ಇತ್ತೀಚಿನ ಸುದ್ದಿ
ಕಗ್ಗತ್ತಲಲ್ಲಿ ಕೊರೊನಾ ವಾರಿಯರ್ ಗಳ ಬದುಕು: ಸರಕಾರಕ್ಕೆ ಇನ್ನು ಬೇಕಿಲ್ಲವಂತೆ ಈ ಅಪದ್ಬಾಂದವರು!!
28/03/2022, 18:18
ಮೀರಾ ನಾಯಕ, ಆರೋಗ್ಯ ಮಿತ್ರ
info.reporterkarnataka@gmail.com
ಅಂದು ಇಡೀ ರಾಜ್ಯ ಕೊರೋನಾ ದಾಳಿಗೆ ಸಿಲುಕಿ ಸ್ಮಶಾನ ಮೌನದಲ್ಲಿತ್ತು. ಲಾಕ್‌ಡೌನ್ ಎಂಬ ಭೂತ ನಮ್ಮನ್ನೆಲ್ಲ ಮನೆಗಳಲ್ಲಿ ಲಾಕ್ ಮಾಡಿಬಿಟ್ಟಿತ್ತು. ಕೊರೋನಾ ಸೇವೆಗೆಂದು ಸ್ವಯಂ ಸೇವಕರನ್ನೂ ಸರ್ಕಾರ ಹುಡುಕುವಾಗ, ಅನೇಕರು ದೇಶ ಸೇವೆಗೆ ಸಜ್ಜಾಗಿ ನಿಂತಿದ್ದರು. ಆದರೆ ಎಲ್ಲರಲ್ಲೂ ಒಂದೇ ಆತಂಕ, ನಮ್ಮ ಮನೆಯವರ ಪರಿಸ್ಥಿತಿ ಏನು? ಸೋಂಕು ತಗುಲಿದರೆ ಗತಿಯೆನು? ಎಂಬ ಭೀತಿಯ ನಡುವೆ ಅನೇಕ ವೈದ್ಯರು, ವಿಜ್ಞಾನಿಗಳು, ಸಂಶೋಧಕರು, ಪ್ರಯೋಗಶಾಲಾ ತಂತ್ರಜ್ಞರು, ಗಣಕಯಂತ್ರ ನಿರ್ವಾಹಕರು, ಗ್ರೂಪ್ ಡಿ ನೌಕರರು ಗಡಿ ಕಾಯುವ ಸೈನಿಕರಂತೆ ಸಜ್ಜಾಗಿ ನಿಂತಿದ್ದರು.
ಇಡೀ ಮನುಕುಲ ಆತಂಕದಲ್ಲಿರುವಾಗ, ಈ ಕರಾಳ ಸ್ಥಿತಿಯಿಂದ ದೇಶವನ್ನು ಹೊರತರಲು ಯುದ್ದಕ್ಕೆ ನಿಂತ ಸೈನಿಕರಂತೆ ಕೆಲಸ ಮಾಡಲೇಬೇಕಾದ ಅನಿವಾರ್ಯತೆಯೂ ಅಂದು ಇತ್ತು. ಇದೇ, ದೇಶ ಸೇವೆ ಮಾಡಲು ಇರುವ ಏಕೈಕ ಅವಕಾಶವೆಂದು ಅನೇಕರು ಕೊರೋನಾ ಕರ್ತವ್ಯಕ್ಕೆ ಧುಮುಕಿದ್ದರು.
ಹೀಗೆ, ಜೀವದ ಹಂಗು ತೊರೆದು ರಾಜ್ಯದ ಜನರ ಆರೋಗ್ಯಕ್ಕಾಗಿ ಮುಂಚೂಣಿ ಕಾರ್ಯಕರ್ತರಾಗಿ ಶ್ರಮಿಸಿದ್ದು ಕೊರೋನಾ ಸೇನಾನಿಗಳು. ಆದರೆ ಅವರ ಬದುಕೀಗ ಬೀದಿಗೆ ಬಿದ್ದಿದೆ. ಸರ್ಕಾರ ಇವರೆಲ್ಲರನ್ನು ಕೆಲಸದಿಂದ ತೆಗೆದು ಹಾಕಿ, ನಿಮ್ಮ ಕರ್ತವ್ಯ ಇನ್ನು ಸಾಕು ಎಂದು ಕೈ ತೊಳೆದುಕೊಳ್ಳುತ್ತಿದೆ.
ದೇಶ ಕಾಯುವ ಸೈನಿಕರು, ನಮ್ಮ ರಕ್ಷಣೆಗೆ ನಿಂತಿದ್ದ ಪೊಲೀಸರು, ನೀತಿ ರೂಪಿಸುವ ಅಧಿಕಾರಿ ವರ್ಗ, ರಾಜ್ಯವನ್ನು ಆಳುತ್ತಿರುವ ರಾಜಕಾರಣಿಗಳು ಸೇರಿದಂತೆ ನಮ್ಮೆಲ್ಲರ ಕುಟುಂಬಗಳು, ಕೊರೋನಾ ದಾಳಿಯಲ್ಲಿ ಕೊಂಚವು ನಲುಗದಂತೆ ಕಾಪಾಡಿದ್ದು, ಈ ಕೋವಿಡ್ ವಾರಿಯರ್‌ಗಳೆಂಬುದನ್ನು ಸರ್ಕಾರ ಬಹುಬೇಗನೆ ಮರೆತಂತಿದೆ.
ಇದೇ ತಿಂಗಳ ಕೊನೆಯಲ್ಲಿ ಅವರೆಲ್ಲರನ್ನು ಕೆಲಸದಿಂದ ತೆಗೆದು ಹಾಕುವ ಧಾವಂತದಲ್ಲಿದೆ ಸರ್ಕಾರ ಇದೆ. ಮಾರ್ಚ್ ಕೊನೆಯ ದಿನಕ್ಕಾಗಿ ಕೊರೋನಾ ಸೇನಾನಿಗಳೆಲ್ಲ ಆತಂಕದಿಂದ ಎದುರು ನೋಡುವಂತಾಗಿದೆ. ಅಷ್ಟೇ ಅಲ್ಲ ಅವರೊಂದಿಗೆ ಯಾರೂ ನಿಲ್ಲುತ್ತಿಲ್ಲ ಎಂಬ ಅನಾಥ ಕೊರಗು ಇವರೆಲ್ಲರನ್ನೂ ಕಾಡುತ್ತಿದೆ.
ಯಾರಿಗಾಗಿ ನಾವೆಲ್ಲ ಕೆಲಸ ಮಾಡಿದೆವು ? ಯಾತಕ್ಕಾಗಿ ರಿಸ್‌ಕ್ ತೆಗೆದುಕೊಂಡೆವು ? ಯಾವ ಪುಣ್ಯ ಪಡೆಯಲು, ಮಡಿದವರ ಶವಗಳನ್ನು ಕಾಳಜಿಯಿಂದ ದನ್ ಮಾಡಿದೆವು ? ಎಂಬೆಲ್ಲ ಶೂನ್ಯ ಭಾವ ಇವರೆಲ್ಲರನ್ನು ಆವರಿಸಿಕೊಂಡಿದೆ.
ದೇಶದ ತುರ್ತು ಸಂದರ್ಭದಲ್ಲಿ ಸರ್ಕಾರದ ಸೇವೆಗಳನ್ನು ಜನರೆಡೆಗೆ ತಲುಪಿಸಲು ಹರ ಸಾಹಸ ಮಾಡಿದ್ದು ಕೊರೋನಾ ಸೇನಾನಿಗಳು, ಆದಾಗ್ಯೂ ಯಾವ ಮುಲಾಜಿಲ್ಲದೆ ಕಿತ್ತೆಸೆದು, ಅವರ ಜವಾಬ್ದಾರಿ ಹೊರಲು ಹಿಂದೇಟು ಹಾಕುತ್ತಿರುವ ಸರ್ಕಾರದ ನಡೆ ನಿಜಕ್ಕೂ ಅಮಾನವೀಯ.
ಕೊರೋನಾ ಸೇನಾನಿಗಳ ಕೆಲಸಕ್ಕೆ ಮನ್ನಣೆ ದೊರಕಿಸಿ ಕೊಡಲು ಸರ್ಕಾರದ ಮುಂದಿರುವ ಅವಕಾಶಗಳು ಏನು?
ಸರಕಾರಿ ಕೆಲಸಗಳಲ್ಲಿ ಮೀಸಲಾತಿ:
ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯ ವಾತಾವರಣ ಇದ್ದಾಗ ಹಗಲಿರುಳೆನ್ನದೆ ದೇಶ ಸೇವೆಗೆ ನಿಂತ ಕೊರೋನಾ ಸೇನಾನಿಗಳಿಗೆ (ವೈದ್ಯರು, ಸಂಶೋಧನಾ ವಿಜ್ಞಾನಿಗಳು, ಸಂಶೋಧನಾ ಸಹಾಯಕರು, ಪ್ರಯೋಗಶಾಲಾ ತಂತ್ರಜ್ಞರು, ಡಿ-ಗ್ರೂಪ್ ಕೆಲಸಗಾರರು, ಸೇರಿದಂತೆ ಆರೋಗ್ಯ ಸಿಬ್ಬಂದಿಗೆ) ಸರಕಾರಿ ಕೆಲಸಗಳಲ್ಲಿ ಮೀಸಲಾತಿ ಕೊಡುವ ಮೂಲಕ ಅವರ ಸೇವೆಗೆ ಸರಿಯಾದ ಮನ್ನಣೆ ನೀಡಬಹುದು. ಜಾತಿ, ಪಂಗಡಗಳಿಗೆ ನೀಡಲಾಗುವ ಸರ್ಕಾರಿ ಕೆಲಸಗಳಲ್ಲಿನ ಮೀಸಲಾತಿಯನ್ನು ಮನುಕುಲ ಕಾಪಾಡಿದ ಇವರಿಗೇಕೆ ನೀಡಬಾರದು ?
ಸಾರ್ವಜನಿಕ ಸೇವೆಗಳಲ್ಲಿ ವಿನಾಯಿತಿ:
ಸರ್ಕಾರಿ ಆಸ್ಪತ್ರೆಗಳಲ್ಲಿ, ಆರೋಗ್ಯ ಸೇವೆಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಸಾರ್ವಜನಿಕ ಸಾರಿಗೆಯಲ್ಲಿ, ವಿನಾಯಿತಿ ದೊರಕಿಸಿ ಕೊಡುವುದು.
ರಾಜಕಾರಣಿಗಳಿಗೆ, ಸೈನಿಕರ ಕುಟುಂಬಗಳಿಗೆ, ಪತ್ರಕರ್ತರಿಗೆ, ವೃದ್ಧರಿಗೆ, ಸಾರಿಗೆ ಸೇವೆಯಲ್ಲಿ ಪಾಸ್‌ಗಳನ್ನು ನೀಡುವ ಹಾಗೆಯೇ ಲಾಕ್‌ಡೌನಲ್ಲಿ ಊರಿಂದೂರಿಗೆ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಸೈಕಲ್ ತುಳಿದ, ಕಾಲ್ನಡಿಗೆಯಿಂದಲೇ ಬಂದು ಕೆಲಸ ನಿರ್ವಹಿಸಿದ ಹಾಗೂ ಕೋವಿಡ್ ಸೋಂಕು ತಗುಲಿ ತಮ್ಮ ಕುಟುಂಬದವರನ್ನೇ ಕಳೆದುಕೊಂಡ ಕೋವಿಡ್ ಸಿಬ್ಬಂದಿಗೆ ಏಕೆ ಸರ್ಕಾರಿ ಸಾರಿಗೆಯಲ್ಲಿ, ಸೇವೆಗಳಲ್ಲಿ ವಿನಾಯಿತಿ ನೀಡಬಾರದು ?
ಸೇವೆ ಖಾಯಂಗೊಳಿಸುವುದು:
ಕಳೆದೆರಡು ವರುಷಗಳಿಂದ ಕೊರೋನಾ ಸೇವೆ ಸಲ್ಲಿಸಿದ ಎಲ್ಲ ಕೊವೀಡ್ ಸಂಬಂಧಿ ಸೇವಕರನ್ನೆೆಲ್ಲ ಸರ್ಕಾರ ಖಾಯಂಗೊಳಿಸಬೇಕೆಂಬುದು ಒಕ್ಕೊರಲಿನ ಬೇಡಿಕೆಯಾಗಿದೆ.
ಎಲ್ಲರಿಗೂ ತುರ್ತು ಸೇವಾ ನಿಧಿ:
ಉಸಿರು ಗಟ್ಟುವ ಪಿಪಿಇ ಕಿಟ್‌ಗಳನ್ನು ಹಾಕಿಕೊಂಡು ದಿನವಿಡೀ ಕೆಲಸ ನಿರ್ವಹಿಸಿದ ಎಲ್ಲ ಸಿಬ್ಬಂದಿಗೆ ತುರ್ತು ಪರಿಹಾರವೇ ಸಿಕ್ಕಿಲ್ಲವೆಂಬ ಕೂಗಿದೆ. ಹಾಗಾಗಿ ತುರ್ತು ಸೇವಾ ನಿಧಿ ಸಿಗದೇ ಇರುವ ಎಲ್ಲ ವರ್ಗದ ಆರೋಗ್ಯ ಸೇವಕರಿಗೆ ಕೂಡಲೇ ಪರಿಹಾರ ಧನವನ್ನು ನೀಡಲು ಸರ್ಕಾರ ಚಿಂತಿಸಬೇಕಿದೆ.
ಜೀವಮಾನದಲ್ಲಿ, ಕಂಡರಿಯದ ಕರಾಳ ದಿನಗಳನ್ನು ಎದುರಿಸಿದ ಮನುಕುಲದ ರಕ್ಷಣೆಗೆ, ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ರಾಜ್ಯದ ಬೆರಳೆಣಿಕೆಯ ಸೇನಾನಿಗಳಿಗೆಲ್ಲ, ಬದುಕು ಕಟ್ಟಿಕೊಡಲು ಸರ್ಕಾರವೇ ಮುಂದಡಿ ಇಡುವ ಮೂಲಕ ಮಾನವೀಯ ಕಾರ್ಯಕ್ಕೆ ಮುಂದಾಗಬೇಕಿದೆ. ಅಷ್ಟೇ ಅಲ್ಲ, ಬೇಕಾದಾಗ ದುಡಿಸಿಕೊಂಡು ಬೇಡಾವಾದಾಗ ಕೈಬಿಡುವ ಪ್ರವೃತ್ತಿಯನ್ನು ಇನ್ನಾದರೂ ಸರಕಾರಗಳು ನಿಲ್ಲಿಸಬೇಕು. ಕೊರೋನಾ ಸೇನಾನಿಗಳ ಸೇವೆ ಎಲ್ಲ ಸೇವೆಗಳಂತಲ್ಲ ಎಂಬ ಔಚಿತ್ಯಪೂರ್ಣ ಹಾಗೂ ಔದಾರ್ಯಯುತ ನಿರ್ಧಾರವನ್ನು ಕೈಗೊಳ್ಳಬೇಕಿದೆ.