ಇತ್ತೀಚಿನ ಸುದ್ದಿ
ಬಣಕಲ್ ಸುತ್ತಮುತ್ತ ಧಾರಾಕಾರ ಮಳೆ: ಮನೆಯ ಮೇಲೆ ಬಾಗಿದ ವಿದ್ಯುತ್ ಕಂಬ
30/03/2022, 23:22
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಜಿಲ್ಲೆಯ ಬಣಕಲ್, ಕೊಟ್ಟಿಗೆಹಾರ ಸುತ್ತಮುತ್ತ ಬುಧವಾರ ಧಾರಾಕಾರ ಮಳೆಯಾಗಿದ್ದು ಬಣಕಲ್‍ನಲ್ಲಿ ಹೆದ್ದಾರಿ ಬದಿಯಲ್ಲಿ ಹಾಕಿದ ವಿದ್ಯುತ್ ಕಂಬ ಮನೆಯೊಂದರ ಮೇಲೆ ಬಾಗಿ ಬೀಳುವ ಸ್ಥಿತಿಯಲ್ಲಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನಲೆಯಲ್ಲಿ ಬಣಕಲ್ ಭಾಗದಲ್ಲಿ ರಸ್ತೆ ಬದಿಯಲ್ಲಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಹಾಕಲಾಗಿದ್ದು ಅವೈಜ್ಞಾನಿಕವಾಗಿ ವಿದ್ಯುತ್ ಕಂಬ ಅಳವಡಿಸಿರುವುದರಿಂದ ಕಂಬವೊಂದು ರಸ್ತೆ ಬದಿಯ ಪೌಲ್ಸನ್ ಎಂಬುವವರ ಮನೆಯ ಮೇಲೆ ಬಾಗಿ ನಿಂತು ಅಪಾಯ ಆಹ್ವಾನಿಸುವಂತಿದೆ.
ಈ ಭಾಗದಲ್ಲಿ ಮಳೆ ಹೆಚ್ಚು ಬೀಳುವುದರಿಂದ ಮಣ್ಣು ಸಡಿಲಗೊಂಡು ವಿದ್ಯುತ್ ಕಂಬಗಳು ಧರೆಗುರುಳುವ ಸಾಧ್ಯತೆಗಳು ಹೆಚ್ಚಿದ್ದು ವಿದ್ಯುತ್ ಕಂಬವನ್ನು ಅಳವಡಿಸುವಾಗ ಕಂಬದ ಕೆಳಭಾಗದಲ್ಲಿ ಸುತ್ತ ಕಾಂಕ್ರೇಟ್ ಹಾಕಿ ಕಂಬ ಅಳವಡಿಸಿದರೇ ಕಂಬ ಧರೆಗುರುಳುವುದು ತಪ್ಪುತ್ತದೆ. ಕೆಲ ಕಡೆಗಳಲ್ಲಿ ರಸ್ತೆ ಪಕ್ಕದ ದಿಬ್ಬದ ಮೇಲೆ ಕಂಬಗಳನ್ನು ಹಾಕಲಾಗಿದ್ದುಯ ತಗ್ಗಿನಲ್ಲಿರುವ ಮನೆ, ತೋಟಗಳ ಮೇಲೆ ಕಂಬ ಉರುಳುವ ಸಾಧ್ಯತೆ ಇರುವುದರಿಂದ ಹೆದ್ದಾರಿ ಬದಿಯಲ್ಲಿ ಹಾಕಿರುವ ಕಂಬಗಳನ್ನು ವೈಜ್ಞಾನಿಕವಾಗಿ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿ ಘಾಟ್, ಬಾಳೂರು ಸೇರಿದಂತೆ ಹಲವು ಕಡೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಬೇಸಿಗೆಯ ತಾಪ ಜೋರಾಗಿದ್ದು ಮಳೆಯಿಂದ ತಂಪಿನ ವಾತಾವರಣ ಕಂಡು ಬಂತು. ಕಾಫಿ,ಕಾಳು ಮೆಣಸು, ಮತ್ತಿತರ ವಾಣಿಜ್ಯ ಬೆಳೆಗಳಿಗೆ ಮಳೆಯಿಂದ ಅನುಕೂಲವಾಗಿದ್ದು ರೈತರು ಮಳೆಯಿಲ್ಲದೇ ಕಂಗಾಲಾಗಿ ಬೆಳೆಗೆ ನೀರಾಯಿಸಲು ಪರದಾಡಿ ಸ್ಪ್ರಿಂಕ್ಲರ್ ಮೊರೆ ಹೋಗಿದ್ದರು. ಬುಧವಾರ ಸುರಿದ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿತು.