ಇತ್ತೀಚಿನ ಸುದ್ದಿ
ಬೊಮ್ಮಾಯಿ ಸಂಪುಟಕ್ಕೆ ಮೇಜರ್ ಸರ್ಜರಿ: 2-3 ದಿನಗಳಲ್ಲಿ ಸಿಎಂ ದೆಹಲಿಗೆ; ಯಾರು ಯಾರು ಆಗುತ್ತಾರೆ ಹೊಸ ಮಂತ್ರಿಗಳು?
03/04/2022, 22:09
ರಾಜೀವಿಸುತ ಬೆಂಗಳೂರು
info.reporterkarnataka@gmail.com
ಮುಂಬರುವ ವಿಧಾನಸಭೆ ಚುನಾವಣೆಗೆ ಕಮಲ ಪಾಳಯದಲ್ಲಿ ಈಗಿಂದೀಗಲೇ ಸಿದ್ಧತೆ ಆರಂಭವಾಗಿದೆ. ಇದರ ಭಾಗವಾಗಿ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಮುಂದಿನ 2-3 ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿ ಸಚಿವರ ಪಟ್ಟಿ ಅಂತಿಮಗೊಳಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಹಿಂದೆಯಷ್ಟೇ ರಾಜ್ಯಕ್ಕೆ ಭೇಟಿ ಕೊಟ್ಟು ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಆರೆಸ್ಸೆಸ್ ನಡೆಸಿದ ಆಂತರಿಕ ಸಮೀಕ್ಷೆ ಪ್ರಕಾರ ಅವಧಿಗೆ ಮುನ್ನ ಚುನಾವಣೆಗೆ ಹೋದರೆ ಬಿಜೆಪಿ ಗೆಲುವು ಕಷ್ಟ ಎಂಬ ವರದಿಯ ಹಿನ್ನೆಲೆಯಲ್ಲಿ ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳಿವೆ. ಅಲ್ಲಿಯ ವರೆಗೆ ಪಕ್ಷವನ್ನು ಪುನರ್ ಸಂಘಟಿಸಲು ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಬೊಮ್ಮಾಯಿ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದೆ. ಪಕ್ಷ ಸಂಘಟನೆಯಲ್ಲಿ ಕೈಜೋಡಿಸದ ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲು ಅಮಿತ್ ಶಾ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ಜನತಾ ದಳದ ಭದ್ರಕೋಟೆಗೆ ಲಗ್ಗೆ ಹಾಕಿದ ಬಿಜೆಪಿ ಶಾಸಕ ಪ್ರೀತಮ್ ಗೌಡ, ದಕ್ಷಿಣ ಕನ್ನಡದಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿವಾದಾತ್ಮಕ ಹೇಳಿಕೆಗಳಿಂದ ಪಕ್ಷಕ್ಕೆ ಆಗಾಗ ಕಿರಿಕಿರಿ ಉಂಟು ಮಾಡುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹೊಸಬರಿಗೆ ಅವಕಾಶ ಸಿಗಲಿದೆ.
ಅಮಿತ್ ಶಾ ಅಧ್ಯಕ್ಷತೆಯಲ್ಲಿ ಮೊನ್ನೆ ನಡೆದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಸಚಿವ ಸಂಪುಟ ಪುನಾರಚನೆ, ನಿಗಮ ಮಂಡಳಿ ನೇಮಕದ ಬಗ್ಗೆ ಯಾವುದೇ ಚರ್ಚೆಗಳು ನಡೆಯಲಿಲ್ಲ. ಈ ಬಗ್ಗೆ ದೆಹಲಿಯಲ್ಲಿ ಚರ್ಚಿಸೋಣ ಎಂದು ಅಮಿತ್ ಶಾ ಮೊದಲೇ ಹೇಳಿದ್ದರಿಂದ ಕೋರ್ ಕಮಿಟಿ ಸಭೆಯಲ್ಲಿ ಯಾವುದೇ ಚರ್ಚೆಗಳು ನಡೆಯಲಿಲ್ಲ.
ಚುನಾವಣಾ ಸಿದ್ಧತೆಗಳ ಚರ್ಚೆಗಷ್ಟೇ ಕೋರ್ ಕಮಿಟಿ ಸಭೆ ಸೀಮಿತವಾಗಿತ್ತು. ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಸಂಪುಟ ಪುನಾರಚಿಸಿ 5-7 ಹಿರಿಯ ಸಚಿವರನ್ನು ಕೈ ಬಿಟ್ಟು, ಹೊಸ ಮುಖಗಳಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆಗಳಿವೆ.