7:29 PM Monday13 - October 2025
ಬ್ರೇಕಿಂಗ್ ನ್ಯೂಸ್
ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;…

ಇತ್ತೀಚಿನ ಸುದ್ದಿ

ಕೊಡಗಿನಲ್ಲಿ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದೇಶಿಗರು ಸೇರಿಕೊಂಡಿದ್ದಾರೆಯೇ? ಗೃಹ ಸಚಿವರು ಈ ಕುರಿತು ಹೇಳಿದ್ದೇನು?

11/03/2022, 23:49

ಬೆಂಗಳೂರು(reporterkarnataka.com) ಕೊಡಗು ಜಿಲ್ಲೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಮೂಲದ ಕಾರ್ಮಿಕರೊಂದಿಗೆ ಬಾಂಗ್ಲಾದೇಶದ ಕಾರ್ಮಿಕರು ಸಹ ಬಂದಿರುವ ಬಗ್ಗೆ ಮಾಹಿತಿಯಿದ್ದು, ಇವರನ್ನು ಪತ್ತೆ ಹಚ್ಚುವ ಕುರಿತಾಗಿ ಕ್ರಮವಹಿಸಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಕೊಡಗಿನಲ್ಲಿ ಒಂಟಿ ಮನೆಗಳಲ್ಲಿರುವ ಮಹಿಳೆಯರ ಮೇಲೆ ಹಲ್ಲೆ ಮಾಡಿ ದರೋಡೆ ನಡೆಸುವ ಪ್ರಕರಣಗಳು ಹೆಚ್ಚುತ್ತಿದ್ದು, ಕೆಲವು ಬಾಂಗ್ಲಾ ಮೂಲದ ಕಾರ್ಮಿಕರು ಈ ಕೃತ್ಯದಲ್ಲಿ ತೊಡಗಿರುವ ಬಗ್ಗೆ ದೂರುಗಳಿವೆ. ಸರಕಾರಕ್ಕೆ ಈ ಕುರಿತು ಮಾಹಿತಿ ಇದೆಯೇ? ಇದ್ದಲ್ಲಿ ಈ ಬಗ್ಗೆ ಕೈಗೊಳ್ಳಲಾಗಿರುವ ಕ್ರಮಗಳೇನು ಎಂಬ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಸಚಿವರು ಸದನದಲ್ಲಿ ಮಾಹಿತಿ ನೀಡಿದ್ದಾರೆ.

ದೊಡ್ಡ ಜಾಲವಿದೆ:

ಬಾಂಗ್ಲಾ ದೇಶಿಗರು ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಮೂಲಕ ಬರುವಾಗ ಇಲ್ಲಿನ ಆಧಾರ್ ಕಾರ್ಡ್ ಮತ್ತಿತ್ತರ ದಾಖಲೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ದಾಖಲೆಗಳನ್ನು ಮಾಡಿಕೊಡುವ ಒಂದು ದೊಡ್ಡ ಜಾಲವೇ ಆ ರಾಜ್ಯಗಳಲ್ಲಿ ಇದ್ದು, ಅದನ್ನು ಪತ್ತೆ ಹಚ್ಚಲು ಸೂಚಿಸಲಾಗಿದೆ. ಮಾತ್ರವಲ್ಲದೆ, ಹೊರ ರಾಜ್ಯದ ಕಾರ್ಮಿಕರ ಬಗ್ಗೆ ನಿಗಾ ವಹಿಸಲು ನಿರ್ದೆಶನ ನೀಡಲಾಗಿದೆ. ದಾಖಲಾತಿಗಳನ್ನು ಪರಿಶೀಲಿಸುವ ಸಂದರ್ಭ ಆಯಾ ರಾಜ್ಯದ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಅದನ್ನು ಪರಿಶೀಲನೆಗೆ ಒಳಪಡಿಸುವಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ಕೊಡಗು ಜಿಲ್ಲೆಯೊಂದರಲ್ಲಿಯೇ 8600 ಅಧಿಕ ಹೊರ ರಾಜ್ಯದ ಕಾರ್ಮಿಕರಿದ್ದಾರೆ. ಈ ಪೈಕಿ ಕೆಲವರು ಕೆಲಸ ಮುಗಿಸಿ ತಮ್ಮ ಊರಿಗೆ ಮರಳಿದ್ದಾರೆ. ಈ ಪೈಕಿ ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯದ ಕಾರ್ಮಿಕರೆಂದು ಹೇಳಿಕೊಂಡು ಬಾಂಗ್ಲಾ ದೇಶದಿಂದ ಬಂದವರೂ ಇರುವ ಬಗ್ಗೆ ಶಂಕೆ ಇದೆ. ಆ ಕುರಿತು ಪರಿಶೀಲನೆ ನಡೆಸಲು ಪೊಲೀಸ್ ಉನ್ನತಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಸಂದರ್ಭ ಅವರ ಗುರುತಿನ ಚೀಟಿ ಹಾಗೂ ದಾಖಲಾತಿಗಳನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ನೀಡುವಂತೆ ಸೂಚಿಸಲಾಗಿದೆ. ಗ್ರಾಮಗಳಲ್ಲಿ ಗಸ್ತು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಒಂಟಿ ಮನೆಗಳಲ್ಲಿ ಹಲ್ಲೆ, ದರೋಡೆ ಕೃತ್ಯ ನಡೆದಿರುವುದು, ಸರಕಾರದ ಗಮನಕ್ಕೆ ಬಂದಿದ್ದು, ಪೊಲೀಸ್ ಇಲಾಖೆ ಅಂತಹ ಕೃತ್ಯಗಳಲ್ಲಿ ಪಾಲ್ಗೊಂಡ ಆರೋಪಿಗಳನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದೆ ಎಂದು ಹೇಳಿದರು.

ಅಪರಾಧ ಕೃತ್ಯಗಳು ನಡೆಯುವಾಗ ತುರ್ತು ದೂರವಾಣಿ ಸಂಖ್ಯೆ 112ಗೆ ಕರೆ ಮಾಡುವ ಮೂಲಕ ಅಗತ್ಯ ಸಂದರ್ಭದಲ್ಲಿ ಸಹಾಯ ಪಡೆಯಬಹುದು. ನಗರ ಪ್ರದೇಶದಲ್ಲಿ 20 ನಿಮಿಷ ಹಾಗೂ ಗ್ರಾಮೀಣ ಪ್ರದೇಶಕ್ಕೆ 40 ನಿಮಿಷಗಳ ಒಳಗೆ 112 ಪೊಲೀಸ್ ತಂಡ ತಲುಪುತ್ತದೆ. ಕೊಡಗು ಸೇರಿದಂತೆ ಮಲೆನಾಡು ಭಾಗಗಳಲ್ಲಿ ಗೃಹ ಇಲಾಖೆ ವತಿಯಿಂದ ಎಲ್ಲಾ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿವರಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು