ಇತ್ತೀಚಿನ ಸುದ್ದಿ
ಹುಲಿ ಹತ್ಯೆ ಪ್ರಕರಣದ ಆರೋಪಿಗಳ ಸೆರೆ; ವ್ಯಾಘ್ರ ಉಗುರು ವಶ: 7 ಮಂದಿಯ ಬಂಧನ
04/04/2022, 08:04
ಮಡಿಕೇರಿ(reporterkarnataka.com): ಹುಲಿಯ ಹಲ್ಲು ಮತ್ತು ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿರುವ ಸಿಐಡಿ ಪೊಲೀಸ್ ಅರಣ್ಯ ಘಟಕದ ಸಿಬ್ಬಂದಿಗಳು,ಇದರೊಂದಿಗೆ ಕಳೆದ ಒಂದು ವರ್ಷದ ಹಿಂದೆ ನಡೆದ ಹುಲಿ ಹತ್ಯೆ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಸ್ವಿಯಾಗಿದ್ದಾರೆ.
ಹುಲಿಯ ಹಲ್ಲು ಮತ್ತು ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ನವೀನ್ ಹಾಗೂ ಶೇಖರ್ ಎಂಬವರನ್ನು ಬಂಧಿಸಲಾಗಿದ್ದರೆ, ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ತಾಲೂಕು ಹೆಬ್ಬಾಲೆ ಮರೂರು ಗ್ರಾಮದ ಗಣೇಶ, ಯೋಗೇಶ್, ರಮೇಶ, ದೊರೇಶ,ನಟೇಶ ಅವರುಗಳನ್ನು ಬಂಧಿಸಲಾಗಿದೆ.
ಘಟನೆಯ ವಿವರ: ಕುಶಾಲನಗರ ತಾಲೂಕು ಹೆಬ್ಬಾಲೆಯ ಮರೂರು ಗ್ರಾಮದ ಗಣೇಶ, ಯೋಗೇಶ್ ಎಂಬವರುಗಳು ಒಂದು ವರ್ಷದ ಹಿಂದೆ ತಮ್ಮ ಜಮೀನಿನಲ್ಲಿ ಕಾಡು ಹಂದಿಯ ಉಪಟಳಕ್ಕೆ ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದರೆನ್ನಲಾಗಿದ್ದು, ಇದಕ್ಕೆ ಸಿಲುಕಿ ಹುಲಿಯೊಂದು ಮೃತಪಟ್ಟಿತ್ತು.
ಆ ಮೃತಪಟ್ಟ ಹುಲಿಯನ್ನು ಗಣೇಶ, ಯೋಗೇಶ ಹಾಗೂ ರಮೇಶ ಅವರುಗಳು ಬೆಳಗ್ಗೆ ಹೊಲದಲ್ಲಿ ಗುಂಡಿ ತೆಗೆದು ಮುಚ್ಚಿ ಹಾಕಿದ್ದರೆ, ಅದೇದಿನ ರಾತ್ರಿ ಆರೋಪಿಗಳಾದ ರಮೇಶ, ದೊರೇಶ ಹಾಗೂ ನಟೇಶ
ಎಂಬವರುಗಳು ಕೃತ್ಯ ಸ್ಥಳದ ಬಳಿ ಹೋಗಿ ಗುಂಡಿಯ ಮಣ್ಣು ತೆಗೆದು ಹುಲಿಯ ಕಾಲಿನ ಉಗುರುಗಳು, ಹಲ್ಲುಗಳು ಮತ್ತು ಚರ್ಮದ ಚಿಕ್ಕ ಚೂರನ್ನು ಸಂಗ್ರಹಿಸಿಟ್ಟಿದ್ದರೆಂದು ಹೇಳಲಾಗಿದೆ.
ಶನಿವಾರ ಆರೋಪಿಗಳಾದ ನವೀನ್ ಮತ್ತು ಶೇಖರ್ ಎಂಬವರುಗಳಹ ಹುಲಿಯ 4 ಉಗುರು ಮತ್ತು ಹಲ್ಲಿನ ಚೂರುಗಳನ್ನು ಮಾರಾಟ ಮಾಡಲು ಯತ್ನಿಸಿದಾಗ ದಾಳಿ ನಡೆಸಿದ ಸಿಐಡಿ ಅರಣ್ಯ ಘಟಕದ ಸಿಬ್ಬಂದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳೆದ ಒಂದು ವರ್ಷದ ಹಿಂದಿನ ಘಟನೆ ಬೆಳಕಿಗೆ ಬಂದಿದೆ.
ಸ್ಥಳ ಪರಿಶೀಲನೆ: ಆರೋಪಿಗಳ ಹೇಳಿಕೆ ಮೇರೆಗೆ ಮರೂರು ಗ್ರಾಮಕ್ಕೆ ತೆರಳಿ ಜೆ.ಸಿ.ಬಿ ಸಹಾಯದಿಂದ ಗುಂಡಿ ತೆಗೆದು ಪರಿಶೀಲಿಸಿದಾಗ ಹುಲಿಯನ್ನು ಹೂತು ಹಾಕಿದ ಜಾಗದಲ್ಲಿ ಹುಲಿಯ ಒಂದು ತಲೆ ಬುರುಡೆ ಅದರೊಂದಿಗೆ ಹುಲಿಯ ಎರಡು ಹಲ್ಲುಗಳು , ಹುಲಿಯ ತಲೆ ಬುರುಡೆಯ ಕೆಳ ದವಡೆಯ ಮೂಳೆ ಹಾಗೂ ಎರಡು ಹಲ್ಲುಗಳು, ಹುಲಿಯ ಬೆನ್ನು ಮೂಳೆ, ಎರಡು ಪಕ್ಕೆಲುಬು, ಕಾಲಿನ ಮೂಳೆಗಳು , ಹುಲಿಯ ವಿವಿಧ ಅಳತೆಯ 55 ಚಿಕ್ಕ ಮೂಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಆರೋಪಿಗಳಾದ ರಮೇಶ ಮತ್ತು ಸುರೇಶನ ಮನೆಯಿಂದ ಹುಲಿಯ ಉಗುರು ಮತ್ತು ಹಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣದಲ್ಲಿ ಒಟ್ಟು ಹುಲಿಯ 17 ಉಗುರುಗಳು , ಒಂದು ಕೋರೆ ಹಲ್ಲು, ಹಲ್ಲಿನ 6 ಚೂರುಗಳು , ಹುಲಿಯ ಚರ್ಮದ ಒಂದು ಚಿಕ್ಕ ಭಾಗ, ಒಂದು ತಲೆ ಬುರುಡೆ ಮತ್ತು ಹುಲಿಯ ಎರಡು ಹಲ್ಲುಗಳು, ಹುಲಿಯ ತಲೆ ಬುರುಡೆಯ ಕೆಳ ದವಡೆಯ ಮೂಳೆ ಹಾಗೂ ಎರಡು ಹಲ್ಲುಗಳು, ಹುಲಿಯ ಬೆನ್ನು ಮೂಳೆ, ಹುಲಿಯ ಎರಡು ಪಕ್ಕೆಲುಬು, ಹುಲಿಯ ಕಾಲಿನ ಮೂಳೆಗಳು ಹುಲಿಯ ವಿವಿಧ ಅಳತೆಯ 55 ಚಿಕ್ಕ ಮೂಳೆಗಳು ಹಾಗೂ ಕೆ ಎ 45 ಕ್ಯೂ 6373 ಸ್ಟಾರ್ ಸಿಟಿ ಮೊಟಾರ್ ಸೈಕಲ್’ನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ ಶರತ್‌ಚಂದ್ರ ಅವರ ನಿರ್ದೇಶನದ ಮೇರೆಗೆ ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಅಧೀಕ್ಷ ಚಂದ್ರಕಾಂತ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಸಿ.ಯು ಸವಿ , ಹೆಡ್ ಕಾನ್ಸ್‌ಟೇಬಲ್‌ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಎ.ಜಿ.ಯೋಗೇಶ್, ಮೋಹನ, ದೇವಯ್ಯ,ಯೋಗೇಶ್ ಮತ್ತು ಕಾನ್ಸ್‌ಟೇಬಲ್‌ಗಳಾದ ಸ್ವಾಮಿ, ಮಂಜುನಾಥ, ನಂದ ಪಾಲ್ಗೊಂಡಿದ್ದರು.