರ್ಡ್ ಹೊಂದಲು ಅರ್ಹತೆಯನ್ನು ಪಡೆದಿರುವುದಿಲ್ಲ. ಇದರಂತೆ ಸಾಲಗಾರನಿಗೆ ಗೊತ್ತಾಗದ ರೀತಿಯಲ್ಲಿ ಬಿಪಿಎಲ್ ಕಾರ್ಡ್‌ನಿಂದ ಎಪಿಎಲ್ ಕಾರ್ಡ್‌ಗೆ ಬದಲಾಗುತ್ತಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಅನೇಕ
ಜನರು ಕೆಲಸವಿಲ್ಲದೆ ರೇಷನ್ ಅಕ್ಕಿಗಾಗಿ ಪಡಿತರ ಅಂಗಡಿಯ ಕ್ಯೂನಲ್ಲಿ ನಿಂತರೆ, ಆತನ ಸರದಿ ಬರುವಾಗ ಶಾಕ್ ಕಾದಿರುತ್ತದೆ. ಅದೇನೆಂದರೆ ನಿಮಗೆ ಅಕ್ಕಿ ಕೊಡಲು ಸಾಧ್ಯವಿಲ್ಲ. ನಿಮ್ಮ ರೇಶನ್ ಕಾರ್ಡ್ ಬಿಪಿಎಲ್ ನಿಂದ ಎಪಿಎಲ್ ಆಗಿ ಬದಲಾಗಿದೆ ಎಂದು ರೇಶನ್ ಅಂಗಡಿಯವರು ಹೇಳುತ್ತಾರೆ. ಸರಕಾರದ ಬದಲಾದ ನೀತಿಯಿಂದ ಸ್ವಂತ ಮನೆಗಾಗಿ ಬ್ಯಾಂಕಿನಿಂದ ಸಾಲ ಪಡೆಯಲು ಮುಂದಾಗುವವರು ಬಿಪಿಎಲ್ ಕಾರ್ಡ್ ನ ಆಸೆ ಬಿಡಬೇಕಾಗುತ್ತದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು, ಸಚಿವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜನ ಸಾಮಾನ್ಯರು ಒತ್ತಾಯಿಸುತ್ತಾರೆ.
* ಆದಾಯ ಪಾವತಿ ಮಾಡದವರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್ ಹಾಗೂ ತೆರಿಗೆ ಪಾವತಿ ಮಾಡಿದ ಪ್ರತಿಯನ್ನು ಅರ್ಜಿಯ ಮೂಲಕ ಸ್ಥಳೀಯ ಆಹಾರ ಇಲಾಖೆಗೆ ಸಲ್ಲಿಸಿದಲ್ಲಿ ಆ ಅರ್ಜಿಗಳನ್ನು ಆಯುಕ್ತರಿಗೆ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ರಮ್ಯ, ಸಿ.ಆರ್., ಉಪನಿರ್ದೇಶಕರು, ಆಹಾರ ಮತ್ತು ಸರಬರಾಜು ಇಲಾಖೆ, ದ.ಕ.
~~~~~~~~~~~~~~~~~
ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದು, ಸಣ್ಣ ಪುಟ್ಟ ಕೆಲಸ ಮಾಡುವಲ್ಲಿಯ ವೇತನ ದೃಢೀಕರಣ ಪತ್ರವನ್ನು ಸಲ್ಲಿಸಿದರೂ ಬ್ಯಾಂಕ್‌ನಿಂದ ಸಾಲ ಸಿಗದ ಕಾರಣ ಐಟಿ ದಾಖಲೆಯನ್ನು ಮಾಡಿಸುತ್ತಿದ್ದು, ಇದರಿಂದ ಸರ್ಕಾರದಿಂದ ಸಿಗುತ್ತಿರುವ ಅಕ್ಕಿಗೂ ಕುತ್ತು ಬಂದಿದೆ.
-ಚೈತ್ರಾ , ಸಳೀಯ ನಿವಾಸಿ, ಮಂಗಳೂರು.