ಇತ್ತೀಚಿನ ಸುದ್ದಿ
ಪ್ರಧಾನಿ ಹೇಳಿದ್ರೂ ಸಚಿವ ಉಮೇಶ್ ಕತ್ತಿ ಮಾಸ್ಕ್ ಧರಿಸೋಲ್ವಂತೆ!: ಹೆಂಗಿದೆ ಅರಣ್ಯ ಸಚಿವರ ಉಡಾಫೆ ಮಾತು?
18/01/2022, 17:59
ರಾಹುಲ್ ಅಥಣಿ ಬೆಳಗಾವಿinfo.reporterkarnataka@gmail.com
ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ರೂ ನಮ್ಮ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಮಾಸ್ಕ್ ಧರಿಸೋಲ್ಲಂತೆ. ಮಾಸ್ಕ್ ಧರಿಸೋದು, ಬಿಡೋಡು ಅವರ ವೈಯಕ್ತಿಕ ವಿಚಾರವಂತೆ.
ಅಥಣಿಯಲ್ಲಿ ಮಂಗಳವಾರ ಮಾಧ್ಯಮದ ಜತೆ ಮಾತನಾಡಿದ ಉಮೇಶ್ ಕತ್ತಿ ಅವರು ಈ ವಿಷಯ ಸ್ಪಷ್ಟಪಡಿಸಿದರು.
ಪ್ರಧಾನಿ ನಿರ್ದೇಶನದಂತೆ ನಾನು ಮಾಸ್ಕ್ ಧರಿಸೋದಿಲ್ಲ. ಅದು ನನ್ನ ವೈಯಕ್ತಿಕ ವಿಷಯ. ಧರಿಸೋದು, ಬಿಡೋದು ನನಗೆ ಬಿಟ್ಟಿದ್ದು ಎಂದು ಕತ್ತಿ ಖಾರವಾಗಿಯೇ ಪ್ರತಿಕ್ರಿಯಿಸಿದರು.
ಕೊರೊನಾ ಮೂರನೇ ಅಲೆಯ ಭೀತಿ ಇದೆ ಎಂದು ರಾಜ್ಯ ಸರಕಾರವೇ ಹೇಳುತ್ತಿದ್ದು, ಈಗಾಗಲೇ ವೀಕೆಂಡ್ ಕರ್ಫ್ಯೂ ಕೂಡ ಜಾರಿಗೊಳಿಸಿದೆ. ಮಾಸ್ಕ್ ಹಾಕದೆ ಸಾರ್ವಜನಿಕ ಸ್ಥಳದಲ್ಲಿ ತಿರುಗಾಡುವವರಿಗೆ ದಂಡ ಕೂಡ ವಿಧಿಸಲಾಗುತ್ತಿದೆ. ವಿಷಯ ಹೀಗಿರುವಾಗ ರಾಜ್ಯ ಸರಕಾರದಲ್ಲೇ ಸಚಿವರಾಗಿರುವ ಉಮೇಶ್ ಕತ್ತಿ ಅವರು ಮಾಸ್ಕ್ ಧರಿಸೊಲ್ಲ ಎಂದು ಹೇಳುತ್ತಿದ್ದಾರೆ. ಅದು ನನ್ನ ವೈಯಕ್ತಿಕ ವಿಷಯ ಎಂದು ಎಗರಾಡುತ್ತಿದ್ದಾರೆ. ಪ್ರಧಾನಿ ಹೇಳಿದ್ರೂ ಕೇಳೋಲ್ಲ ಎಂದು ಉದ್ಧಟತನ ಪ್ರದರ್ಶಿಸುತ್ತಾರೆ. ಏನು ಸರಕಾರ ಮಾಡಿದ ನಿಯಮಾವಳಿ, ಸರಕಾರದ ಒಂದು ಭಾಗವಾದ ಸಚಿವರಿಗೆ ಅನ್ವಯ ಆಗುವುದಿಲ್ಲವೇ ? ಇದು ಜನಸಾಮಾನ್ಯರ ಪ್ರಶ್ನೆಯಾಗಿದೆ.
ಇನ್ನು ಮಾಧ್ಯಮದ ಜತೆ ರಾಜಕೀಯ ಮಾತನಾಡಿದ ಸಚಿವ ಕತ್ತಿ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಸದ್ಯಕ್ಕೆ ಸಿಎಂ ಹುದ್ದೆ ಭರ್ತಿಯಾಗಿದೆಯಾಗಿದೆ. ಸಿಎಂ ಆಗುವ ಆಸೆ ಇದ್ದವರು ಸದ್ಯಕ್ಕೆ ಅದನ್ನು ತ್ಯಜಿಸಿ ಎಂದು ಲೇವಡಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಬಿಜೆಪಿ ಪಕ್ಷದಲ್ಲಿ ಸಮನ್ವಯದ ಕೊರತೆಯಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತೇವೆ. ಸಂಪುಟ ವಿಸ್ತರಣೆ ವಿಷಯ ಸಿಎಂ ಬೊಮ್ಮಾಯಿ ಅವರಿಗೆ ಬಿಟ್ಟ ವಿಚಾರ. 4 ಸ್ಥಾನಗಳು ಖಾಲಿಯಿದ್ದು, ಅವುಗಳ ಭರ್ತಿ ಸಿಎಂ ವಿವೇಚನೆಗೆ ಬಿಟ್ಟದ್ದು ಎಂದಿದ್ದಾರೆ.
ಪಡಿತರದಾರರಿಗೆ ಜೋಳ ಅಥವಾ ರಾಗಿ ವಿತರಣೆ ಮಾಡ್ತೇವೆ. ಶೀಘ್ರದಲ್ಲೇ ಬೇಡಿಕೆಯನ್ನು ಗುಣವಾಗಿ ವಿತರಣೆ ಮಾಡುತ್ತೇವೆ. ಬೆಳಗಾವಿ ಜಿಲ್ಲೆ ಮೂರು ಭಾಗವಾಗಬೇಕು. ಮೂರು ಜಿಲ್ಲೆಗಳಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಕೂಡ ಸಚಿವ ಉಮೇಶ್ ಕತ್ತಿ ನುಡಿದಿದ್ದಾರೆ.