ಇತ್ತೀಚಿನ ಸುದ್ದಿ
ಬೆಳ್ತಂಗಡಿ ಶಾಸಕರಿಂದ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯ ವರ್ಗಾವಣೆ?: ಮರಗಳ್ಳರಿಗೆ ಹರೀಶ್ ಪೂಂಜ ಸಾಥ್ ನೀಡುತ್ತಿದ್ದಾರೆಯೇ?
29/01/2022, 18:19
ಅನುಷ್ ಪಂಡಿತ್ ಮಂಗಳೂರು
Info.reporterkarnataka@gamil.com
ವೈಯಕ್ತಿಕ ಕಾರಣಕ್ಕೆ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿಯನ್ನು ದೂರದ ಬೀದರ್ ಗೆ ವರ್ಗಾವಣೆ ಮಾಡಿದ ಆರೋಪ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೇಲೆ ಕೇಳಿ ಬರುತ್ತಿದೆ. ಇದಕ್ಕೆ ಪುರಾವೆ ಎನ್ನುವಂತೆ ಶಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದದ್ದು ಎನ್ನಲಾದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮ ಮರ ಸಾಗಾಟಗಾರರ ವಾಹನ ಹಾಗೂ ಮರ ವಶಪಡಿಸಿಕೊಂಡ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಸಂಚಾರಿ ದಳದ ಪ್ರಭಾರ ಅಧಿಕಾರಿ ಸಂಧ್ಯಾ ಸಚಿನ್ ಅವರನ್ನು ದೂರದ ಬೀದರ್ ಗೆ ವರ್ಗಾವಣೆ ಮಾಡಲಾಗಿದೆ. ಸಂಧ್ಯಾ ಅವರನ್ನು ಬೀದರ್‌ಗೆ ವರ್ಗಾವಣೆ ಮಾಡುವಂತೆ ಕೋರಿ ಶಾಸಕ ಹರೀಶ್ ಪೂಂಜ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ನಡುವೆ ನ್ಯಾಯ ಒದಗಿಸಿಕೊಡಿ ಎಂದು ಅರಣ್ಯ ಅಧಿಕಾರಿ ಸಂಧ್ಯಾ ಅವರು ಬೆಳ್ತಂಗಡಿಯ ನಾರಾಯಣ ಗುರು ಸ್ವಾಮಿ ಸೇವಾ ಸಂಘಕ್ಕೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಶಾಸಕರು ಕೋಪಗೊಂಡು ನನ್ನಲ್ಲಿ ವೈಯಕ್ತಿಕ ದ್ವೇಷ ಹಗೆತನ ಸಾಧಿಸಿ ಬೀದರ್ ಗೆ ವರ್ಗಾವಣೆ ಮಾಡಿದ್ದಾರೆ. ತನಗೆ ನ್ಯಾಯ ಒದಗಿಸಿಕೊಡುವಂತೆ ಕೇಳಿಕೊಂಡಿದ್ದಾರೆ.
ಸದ್ಯ ಬೀದರ್‌ನ ನೌಬಾದ್ ಅರಣ್ಯ ತರಬೇತಿ ಕೇಂದ್ರಕ್ಕೆ ಸಂಧ್ಯಾ ಸಚಿನ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಎರಡು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ ಯಾವುದೇ ಅನುಮತಿ ಇಲ್ಲದೆ ಕೋಟ್ಯಂತರ ರೂಪಾಯಿ ಮೌಲ್ಯದ ಮರಗಳನ್ನು ಕಡಿದುರುಳಿಸಿದ್ದರು. ಈ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದರು. ಈ ವೇಳೆ ಅರಣ್ಯಾಧಿಕಾರಿ ಸಂಧ್ಯಾ ತನ್ನ ತಂಡದೊಂದಿಗೆ ದಾಳಿ ನಡೆಸಿದಾಗ ಹೆಬ್ಬಲಸು, ಹಲಸು, ಬೋಗಿ, ಕಿರಲ್ ಬೋಗಿ, ಸಾಗುವಾನಿ ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು ಹಾಕಿರುವುದು ಪತ್ತೆಯಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿದ ಅರಣ್ಯಾಧಿಕಾರಿ ಸಂಧ್ಯಾ, ಸ್ಥಳದಲ್ಲಿದ್ದ ಲಾರಿ ಸಮೇತ ಮರಗಳನ್ನು ಮುಟ್ಟುಗೋಲು ಹಾಕಿಕೊಂಡರು. ಈ ಪ್ರಕರಣದಲ್ಲಿ ಶಾಸಕರ ಬೆಂಬಲಿಗರು ಇದ್ದರು ಎನ್ನಲಾಗಿದೆ.
ಪ್ರಕರಣದ ಬಗ್ಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ತನಿಖೆ ನಡೆಸಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ನಾಲ್ಕು ಸಿಬ್ಬಂದಿಯನ್ನು ಅಮಾನತು ಮಾಡಿದ್ದರು. ಇದರಿಂದಾಗಿ ಮಹಿಳಾ ಅಧಿಕಾರಿ ಮೇಲೆ ದ್ವೇಷದಿಂದ ದೂರದ ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.