ಇತ್ತೀಚಿನ ಸುದ್ದಿ
ಬಟ್ಟೆ ಬ್ಯಾಗ್ ಖರೀದಿ ಹಗರಣ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೌರಾಡಳಿತ ಆದೇಶ
24/03/2022, 09:12
ಮೈಸೂರು(reporterkarnataka.com): ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಗಳ ಸರಬರಾಜು ಸಂಬಂಧ ನಡೆದಿರುವ ಹಗರಣದ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಪೌರಾಡಳಿತ ನಿರ್ದೇಶನಾಲಯ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಆದೇಶ ಹೊರಡಿಸಿದ್ದು, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಅವರು ಬ್ಯಾಗ್ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದರಲ್ಲದೇ ತನಿಖೆಗೆ ಒತ್ತಾಯಿಸಿದ್ದರು.
ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಮೂಲಕ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಗಳನ್ನು ಖರೀದಿಸುವ ಸಂಬಂಧ ಜಿಲ್ಲಾಧಿಕಾರಿಗಳು ಮೈಸೂರು ಇವರು 09.04.2021 ರಂದು ಕಾರ್ಯಾದೇಶ ಹೊರಡಿಸಿದ್ದರು.ಈ ಕಾರ್ಯಾದೇಶದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ ಇವರಿಂದ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಗಳನ್ನು ಮೈಸೂರು ಜಿಲ್ಲಾ ವ್ಯಾಪ್ತಿಗೆ ಒಳಪಡುವ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಸರಬರಾಜು ಮಾಡುವ ಸಂಬಂಧ 4ಹೆಚ್ ವಿನಾಯಿತಿ ಅಡಿಯಲ್ಲಿ ದರಪಟ್ಟಿಗಳನ್ನು ಪಡೆದಿದ್ದು ಅದರಂತೆ 5ಕೆ.ಜಿ, 10ಕೆ.ಜಿ ಸಾಮಥ್ರ್ಯದ ಬಟ್ಟೆ ಬ್ಯಾಗ್ ಗಳಿಗೆ ರೂ.52(ಜಿಎಸ್ ಟಿ ಸೇರಿದಂತೆ) ನಿಗದಿಪಡಿಸಿ ಒಟ್ಟು 1471458 ಬಟ್ಟೆ ಬ್ಯಾಗ್ ಗಳನ್ನು ಖರೀದಿಸಲು ಅನುಮೋದನೆ ನೀಡಿರುತ್ತಾರೆ. ಈ ಬಟ್ಟೆ ಬ್ಯಾಗ್ ಗಳ ವಿತರಣೆ ಸಂಬಂಧ ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಸೇರಿರುವ ಎಲ್ಲಾ ಗ್ರಾಮಪಂಚಾಯತ್ ಗಳ ಹಾಗೂ ಪುರಸಭೆಗಳ ಸಾಮಾನ್ಯ ಸಭೆಯಲ್ಲಿ ಯಾವುದೇ ವಿಧವಾದ ಅನುಮೋದನೆಯನ್ನು ಪಡೆದಿಲ್ಲ.ಈ ಬಟ್ಟೆ ಬ್ಯಾಗ್ ಗಳ ದರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದವರು ಸರಬರಾಜು ಮಾಡಿರುವ ಬಟ್ಟೆ ಬ್ಯಾಗ್ ಗಳಷ್ಟೇ ಗುಣಮಟ್ಟ ಮತ್ತು ಗಾತ್ರ ಹೊಂದಿರುವ ಬ್ಯಾಗ್ ಗಳು ಮುಕ್ತ ಮಾರುಕಟ್ಟೆಯಲ್ಲಿ ಜಿಎಸ್ ಟಿ ಸೇರಿದಂತೆ 10ರಿಂದ 13ರೂ.ಗಳಿಗೆ ಮಾರಾಟವಾಗುತ್ತಿದೆ. ಮುಕ್ತ ಮಾರುಕಟ್ಟೆಯ ಚಿಲ್ಲರೆ ಮಾರಾಟದಲ್ಲಿ 10ರಿಂದ 13 ರೂ.ಗಳಿಗೆ ಸಿಗುವ ಬ್ಯಾಗ್ ಗಳಿಗೆ 52 ರೂ. ನಿಗದಿಪಡಿಸಿ ಅನುಮೋದನೆ ನೀಡಿ ಸಾರ್ವಜನಿಕ ಹಣ ವ್ಯಯ ಮಾಡಿರುತ್ತಾರೆ. ಬ್ಯಾಗ್ ಗಳನ್ನು ನಿಗಮದ ವತಿಯಿಂದಲೇ ತಯಾರಿಸಿ ಸರಬರಾಜು ಮಾಡುವ ಬದಲು ಬೇರೊಬ್ಬ ಮಧ್ಯವರ್ತಿಯಿಂದ ಬ್ಯಾಗ್ ಗಳನ್ನು ಖರೀದಿಸಿ ಸರಬರಾಜು ಮಾಡಿರುತ್ತಾರೆ. ಈ ಬಟ್ಟೆ ಬ್ಯಾಗ್ ಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಪ್ರಕ್ರಿಯೆಯನ್ನು ತನಿಖೆ ನಡೆಸಿ ಈ ಅವಧಿಯಲ್ಲಿ ಕಾರ್ಯಾದೇಶ ನೀಡಿರುವ ಜಿಲ್ಲಾಧಿಕಾರಿಗಳ ಹಾಗೂ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾ.ರಾ.ಮಹೇಶ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು.ಈ ದೂರಿನಲ್ಲಿರುವ ಅಂಶಗಳ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಂಡು ವರದಿ ನೀಡಲು ನಿರ್ದೇಶಿಸಿದ್ದಾರೆ. ದೂರಿನಲ್ಲಿರುವ ಪ್ರತಿಯೊಂದು ಅಂಶಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ತನಿಖೆ ಕೈಗೊಂಡು ಅಭಿಪ್ರಾಯ ಸಹಿತ ವರದಿಯನ್ನು ಸಲ್ಲಿಸುವಂತೆ ಕೋರಿದ್ದಾರೆ.