ಇತ್ತೀಚಿನ ಸುದ್ದಿ
ನಾಟೆಕಲ್‌ನಲ್ಲಿ ಶೀಘ್ರದಲ್ಲೇ ನೂತನ ಉಳ್ಳಾಲ ತಾಲೂಕು ಕಚೇರಿ ಕಾರ್ಯಾರಂಭ: ಶಾಸಕ ಯು.ಟಿ ಖಾದರ್ ಭರವಸೆ
29/01/2022, 22:58
ಮಂಗಳೂರು(reporterkarnataka.com): ನೂತನ ಉಳ್ಳಾಲ ತಾಲೂಕು ಕಚೇರಿಯನ್ನು ತಾತ್ಕಾಲಿಕವಾಗಿ ನಾಟೆಕಲ್‌ನ ಹಳೆಯ ಆಸ್ಪತ್ರೆಯ ಕಟ್ಟಡದಲ್ಲಿ ಅತೀ ಶೀಘ್ರವಾಗಿ ಪ್ರಾರಂಭಿಸಲಾಗುವುದು ಎಂದು ಉಳ್ಳಾಲ ಶಾಸಕ ಯು.ಟಿ. ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟೆಕಲ್‌ನ ಹಳೆಯ ಆಸ್ಪತ್ರೆಯ ಕಟ್ಟಡದಲ್ಲಿ ಸೋಮವಾರದಿಂದ ಕಚೇರಿ ಕಾರ್ಯದ ವಯರಿಂಗ್, ಸಾಫ್ಟ್‌ವೇರ್ ಅಳವಡಿಕೆ ಹೀಗೆ ತಾಂತ್ರಿಕ ಕೆಲಸ ಆರಂಭವಾಗುತ್ತದೆ. ಇದಾದ ಒಂದು ತಿಂಗಳೊಳಗೆ ಅಧಿಕೃತವಾಗಿ ಎಲ್ಲಾ ಸವಲತ್ತುಗಳೊಂದಿಗೆ ಉದ್ಘಾಟನೆ ನಡೆಸಲಿದ್ದೇವೆ.
ನೂತನ ಉಳ್ಳಾಲ ತಾಲೂಕು ಆಡಂ ಕುದ್ರುವಿನಿಂದ ಆರಂಭವಾಗಿ ತಲಪಾಡಿ ಗಡಿ ಹಾಗೂ ಸಜಿಪ ಪಡು ಸಾಲೆತ್ತೂರುವರೆಗೆ ಉಳ್ಳಾಲ ತಾಲೂಕು ಇರಲಿದೆ. ಇದರ ಜೊತೆಗೆ ಮಂಗಳೂರು ವಿಧಾನಸಭೆ ಕ್ಷೇತ್ರದ ಕೋಡ್ಮಣ್, ಮೇರಮಜಲ್, ಪುದು ಹಾಗೂ ತುಂಬೆ ಬಂಟ್ವಾಳ ತಾಲ್ಲೂಕಿನಲ್ಲೇ ಮುಂದುವರೆಯಲಿದೆ.
ಈಗಾಗಲೇ ಸಜಿಪದಿಂದ ತುಂಬೆಗೆ ಸಂಪರ್ಕಿಸುವ ಸೇತುವೆಯ ಕಾರ್ಯ ಕೊನೆಯ ಹಂತದಲ್ಲಿದೆ. ಅದರ ಕೆಲಸ ಮುಗಿದ ತಕ್ಷಣ ಉಳ್ಳಾಲ ಗ್ರಾಮಕ್ಕೆ ಈ ಗ್ರಾಮಗಳನ್ನು ಸೇರಿಸುವ ಬಗ್ಗೆ ಪರಿಶೀಲಿಸಲಾಗುವುದು.
ಕಳೆದ ಬಾರಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‌ನಲ್ಲಿ ಉಳ್ಳಾಲ ನೂತನ ತಾಲೂಕು ಆಗಿ ಘೋಷಣೆಯಾಗಿತ್ತು ಎಂದರು.