ಇತ್ತೀಚಿನ ಸುದ್ದಿ
ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್ ನುಡಿ
13/03/2022, 23:27
ಮಂಡ್ಯ(reporterkarnataka.com);
ಚಾಮುಂಡೇಶ್ವರಿ ಕ್ಷೇತ್ರದಿಂದ ತಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲ್ಲ. ನನಗೆ ನಾಲ್ಕೈದು ಕ್ಷೇತ್ರಗಳಿಂದ ಸ್ಪರ್ಧಿಸಲು ಆಹ್ವಾನ ಬಂದಿದೆ. ನಾನು ಇನ್ನೂ ಎಲ್ಲಿ ನಿಲ್ಲಬೇಕೆಂದು ನಿರ್ಧಾರ ಮಾಡಿಲ್ಲ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನನ್ನ ಪ್ರಕಾರ ಅವಧಿಗೂ ಮುನ್ನ ಚುನಾವಣೆ ಬರಲ್ಲ. ಈ ಬಗ್ಗೆ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಸಿಟಿ ರವಿ ಸೇರಿದಂತೆ ಹಲವಾರು ನಾಯಕರು ಹೇಳಿದ್ದಾರೆ. ಅವಧಿಗೂ ಮುನ್ನ ಚುನಾವಣೆ ಯಾಕೆ ಮಾಡುತ್ತಾರೆ. ಚುನಾವಣೆ ಇರುವುದು ಏಪ್ರಿಲ್‍ನಲ್ಲಿ. ಇದೆಲ್ಲ ಊಹಾಪೋಹಗಳಷ್ಟೇ. ಒಂದು ವೇಳೆ ಅವಧಿಗೂ ಮುನ್ನ ಚುನಾವಣೆ ಬಂದರೆ ನಾವು ಸಿದ್ಧರಾಗಿದ್ದೇವೆ. ಜನರು ನಮ್ಮ ಪರವಾಗಿದ್ದಾರೆ ಎಂದು ಹೇಳಿದ್ದಾರೆ.
ಪಂಚರಾಜ್ಯ ಚುನಾವಣೆ ನಂತರ ಕಾಂಗ್ರೆಸ್ ಜೆಡಿಎಸ್ ಶಾಸಕರು ಬಿಜೆಪಿಗೆ ಬರುತ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಕ್ಷದಿಂದ ಕಾಂಗ್ರೆಸ್‍ಗೆ ಎಷ್ಟು ಜನ ಬರುತ್ತಾರೆ ಕಾದು ನೋಡಿ. ಕಾಂಗ್ರೆಸ್ ತೊರೆದು ಯಾರು ಬಿಜೆಪಿ ಸೇರಲ್ಲ. ಬಿಜೆಪಿಯ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಅಂತಾರಲ್ಲ ಆ ರೀತಿ ಸಿ.ಎಂ.ಇಬ್ರಾಹಿಂ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಇಬ್ರಾಹಿಂಗೆ ಎಲ್ಲವನ್ನು ಕೊಟ್ಟಿದೆ. ಆದರೆ ಮನುಷ್ಯನಿಗೆ ಆಸೆ ಇರಬೇಕು, ದುರಾಸೆ ಇರಬಾರದು. ಹಾಲಿ ಶಾಸಕ ಸಂಗಮೇಶ್‍ಗೆ ಟಿಕೆಟ್ ತಪ್ಪಿಸಿ ಭದ್ರಾವತಿಯಲ್ಲಿ ಇಬ್ರಾಹಿಂ ಟಿಕೆಟ್ ಕೊಟ್ಟಿದ್ದೇವು. ಅಲ್ಲಿಯು ಆತ ಸೋತ. ಅದಾದ ಮೇಲೆ ಎಂಎಲ್‍ಸಿಯನ್ನು ರಿನಿವಲ್ ಮಾಡಿದ್ದೇವು. ಆದರೂ ಕೂಡ ಪಕ್ಷ ಬಿಟ್ಟೋಗಿದ್ದಾನೆ. ನಾನು ಪಕ್ಷ ಬಿಡಬೇಡ ಅಂತ ಫೋನ್ ಮಾಡಿ ಹೇಳಿದೆ. ಆದರೆ ಲೀಡರ್ ಆಫ್ ಅಪೋಸಿಷನ್ ಸಿಗಲಿಲ್ಲ ಅಂತ ಪಕ್ಷ ಬಿಟ್ಟಿದ್ದಾರೆ. ರಾಜಕಾರಣದಲ್ಲಿ ಆಸೆಗಳಿರಬೇಕು ಆದರೆ ದುರಾಸೆ ಇರಬಾರದು ಎಂದು ಟಾಂಗ್ ನೀಡಿದ್ದಾರೆ.
ಜಿ.ಟಿ.ದೇವೆಗೌಡರು ನನ್ನ ಜೊತೆ ಮಾತನಾಡಿದ್ದಾರೆ. ಅವರು ಮತ್ತು ಅವರ ಮಗನಿಗೆ ಟಿಕೆಟ್ ಕೇಳಿದ್ದಾರೆ. ನಾನು ಇನ್ನು ಈ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡಿಲ್ಲ ಎಂದು ಹೇಳಿದ್ದಾರೆ.